ಕರ್ನಾಟಕ

ಖಾರೀಫ್ ಬೆಳೆಗಳಿಗೆ ಕಟ್ಟು ನೀರಿನ ಪದ್ಧತಿಯಲ್ಲಿ ನಾಲೆಗಳಲ್ಲಿ ನೀರು

ಮಂಡ್ಯ (ಆ.10): ಕೃಷ್ಣರಾಜಸಾಗರ ಜಲಾಶಯ ಯೋಜನೆಯಡಿಯಲ್ಲಿ 2018ರ ಖಾರೀಫ್ ಬೆಳೆಗಳಿಗೆ ನೀರು ಹರಿಸುವ ಸಂಬಂಧ ದಿನಾಂಕ:11-07-2018 ರಂದು ವಿಧಾನ ಸೌಧ, ಬೆಂಗಳೂರು ಇಲ್ಲ್ಲಿ ಸನ್ಮಾನ್ಯ ಶ್ರೀ ಸಿ.ಎಸ್.ಪುಟ್ಟರಾಜು, ಮಾನ್ಯ ಸಣ್ಣ ನೀರಾವರಿ ಸಚಿವರು, ಕರ್ನಾಟಕ ಸರ್ಕಾರ, ಮೇಲುಕೋಟೆ ವಿಧಾನ ಸಭಾ ಕ್ಷೇತ್ರ, ಪಾಂಡವಪುರ ಹಾಗೂ ಅಧ್ಯಕ್ಷರು, ಕೃಷ್ಣರಾಜಸಾಗರ ಜಲಾಶಯ ಅಚ್ಚುಕಟ್ಟು ಪ್ರದೇಶದ ನೀರಾವರಿ ಸಲಹಾ ಸಮಿತಿ ಇವರ ಅಧ್ಯಕ್ಷತೆಯಲ್ಲಿ ಹಾಗೂ ಕೃಷ್ಣರಾಜಸಾಗರ ಜಲಾಶಯ ಯೋಜನೆ ಅಚ್ಚುಕಟ್ಟು ಪ್ರದೇಶದ ಮಾನ್ಯ ಸಚಿವರು, ಮಾನ್ಯ ವಿಧಾನ ಸಭಾ ಶಾಸಕರು, ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ ಅಧಿಕಾರಿ ಸದಸ್ಯರ ಉಪಸ್ಥಿತಿಯಲ್ಲಿ ಜರುಗಿದ ಸಭೆಯಲ್ಲಿ ಕೈಗೊಂಡ ತೀರ್ಮಾನದಂತೆ ದಿನಾಂಕ 21-06-2018 ರಿಂದ ಈವರೆಗೆ ಕೃಷ್ಣರಾಜಸಾಗರ ಯೋಜನೆಯಡಿಯ ಅಚ್ಚುಕಟ್ಟು ಪ್ರದೇಶದ ಕೆರೆಗಳನ್ನು ತುಂಬಿಸಲು ಹಾಗೂ ಬೆಳೆದು ನಿಂತಿರುವ ಬೇಸಿಗೆಯ ಕಬ್ಬಿನ ಬೆಳೆಯನ್ನು ರಕ್ಷಿಸುವ ಸಲುವಾಗಿ ನೀರನ್ನು ಹರಿಸಲಾಗುತ್ತಿರುವುದನ್ನು ದಿನಾಂಕ:19-07-2018ರವರೆಗೆ ಮುಂದುವರೆಸಿ, ತದನಂತರ, ದಿನಾಂಕ 20.07.2018 ರಿಂದ 16.12.2018ರ ವರೆಗೆ ಖಾರೀಫ್ 2018ರ ಖಾರೀಫ್ ಬೆಳೆಗಳಿಗೆ ಕಟ್ಟು ನೀರಿನ ಪದ್ಧತಿಯಲ್ಲಿ ನಾಲೆಗಳಲ್ಲಿ ನೀರು ಹರಿಸಲು ತೀರ್ಮಾನಿಸಲಾಗಿರುತ್ತದೆ ಎಂದು ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಇಂಜಿನಿಯರ್ ಅಮರನಾಥ್ ಅವರು ತಿಳಿಸಿದ್ದಾರೆ.

ದಿನಾಂಕ 19-7-2018ರವರೆಗೆ ಬೆಳೆದು ನಿಂತಿರುವ ಕಬ್ಬಿನ ಬೆಳೆ ಮತ್ತು ಕೆರೆಗಳನ್ನು ತುಂಬಿಸುವ ಸಲುವಾಗಿ ಹರಿಸಲಾಗುತ್ತಿರುವ ನೀರನ್ನು ದಿನಾಂಕ 20-7-2018 ರಿಂದ ಖಾರೀಫ್ ಬೆಳೆಗೆ ನೀರನ್ನು ಹರಿಸಲಾಗುತ್ತಿರುತ್ತದೆ. ಈ ಪ್ರಕಟಣೆಯು ಕಾವೇರಿ ಜಲ ವಿವಾದದ ಅಂತಿಮ ತೀರ್ಪಿಗೆ ಬದ್ಧವಾಗಿದ್ದು, ಕಾವೇರಿ ನಿರ್ವಹಣಾ ಮಂಡಳಿಯ ಸಲಹೆಯಂತೆ ಸಿ.ಡಬ್ಲ್ಯೂ.ಡಿ.ಟಿ. ಹಂಚಿಕೆಯನ್ವಯ ರೂಪಿಸಲಾಗಿದೆ.

ಕೃಷ್ಣರಾಜಸಾಗರ ಯೋಜನೆಯ ಅಧಿಕೃತ ಅಚ್ಚುಕಟ್ಟು ಪ್ರದೇಶಗಳಲ್ಲಿ ಒಟ್ಟು ಖಾರೀಫ್ ಅವಧಿಗೆ 175972 (40000 ಎಕರೆ ಕಬ್ಬು, 115972 ಎಕರೆ ಭತ್ತ ಮತ್ತು 20000 ಎಕರೆ ಖಾರೀಫ್ ಖುಷ್ಕಿ ಬೆಳೆ) ಎಕರೆ ಪ್ರದೇಶಕ್ಕೆ ನೀರನ್ನು ಹರಿಸಲಾಗುವುದು. ಸದರಿ ಪ್ರದೇಶವು ನಾಲಾ ಅಚ್ಚುಕಟ್ಟು ಮತ್ತು ಪಿಕಪ್ ಹಾಗೂ ಕೆರೆಗಳ ಅಚ್ಚುಕಟ್ಟು ಪ್ರದೇಶಗಳನ್ನು ಒಳಗೊಂಡಿರುತ್ತದೆ. ಬೆಳೆವಾರು ವಿವರಗಳನ್ನು ಆಯಾ ವಿಭಾಗ ಕಛೇರಿಯಿಂದ ಪಡೆಯಬಹುದಾಗಿರುತ್ತದೆ.

ಕೃಷ್ಣರಾಜಸಾಗರ ಜಲಾಶಯ ಯೋಜನೆಯಡಿ ಬರುವ ನದಿ ಅಣೆಕಟ್ಟೆಗಳಾದ ಚಿಕ್ಕದೇವರಾಯ, ದೇವರಾಯ, ವಿರಿಜಾ, ರಾಜಪರಮೇಶ್ವರಿ, ಬಂಗಾರದೊಡ್ಡಿ, ರಾಮಸ್ವಾಮಿ, ಮಾಧವಮಂತ್ರಿ ಹಾಗೂ ತಗ್ಗಳ್ಳಿ (ಶಿಂಷಾ) ಅಣೆಕಟ್ಟುಗಳಲ್ಲಿ ಬರುವ ಒಟ್ಟು 74200 ಎಕರೆ ಪ್ರದೇಶಗಳಿಗೆ ದಿನಾಂಕ 20.07.2018 ರಿಂದ 16.12.2018ರ ವರೆಗೆ 2018ರ ಖಾರೀಫ್ ಭತ್ತದ ಬೆಳೆಗೆ ಕಟ್ಟು ನೀರಿನ ಪದ್ಧತಿಯಲ್ಲಿ ನಾಲೆಗಳಲ್ಲಿ ನೀರು ಹರಿಸಲಾಗುತ್ತಿದೆ. ಈ ಕುರಿತು ಪ್ರತ್ಯೇಕ ಅಧಿಸೂಚನೆಯನ್ನು ಆಯಾ ವಿಭಾಗ ಮಟ್ಟದಲ್ಲಿ ಹೊರಡಿಸಲಾಗುವುದು.

ರೈತ ಬಾಂಧವರು ಈ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿ ಚಟುವಟಿಕೆ ಕೈಗೊಳ್ಳುವಾಗ ಅನುಸರಿಸಬೇಕಾದ ಪೂರ್ವಭಾವಿ ಸಿದ್ಧತೆ ಹಾಗೂ ಸೂಕ್ತ ತಳಿಯ ಬೆಳೆಗಳನ್ನು ಬೆಳೆಯುವ ಬಗ್ಗೆ ಕೃಷಿ ಅಧಿಕಾರಿಗಳ ಮಾರ್ಗದರ್ಶನ ಪಡೆಯಲು ಮತ್ತು ಅಗತ್ಯತೆಗೆ ತಕ್ಕಂತೆ ಹಿತಮಿತವಾಗಿ ನೀರು ಬಳಸಿ, ಕಾವೇರಿ ನೀರಾವರಿ ನಿಗಮ ನಿಯಮಿತದ ಅಧಿಕಾರಿಗಳೊಂದಿಗೆ ಸಹಕರಿಸಲು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: