ಪ್ರಮುಖ ಸುದ್ದಿ

ಅಕ್ಟೋಬರ್ 15 ರಿಂದ 21ರವರೆಗೆ ‘ಬೆಂಗಳೂರು ಪುಸ್ತಕೋತ್ಸವ 2018’

ರಾಜ್ಯ(ಬೆಂಗಳೂರು), ಆ. 11:- ಬೆಂಗಳೂರು ಪುಸ್ತಕ ಮಾರಾಟಗಾರರು, ಪ್ರಕಾಶಕರ ಸಂಘ ಮತ್ತು ಇಂಡ್ಯಾ ಸಂಸ್ಥೆಗಳ ಆಶ್ರಯದಲ್ಲಿ ಅಕ್ಟೋಬರ್ 15 ರಿಂದ 21ರವರೆಗೆ ನಗರದ ಅರಮನೆ ಮೈದಾನದ ತ್ರಿಪುರಾ ವಾಸಿನಿಯಲ್ಲಿ ‘ಬೆಂಗಳೂರು ಪುಸ್ತಕೋತ್ಸವ 2018’  ನಡೆಯಲಿದೆ. ಜನರಲ್ಲಿ ಓದುವ ಹವ್ಯಾಸವನ್ನು ಉತ್ತೇಜಿಸುವ ಆಶಯದೊಂದಿಗೆ ಪುಸ್ತಕೋತ್ಸವ ನ‌ಡೆಸಲಾಗುತ್ತಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

7 ದಿನಗಳ ಪುಸ್ತಕೋತ್ಸವದಲ್ಲಿ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಬಂಗಾಳಿ, ಸಂಸ್ಕೃತ, ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಸೇರಿದ ಪುಸ್ತಕಗಳನ್ನು ಮಾರಾಟ ಮಾಡಲಾಗುವುದು. 350 ಮಳಿಗೆಗಳನ್ನು ತೆರೆಯಲಾಗುವುದು ಎಂದು ತಿಳಿಸಿದರು. ನಗರದಲ್ಲಿ ದೊಡ್ಡ ಪ್ರಮಾಣದಲ್ಲಿ 2015 ರಲ್ಲಿ ನಡೆದ ಅಂತಾರಾಷ್ಟ್ರೀಯ ಉತ್ಸವವೇ ಕೊನೆಯಾಗಿತ್ತು. ಕಾಗದದ ಕೊರತೆಯಿಂದಾಗಿ ನಂತರದಲ್ಲಿ ದೊಡ್ಡ ಪ್ರಮಾಣದ ಪುಸ್ತಕ ಉತ್ಸವಗಳು ನಡೆಯಲಿಲ್ಲ. ಇದನ್ನು ಗಮನಿಸಿ ಅರಮನೆ ಮೈದಾನದಲ್ಲಿ ಬೃಹತ್ ಪ್ರಮಾಣದ ಪುಸ್ತಕೋತ್ಸವ ನಡೆಸಲು ನಿರ್ಧರಿಸಲಾಗಿದೆ ಎಂದರು. ಪುಸ್ತಕೋತ್ಸವದಲ್ಲಿ ಮೂರು ದಿನಗಳ ಕನ್ನಡ ಸಾಹಿತ್ಯೋತ್ಸವ ಕೂಡ ನಡೆಯಲಿದೆ. ಸಾಂಸ್ಕೃತಿಕ ಮಹತ್ವವನ್ನು ಒಳಗೊಂಡ ಮನರಂಜನೆ, ಕವಿಗೋಷ್ಠಿ, ವಿಚಾರಗೋಷ್ಠಿಗಳು ನಡೆಯಲಿವೆ ಎಂದರು. ಪುಸ್ತಕೋತ್ಸವದಲ್ಲಿ ಶೇ. 15 ರಷ್ಟು ರಿಯಾಯಿತಿಯನ್ನು ಕಡ್ಡಾಯಗೊಳಿಸಲಾಗಿದೆ. ಶೇ. 50 ರಷ್ಟರವರೆಗೆ ರಿಯಾಯಿತಿ ನೀಡುವಂತೆ ಕುವೆಂಪು ಭಾಷಾ ಭಾರತಿ, ಕನ್ನಡ ಸಾಹಿತ್ಯ ಪರಿಷತ್, ಕೇಂದ್ರ ಸಾಹಿತ್ಯ ಅಕಾಡೆಮಿ ಸೇರಿದಂತೆ, ವಿವಿಧ ಸಂಸ್ಥೆಗಳ ಮುಖ್ಯಸ್ಥರಿಗೆ ಮನವಿ ಮಾಡಲಾಗಿದೆ ಎಂದು ಹೇಳಿದರು. ಬೆಂಗಳೂರು ಪುಸ್ತಕ ಮಾರಾಟಗಾರರು ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ಎ.ಎಂ. ರಾಮಚಂದ್ರ ಮಾತನಾಡಿ, ಪುಸ್ತಕೋತ್ಸವದಲ್ಲಿ ಹಲವು ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗುವುದು. ಕೈಬರಹ ಕುರಿತ ಕಾರ್ಯಾಗಾರಗಳು, ವಿಚಾರ ವಿನಿಮಯ, ಸಂವಾದ, ಉಪನ್ಯಾಸಗಳು, ಬಗೆಬಗೆಯ ಸ್ಪರ್ಧೆಗಳು ನಡೆಯಲಿವೆ ಎಂದು ಹೇಳಿದರು. ಪುಸ್ತಕೋತ್ಸವದಲ್ಲಿ ಶೇ. 100ಕ್ಕೂ ಹೆಚ್ಚು ಮಳಿಗೆಗಳನ್ನು ಕನ್ನಡ ಭಾಷಾ ಪುಸ್ತಕಗಳಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ಹೇಳಿದರು. ಪ್ರತಿ ಪುಸ್ತಕ ಮಳಿಗೆಗಳಿಗೂ ಬಿಬಿಎಂಪಿಯಿಂದ ತಲಾ 1 ಲಕ್ಷ ರೂ. ಮೌಲ್ಯದ ಉಚಿತ ವಿಮೆ. ಪುಸ್ತಕ ಮಳಿಗೆಗಳಲ್ಲಿ ಪುಸ್ತಕ ಕಪಾಟುಗಳ ಅನುಕೂಲ. ನಿರಂತರ ವಿದ್ಯುತ್ ಪೂರೈಕೆ. ಪ್ರತಿದಿನವೂ ಪುಸ್ತಕ ಬಿಡುಗಡೆಯಾಗಲಿವೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ, ಇಂಡಿಯಾ ಕಾಮಿಕ್ಸ್‌ನ ಕಾರ್ಯಕ್ರಮ ನಿರ್ದೇಶಕ ಡಿ.ಎಸ್. ರಘುರಾಮ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: