ಕರ್ನಾಟಕಪ್ರಮುಖ ಸುದ್ದಿ

ಚಾಲ್ತಿ ಸಾಲ ಮನ್ನಾ ಮಾಡಲು ಸಚಿವ ಸಂಪುಟದಲ್ಲಿ ನಿರ್ಧರಿಸಲಾಗಿದೆ : ಮುಖ್ಯಮಂತ್ರಿ ಸ್ಪಷ್ಟನೆ

ಬೆಂಗಳೂರು (ಆ.10): ರಾಜ್ಯದ ರೈತರು ಸಹಕಾರಿ ಬ್ಯಾಂಕಿನಲ್ಲಿ ಕಳೆದ ಜುಲೈ 10ರ ವರೆಗೆ ಪಡೆದಿರುವ 1 ಲಕ್ಷ ರೂ. ವರೆಗಿನ ಚಾಲ್ತಿ ಸಾಲ ಸಂಪೂರ್ಣ ಮನ್ನಾ ಮಾಡಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಒಟ್ಟು 10,734 ಕೋಟಿ ಸಾಲದಲ್ಲಿ 9448 ಕೋಟಿ ರೂ. ಸಾಲ ಮನ್ನಾ ಆಗಲಿದೆ. ಇದರಿಂದ ಸಹಕಾರಿ ಸಂಘಗಳ ಸದಸ್ಯರಾಗಿರುವ 22 ಲಕ್ಷ ರೈತರಲ್ಲಿ 20.38 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಈ ಸಾಲ ಮನ್ನಾಕ್ಕೆ ಹಣದ ಕೊರತೆ ಇರುವುದಿಲ್ಲ. ಸಾಲ ನವೀಕರಣ ಸಂದರ್ಭದಲ್ಲಿ ಸಹಕಾರ ಇಲಾಖೆ ಪ್ರತಿ ತಿಂಗಳು ಸಲ್ಲಿಸುವ ಬೇಡಿಕೆಗೆ ಅನುಗುಣವಾಗಿ ಹಣಕಾಸು ಇಲಾಖೆ ಅನುದಾನ ಬಿಡುಗಡೆ ಮಾಡಲಿದೆ ಎಂದು ತಿಳಿಸಿದರು.

ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಎರಡನೇ ಹಂತವಾಗಿ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ 6500 ಕೋಟಿ ರೂ. ಗಳ ಸಾಲ ಮನ್ನಾಕ್ಕೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲಿದೆ. ಈ ಕುರಿತು ಈಗಾಗಲೇ ಅಗತ್ಯ ಪ್ರಕ್ರಿಯೆಗಳು ಪ್ರಾರಂಭವಾಗಿದ್ದು, ಬ್ಯಾಂಕರುಗಳ ಜೊತೆ ಚರ್ಚಿಸಲಾಗುತ್ತಿದೆ ಎಂದು ತಿಳಿಸಿದರು.

ಸಾಲಮನ್ನಾ ಕುರಿತ ಮಾರ್ಗಸೂಚಿಗಳ ಬಗ್ಗೆಯೂ ಸಂಪುಟ ಸಭೆಯಲ್ಲಿ ಚರ್ಚೆಯಾಗಿದ್ದು. ಒಂದು ಕುಟುಂಬಕ್ಕೆ ಒಂದು ಲಕ್ಷ ರೂ. ವರೆಗಿನ ಸಾಲ ಮನ್ನಾ ಎಂಬ ಅಂಶವನ್ನು ಕೈಬಿಡಲಾಗಿದೆ ಎಂದು ತಿಳಿಸಿದರು. 2018 ಫೆಬ್ರುವರಿಯಲ್ಲಿ ಮಂಡಿಸಲಾದ ಲೇಖಾನುದಾನ ಆಯವ್ಯಯದಲ್ಲಿನ ಯೋಜನೆಗಳನ್ನು ಕೈಬಿಟ್ಟಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: