ದೇಶಪ್ರಮುಖ ಸುದ್ದಿ

ಮುಂದಿನ ವರ್ಷವೂ ಒಂದೇ ಬಾರಿ ನೀಟ್ ನಡೆಸಲು ಚಿಂತನೆ

ಹೊಸದಿಲ್ಲಿ (ಆ.10): ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್- ನೀಟ್-ಯುಜಿಯನ್ನು ಎರಡು ಬಾರಿ ನಡೆಸುವ ಬದಲು ಒಂದೇ ಬಾರಿ ನಡೆಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಚಿಂತನೆ ನಡೆಸಿದೆ. ಜತೆಗೆ ಮುಂದಿನ ವರ್ಷದ ಮಟ್ಟಿಗೆ ಆಫ್‌ಲೈನ್ ವಿಧಾನದಲ್ಲೇ ಪರೀಕ್ಷೆ ನಡೆಸಬೇಕು ಎಂಬ ಆರೋಗ್ಯ ಸಚಿವಾಲಯದ ಪ್ರಸ್ತಾವದ ಬಗ್ಗೆ ಕೂಡಾ ಎಚ್‌ಆರ್‌ಡಿ ಪರಿಶೀಲನೆ ನಡೆಸುತ್ತಿದೆ.

2019ರಲ್ಲಿ ಕೂಡಾ ಯಥಾಸ್ಥಿತಿ ಮುಂದುವರಿಯಲಿದ್ದು, ಯಾವುದೇ ಬದಲಾವಣೆ ಇಲ್ಲ ಎಂದು ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶ ಪರೀಕ್ಷೆ ಹಾಗೂ ಎಂಜಿನಿಯರಿಂಗ್ ಪ್ರವೇಶಕ್ಕೆ ಜೆಇಇ-ಮೈನ್ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ ಹಾಗೂ ಹೊಸದಾಗಿ ರಚನೆಯಾಗಿರುವ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಇದನ್ನು ನಿರ್ವಹಿಸುತ್ತದೆ ಎಂದು ಸಚಿವ ಪ್ರಕಾಶ್ ಜಾವ್ಡೇಕರ್ ಇತ್ತೀಚೆಗೆ ಪ್ರಕಟಿಸಿದ್ದರು.

ಎನ್‌ಟಿಎ ಪರೀಕ್ಷೆಗಳು ಕಂಪ್ಯೂಟರ್ ಆಧರಿತ ಎಂದೂ ಪ್ರಕಟಿಸಲಾಗಿತ್ತು. 2019ರ ಫೆಬ್ರವರಿ ಮತ್ತು ಮೇ ತಿಂಗಳಲ್ಲಿ ಎರಡು ಬಾರಿ ಪರೀಕ್ಷೆ ನಡೆಸುವುದಾಗಿ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿತ್ತು. ಆರೋಗ್ಯ ಸಚಿವಾಲಯದ ಒತ್ತಡದ ಹಿನ್ನೆಲೆಯಲ್ಲಿ ಎರಡು ಬಾರಿ ಪರೀಕ್ಷೆ ನಡೆಸುವ ನಿರ್ಧಾರವನ್ನು ಮರು ಪರಿಶೀಲನೆ ಮಾಡಲಾಗುತ್ತಿದೆ. 2019ರಲ್ಲಿ ಪೆನ್ನು- ಕಾಗದದ ಪರೀಕ್ಷೆಯನ್ನೇ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಈ ಬಗ್ಗೆ ಅಂತಿಮ ಘೋಷಣೆ ಮುಂದಿನ ವಾರದ ವೇಳೆಗೆ ಹೊರಬೀಳುವ ನಿರಿಕ್ಷೆ ಇದೆ ಎಂದು ಹೇಳಲಾಗಿದೆ.(ಎನ್.ಬಿ)

Leave a Reply

comments

Related Articles

error: