ದೇಶಪ್ರಮುಖ ಸುದ್ದಿ

ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ  ರಾಜ್ಯಕ್ಕೆ  ಬಿಡುಗಡೆಗೆ ಮಾಡಬೇಕಿರುವ  ಬಾಕಿ ಅನುದಾನಕ್ಕೆ  ಸಂಸದರ ಒತ್ತಾಯ

ದೇಶ(ನವದೆಹಲಿ)ಆ.10:- ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ  ಕೇಂದ್ರದಿಂದ ಬಾಕಿ ಇರುವ ಅನುದಾನ 1090.12 ಕೋಟಿ ರೂ. ರಾಜ್ಯಕ್ಕೆ ತಕ್ಷಣವೇ ಬಿಡುಗಡೆ ಮಾಡಬೇಕೆಂದು  ಸಂಸದ ಆರ್ ಧ್ರುವನಾರಾಯಣ ಅವರು ಸಂಸತ್ತಿನ ಶೂನ್ಯವೇಳೆಯಲ್ಲಿ ಆಗ್ರಹಿಸಿದರು.
2015-16ರ ಆರ್ಥಿಕ ವರ್ಷದಲ್ಲಿ ಕೇಂದ್ರವು 1946 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕಿತ್ತು. ಆದರೆ, 991.55 ಕೋಟಿ ರೂ. ಮಾತ್ರ ಅನುದಾನ ಬಿಡುಗಡೆ ಮಾಡಲಾಗಿದೆ. ಬರಗಾಲದ ಸಂದರ್ಭದಲ್ಲಿ ಉದ್ಯೋಗಾವಕಾಶ ಒದಗಿಸುವ ಯೋಜನೆಗೆ ಬೆಂಬಲವಾಗಿ ರಾಜ್ಯ ಸರ್ಕಾರವು ತನ್ನ ಪಾಲಿನ 153.80 ಕೋಟಿ ರೂ.ಗಳೊಂದಿಗೆ ಹೆಚ್ಚುವರಿಯಾಗಿ 750 ಕೋಟಿ ರೂ. ಅನುದಾನವನ್ನು ಈ ಯೋಜನೆಗೆ ಬಿಡುಗಡೆ ಮಾಡಿದೆ.  2016-17ರ ಅವಧಿಯಲ್ಲಿ ಈ ಯೋಜನೆಯಡಿ ಕೇಂದ್ರ ಬಿಡುಗಡೆ ಮಾಡಬೇಕಾಗಿರುವ 3255.30 ಕೋಟಿ ರೂ.ಗಳಲ್ಲಿ 2261.11 ಕೋಟಿ ರೂ. ಅನುದಾನ ಮಾತ್ರ ಬಿಡುಗಡೆ ಮಾಡಲಾಗಿದೆ.
ಆ ಸಂದರ್ಭ ರಾಜ್ಯದಲ್ಲಿನ ಬರಗಾಲ ಪರಿಸ್ಥಿತಿಯನ್ನು ನಿಭಾಯಿಸುವ ದೃಷ್ಟಿಯಿಂದ ಈ ಯೋಜನೆಯಡಿ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 1425 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಅನುದಾನವನ್ನು  ಕೇಂದ್ರ ಬಿಡುಗಡೆ ಮಾಡುವ ಅಗತ್ಯವಿದೆ.
ಕೇಂದ್ರದೊಂದಿಗೆ ರಾಜ್ಯವೂ ಹಲವು ಬಾರಿ ಪತ್ರ ವ್ಯವಹಾರ ಮಾಡಿದ ನಂತರವೂ 1090.12    ಕೋಟಿ ರೂ. ಕೇಂದ್ರದಿಂದ ಬಿಡುಗಡೆಗೆ  ಬಾಕಿ ಇದ್ದು, ಬಾಕಿ ಅನುದಾನವನ್ನು ಶೀಘ್ರವಾಗಿ ಬಿಡುಡಗೆ ಮಾಡಬೇಕೆಂದು ಆಗ್ರಹಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: