ಕರ್ನಾಟಕಪ್ರಮುಖ ಸುದ್ದಿ

ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ: ಕೈ-ದಳ ಮೈತ್ರಿ ಬಹುತೇಕ ಅನುಮಾನ

ಮೈಸೂರು (ಆ.10): ವಿಧಾನಸೌಧದಲ್ಲಿ ಮೈತ್ರಿ ಸರ್ಕಾರ ರಚಿಸಿರುವ ಕಾಂಗ್ರೆಸ್‍-ಜೆಡಿಎಸ್ ಪಕ್ಷಗಳು ಲೋಕಸಭೆಯಲ್ಲೂ ಮೈತ್ರಿ ಮಾಡಿಕೊಳ್ಳುವುದಾಗಿ ಮೇಲೆಮೇಲೆ ಹೇಳಿಕೇ ನೀಡುತ್ತಿವೆ. ಆದರೆ ಒಳಗೊಳಗೇ ಬೇರೆಯದ್ದೇ ಲೆಕ್ಕಾಚಾರವಿದೆ ಎನ್ನುತ್ತಿವೆ ರಾಜಕೀಯ ಮೂಲಗಳು.

ಲೋಕಸಭಾ ಚುನಾವಣೆಗೂ ಜೆಡಿಎಸ್ ಜತೆಗೆ ದೋಸ್ತಿ ಮುಂದುವರಿಯಲಿದೆ ಎಂದು ಕೈ ಪಡೆ ಪುನರುಚ್ಚರಿಸುತ್ತಿದ್ದರೂ ತಳಮಟ್ಟದಲ್ಲಿ ಮಾತ್ರ ದೋಸ್ತಿಗೆ ವಿರೋಧ ವ್ಯಕ್ತವಾಗುತ್ತಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಈ ಬಿಸಿ ಇನ್ನಷ್ಟು ಹೆಚ್ಚಾಗಿದೆ. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟರೆ ಕಾಂಗ್ರೆಸ್‌ ಸಂಘಟನೆಗೆ ಹಿನ್ನಡೆ ಉಂಟಾಗಲಿದೆ ಎಂಬ ಆತಂಕ ಕೈ ಮುಖಂಡರಾದ್ದಾಗಿದೆ.

ಕಾಂಗ್ರೆಸ್ ನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿ.ಎಚ್‌.ವಿಜಯಶಂಕರ್‌ ಅವರನ್ನು ಅಭ್ಯರ್ಥಿಯಾಗಿಸುವ ಬಗ್ಗೆಯೂ ಚರ್ಚೆಯಾಗಿದೆ. ಈ ಹಿಂದೆ ವಿಧಾನಸಭೆ ಚುನಾವಣೆ ವೇಳೆ ಇದೇ ನನ್ನ ಕಡೇ ಚುನಾವಣೆ. ರಾಷ್ಟ್ರ ರಾಜಕಾರಣಕ್ಕೂ ಹೋಗುವುದಿಲ್ಲವೆಂದು ಹೇಳಿದ್ದ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್‌ ಹೈಕಮಾಂಡ್ ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯರನ್ನಾಗಿ ನೇಮಿಸಿರುವುದರಿಂದ ಹೈಕಮಾಂಡ್ ಮಾತಿಗೆ ಕಟ್ಟುಬಿದ್ದು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಾರಾ ಎಂಬ ಕುತೂಹಲವೂ ಇದೆ.

ಸಿದ್ದರಾಮಯ್ಯ ವಿರುದ್ಧ ಅಸಮಾಧಾನಗೊಂಡು ಕಾಂಗ್ರೆಸ್‌ನಿಂದ ಹೊರಹೋದ ಎಚ್‌.ವಿಶ್ವನಾಥ್‌ ಅವರ ಸ್ಥಾನಕ್ಕೆ ಅದೇ ಸಮುದಾಯದ ಮಾಜಿ ಸಚಿವ ಸಿ.ಎಚ್‌.ವಿಜಯಶಂಕರ್‌ ಅವರನ್ನು ಲೋಕಸಭೆ ಚುನಾವಣೆಗೆ ಟಿಕೆಟ್ ಕೊಡಿಸುವ ಭರವಸೆಯೊಂದಿಗೆ ಕಾಂಗ್ರೆಸ್‌ಗೆ ಕರೆತಂದಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದ ಟಿಕೆಟ್ ಹಂಚಿಕೆ ಸಿದ್ದರಾಮಯ್ಯ ಅವರ ನಿರ್ಧಾರದ ಮೇಲೆ ನಿಂತಿದೆ. ಇತ್ತ ಜೆಡಿಎಸ್‍ನಿಂದ ಸಚಿವ ಜಿ.ಟಿ.ದೇವೇಗೌಡರ ಪುತ್ರ ಡಿಸಿಸಿ ಬ್ಯಾಂಕ್‌ ನಿರ್ದೇಶಕ ಜಿ.ಡಿ.ಹರೀಶ್‌ ಗೌಡ ಅವರಿಗೆ ಟಿಕೆಟ್ ನೀಡಬೇಕೆಂದು ಪಕ್ಷದ ಕೆಲ ಮುಖಂಡರು ಒತ್ತಾಯಿಸಿದ್ದಾರೆ.

ಆದರೆ, ಜಿ.ಟಿ.ದೇವೇಗೌಡರೇ ಲೋಕಸಭೆ ಚುನಾವಣೆಗೆ ತಮ್ಮ ಪುತ್ರ ಸ್ಪರ್ಧಿಸುವುದಿಲ್ಲವೆಂದು ಹೇಳಿದ್ದಾರೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಸಚಿವ ಎಚ್‌.ಡಿ.ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಮತ್ತೆ ಸಕ್ರಿಯವಾಗಿದ್ದು, ಪ್ರಜ್ವಲ್‍ಗೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಟಿಕೆಟ್ ನೀಡುವಂತೆ ಯುವ ಬ್ರಿಗೇಡ್ ಮೂಲಕ ಅಭಿಪ್ರಾಯ ಸಂಗ್ರಹ ಮಾಡಲಾಗಿದೆ.

ಮೈಸೂರು ಜಿಲ್ಲೆ ರಾಜಕಾರಣದಲ್ಲಿ ಇಂತಹ ಪ್ರಯತ್ನ ಹೊಸದೇನಲ್ಲ. ಪ್ರಜ್ವಲ್ ರೇವಣ್ಣ ಅವರ ಹೆಸರು ಜಿಲ್ಲೆಯಲ್ಲಿ ಕೇಳಿಬಂದಿರುವುದು ಇದು ಎರಡನೇ ಬಾರಿ. ಈ ಹಿಂದೆ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಹುಣಸೂರು ಕ್ಷೇತ್ರಕ್ಕೆ ಪ್ರಜ್ವಲ್ ಹೆಸರು ಕೇಳಿಬಂದಿತ್ತು. ಜತೆಗೆ ಚುನಾವಣೆಗೂ ಮುನ್ನ ತಿಂಗಳು ಕಾಲ ಯುವ ಪಡೆ ಜತೆಗೆ ಕ್ಷೇತ್ರದಲ್ಲಿ ಪ್ರವಾಸವನ್ನೂ ಆರಂಭಿಸಿದ್ದರು.

ತಮ್ಮ ಪುತ್ರ ಜಿ.ಡಿ.ಹರೀಶ್‌ ಗೌಡ ಅವರಿಗಾಗಿ ಹುಣಸೂರಿನ ಕಣ ಸಜ್ಜುಗೊಳಿಸಿದ್ದ ಜಿ.ಟಿ.ದೇವೇಗೌಡ ಅವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಆದರೆ, ಎಚ್‌.ವಿಶ್ವನಾಥ್‌ ಕಾಂಗ್ರೆಸ್‌ ತೊರೆದು ಜೆಡಿಎಸ್ ಸೇರಿದ್ದರಿಂದ ಹುಣಸೂರು ಕ್ಷೇತ್ರವನ್ನು ಜಿ.ಟಿ.ದೇವೇಗೌಡ ಅವರು, ಎಚ್‌.ವಿಶ್ವನಾಥ್‌ ಅವರಿಗೆ ಬಿಟ್ಟುಕೊಡಬೇಕಾಯಿತು. (ಎನ್.ಬಿ)

Leave a Reply

comments

Related Articles

error: