
ಮೈಸೂರು
ದಾಖಲೆಗಳಿಲ್ಲದಿದ್ದರೆ ಗುರುತಿಸಿಕೊಳ್ಳಲು ಸಾಧ್ಯವಿಲ್ಲ : ಡಾ.ಜೆ.ವಿ. ಗಾಯತ್ರಿ
ಸಾಮಾಜಿಕ, ರಾಜಕೀಯ, ಆರ್ಥಿಕ ಹಾಗೂ ಶೈಕ್ಷಣಿಕವಾಗಿಯೂ ದಾಖಲೆಗಳು ಜೀವನದ ಒಂದು ಭಾಗ. ನಾಶವಾಗುವುದಕ್ಕೂ ಮೊದಲೆ ಅವುಗಳನ್ನು ಸಂರಕ್ಷಿಸಬೇಕು ಎಂದು ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿ ನಿವೃತ್ತ ಉಪನಿರ್ದೇಶಕಿ ಡಾ.ಜೆ.ವಿ. ಗಾಯತ್ರಿ ತಿಳಿಸಿದರು.
ಮಂಗಳವಾರ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ವತಿಯಿಂದ ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿಯ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಮತ್ತು ತಾಲೂಕು ಕಚೇರಿ ದಾಖಲೆ ಕೊಠಡಿಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಸಿಬ್ಬಂದಿಗಳಿಗೆ ದಾಖಲೆಗಳ ನಿರ್ವಹಣೆಯ ಬಗ್ಗೆ ಆಯೋಜಿಸಿದ್ದ ಕಾರ್ಯಾಗಾರವನ್ನು ಡಾ.ಜೆ.ವಿ.ಗಾಯತ್ರಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕ್ಯಾಶ್ ಲೆಸ್ ಸಮಾಜದ ನಿರ್ಮಾಣದಂತೆ ಪೇಪರ ಲೆಸ್ ಆಡಳಿತವಾಗಿ ಬದಲಾಗುವ ಕಾಲವಿನ್ನು ದೂರವಿಲ್ಲ. ಸಮಾಜವೇ ಡಿಜಿಟಲ್ ಯುಗವಾಗಿ ಬದಲಾಗುತ್ತಿದ್ದು, ಪೇಪರ್ ಇಲ್ಲದ ಆಡಳಿತ ಕಚೇರಿಗಳು ಬಂದರೂ ಬರಬಹುದು ಎಂದರು. 1982ರಲ್ಲಿ ದಾಖಲೆಗಳನ್ನು ಸಂರಕ್ಷಿಸಲು ಪತ್ರಾಗಾರ ಇಲಾಖೆ ಹುಟ್ಟಿಕೊಂಡಿತು. ಅಲ್ಲಿ ಐತಿಹಾಸಿಕ ಮೌಲ್ಯಗಳನ್ನೊಳಗೊಂಡ ದಾಖಲೆಗಳನ್ನು ಸಂರಕ್ಷಿಸಲಾಯಿತು. ಅಲ್ಲಿ ಕಾರ್ಯನಿರ್ವಹಿಸುವವರಿಗೆ ಯಾವ ರೀತಿ ದಾಖಲೆಗಳನ್ನು ಸಂರಕ್ಷಿಸಿ ಇರಿಸಬೇಕೆನ್ನುವ ಕುರಿತು ತಿಳಿಸಿಕೊಡಲಾಯಿತು ಎಂದರು.
ಬದಲಾದ ಕಾಲಘಟ್ಟದಲ್ಲಿ ಚೀನಿಯರು ಪೇಪರ್ ಬಳಕೆಯನ್ನು ತಂದರು. ನಂತರದ ದಿನಗಳಲ್ಲಿ ದಾಖಲೆಗಳನ್ನು ಸಂರಕ್ಷಿಸಿಡಲು ಲ್ಯಾಮಿನೇಷನ್ ಪ್ರಕ್ರಿಯೆಯನ್ನು ಆರಂಭಿಸಲಾಯಿತು. ಅಮೂಲ್ಯವಾದ ಮಾಹಿತಿಗಳನ್ನೊಳಗೊಂಡ ದಾಖಲೆಗಳು ನಾಶವಾಗದ ರೀತಿಯಲ್ಲಿ ಸಂರಕ್ಷಿಸಿಡಬೇಕು. ರಾಜರ ಕಾಲದ ಮಾಹಿತಿ, ಛಾಯಾಚಿತ್ರಗಳು ಸಿಕ್ಕಲ್ಲಿ ಇಲಾಖೆಗೆ ನೀಡಿ ಎಂದು ತಿಳಿಸಿದರು.
ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ ಉಪನಿರ್ದೇಶಕಿ ಡಾ.ಎಸ್.ಅಂಬುಜಾಕ್ಷಿ ಮಾತನಾಡಿ, ದಾಖಲೆಗಳಿಲ್ಲದೇ ನಮ್ಮನ್ನು ನಾವು ಗುರುತಿಸಿಕೊಳ್ಳಲು ಸಾಧ್ಯವಿಲ್ಲ. ಧಾಖಲೆಗಳು ನಮ್ಮ ಜೀವನದ ಅವಿಭಾಜ್ಯ ಅಂಗ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿ ಪತ್ರಪಾಲಕ ಡಾ.ಗವಿಸಿದ್ದಯ್ಯ ಉಪಸ್ಥಿತರಿದ್ದರು.