
ಮೈಸೂರು
ಪರಿಸರ ಜಾಗೃತಿ ಪ್ರತಿಯೊಬ್ಬರ ಕರ್ತವ್ಯವಾಗಿದೆ: ಪ್ರೊ.ಕೆ.ಎಸ್.ರಂಗಪ್ಪ
ಪರಿಸರ ಮತ್ತು ಮನುಷ್ಯನ ಸಂಬಂಧ ಕೊಡು-ಕೊಳ್ಳುವಿಕೆಯಿದ್ದಂತೆ. ಇದನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸದಿದ್ದರೆ ಮುಂದಿನ ದಿನಗಳಲ್ಲಿ ಅಗಾಧ ದುಷ್ಪರಿಣಾಮ ಎದುರಿಸಬೇಕಾಗುವುದು ಎಂದು ಮೈಸೂರು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ತಿಳಿಸಿದರು.
ಅವರು ಮಂಗಳವಾರ ಮಾನಸಗಂಗೋತ್ರಿಯ ವಿಜ್ಞಾನ ಭವನ ಸಭಾಂಗಣದಲ್ಲಿ ನಡೆದ ಪರಿಸರ, ನಿಸರ್ಗ ಸಂರಕ್ಷಣಾ ಸಂಸ್ಥೆಯಿಂದ ಆಯೋಜಿಸಿದ್ದ ಪರಿಸರ ಮನನ ಕಾರ್ಯಾಗಾರವನ್ನುದ್ದೇಶಿಸಿ ಮಾತನಾಡಿ, ತ್ಯಾಜ್ಯ ವಿಲೇವಾರಿ ಸೇರಿದಂತೆ ಪ್ರಕೃತಿದತ್ತ ಸಂಪತ್ತನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ವಿವಿಯ ಕ್ಯಾಂಪಸ್ನಲ್ಲಿ ನನ್ನ ಕಾಲಾವಧಿಯಲ್ಲಿ ಸುಮಾರು 3 ಸಾವಿರ ಗಿಡಗಳನ್ನು ನೆಟ್ಟು ಬೆಳೆಸಲಾಗುತ್ತಿದೆ. ಪರಿಸರ ಜಾಗೃತಿ ನಿಟ್ಟಿನಲ್ಲಿ ವಿವಿಯ ಎನ್ಎಸ್ಎಸ್ ಘಟಕವೂ ಉತ್ತಮ ಕಾರ್ಯನಿರ್ವಹಿಸುತ್ತಿದ್ದು ಇದಕ್ಕಾಗಿ ‘ಇಂದಿರಾಗಾಂಧಿ’ ಪ್ರಶಸ್ತಿಯೂ ಲಭಿಸಿದೆ. ಪ್ರಕೃತಿ ಬಗ್ಗೆ ಗ್ರಾಮೀಣರಿಗೆ ಜಾಗೃತಿ ಮೂಡಿಸಲು ಕಳೆದ ನಾಲ್ಕು ವರ್ಷಗಳಿಂದಲೂ ಎನ್ಎಸ್ಎಸ್ ಘಟಕದ ಕಾರ್ಯವೂ ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿ, ಪರಿಸರ ಕಾಳಜಿ ಬಗ್ಗೆ ಜಾಗೃತಿ ಮೂಡಿಸಲು ವಿವಿ ಸದಾ ಸನ್ನದ್ಧವಾಗಿದೆ ಎಂದು ತಿಳಿಸಿದರು.
ಮೈಸೂರು ವಿವಿಯಡಿಯ ಕಾಲೇಜುಗಳ ಪ್ರಾಂಶುಪಾಲರು ಕಾರ್ಯಾಗಾರನ್ನು ಸದುಪಯೋಗಪಡಿಸಿಕೊಂಡು ಮುಂದಿನ ದಿನಗಳಲ್ಲಿ ಎನ್.ಎಸ್.ಎಸ್ ಘಟಕದ ಸಹಯೋಗದೊಂದಿಗೆ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಮೂಡಿಸಬೇಕು ಎಂದು ಕರೆ ನೀಡಿದರು.
ಜಾಗತಿಕ ತಾಪಮಾನದಿಂದ ಹಿಮ ಪರ್ವತಗಳು ಕರಗುತ್ತಿದ್ದು ಮುಂದಿನ ದಿನಗಳಲ್ಲಿ ಜಾಗತಿಕ ನಕ್ಷೆಯನ್ನು ಹೊಸದಾಗಿ ಬರೆಯಬೇಕಾಗುವುದು. ಪ್ರತಿ ಗಂಟೆಗೆ 25 ಕೆಜಿಯಷ್ಟು ಪ್ಲಾಸ್ಟಿಕ್ ಸಮುದ್ರವನ್ನು ಸೇರುತ್ತಿದ್ದು ಜಲಚರಗಳ ಜೀವಕ್ಕೆ ಕೂತ್ತೊದಗಿದೆ ಎಂದು ಸಂಸ್ಥೆಯ ಕಾರ್ಯದರ್ಶಿ ಈಶ್ವರ್ ಪ್ರಸಾದ್ ತಿಳಿಸಿದರು.
ಕಾರ್ಯಾಗಾರದಲ್ಲಿ ಹಿರಿಯ ಪತ್ರಕರ್ತ ಹಾಗೂ ಪರಿಸರ ವಿಚಾರವಾದಿ ನಾಗೇಶ್ ಹೆಗಡೆ, ಮೈಸೂರು ವಿವಿಯ 226 ಕಾಲೇಜುಗಳ ಪ್ರಾಂಶುಪಾಲರು, ವಿವಿಯ ಎನ್.ಎಸ್.ಎಸ್ ಘಟಕದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.