ಪ್ರಮುಖ ಸುದ್ದಿಮೈಸೂರು

ಸಿದ್ದರಾಮಯ್ಯನವರನ್ನು ಸೋಲಿಸಿದ್ದೇ ಡಾ.ಜಿ.ಪರಮೇಶ್ವರ್ : ಹೊಸ ಬಾಂಬ್ ಸಿಡಿಸಿದ ಕೆ.ಎಸ್.ಈಶ್ವರಪ್ಪ

ಮೈಸೂರು,ಆ.11:- ಅತಿಥಿಗಳ ಸತ್ಕಾರದ ಹೆಸರಿನಲ್ಲಿ ತೆರಿಗೆ ಹಣ ಲೂಟಿಯಾಗಿದೆ. ಮುಖ್ಯಮಂತ್ರಿಗಳು ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ನಾಯಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.

ಮೈಸೂರಿನ ಖಾಸಗಿ ಹೋಟೆಲ್ ನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ  ಮುಖ್ಯಮಂತ್ರಿ ಪದಗ್ರಹಣ ಸಂದರ್ಭದಲ್ಲಿ ಗಣ್ಯರ ಹೋಟೆಲ್ ಬಿಲ್ ದುಬಾರಿ ಹಿನ್ನೆಲೆ ಕುರಿತು ಪ್ರತಿಕ್ರಿಯಿಸಿ ಈ ಸರ್ಕಾರದಲ್ಲಿ ಎಲ್ಲಾ ರೀತಿಯಲ್ಲೂ ಲೂಟಿ ನಡೆಯುತ್ತಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ರೈತರ ಗದ್ದೆಯಲ್ಲಿ ಕುಮಾರಸ್ವಾಮಿ ಭತ್ತ ನಾಟಿ ಮಾಡೋದು ಗಿಮಿಕ್. ನಾಟಿ ಮಾಡಿ ಕುಮಾರಸ್ವಾಮಿ  ನಾಟಕ ಮಾಡುತ್ತಿದ್ದಾರೆ. ಮೊದಲು ಬಗರ ಹುಕುಂ ರೈತರಿಗೆ ಭೂಮಿ ಕೊಡಿ ಎಂದರು ಈಶ್ವರಪ್ಪ ಪೆದ್ದ, ಸಂವಿಧಾನ ಗೊತ್ತಿಲ್ಲ ಅಂತಾರೆ.ನಿಮಗೆ ಕಾನೂನು ಗೊತ್ತಾ, ನಾನು ಏ ಸಿದ್ದರಾಮಯ್ಯ ಎಂದು ಏಕವಚನದಲ್ಲಿ ಮಾತನಾಡಬಹುದು. ಆದರೆ ನಮ್ಮ ಪಕ್ಷದ ಸಂಸ್ಕೃತಿ ಅಲ್ಲ. ಸಿದ್ದರಾಮಯ್ಯ ಪೆದ್ದರಾಮಯ್ಯ, ದಡ್ಡ ಎಂದು ಕರಿಬೇಕೋ ಎಂದ ಅವರು ಮತ್ತೆ ಏಕ ವಚನದಲ್ಲಿ ಮಾತನಾಡಿದರೆ ಕೆಟ್ಟ ಪದ ಬಳಸಬೇಕಾಗುತ್ತೆ ಎಂದರು. ನೀತಿ ಸಂಹಿತೆ ವೇಳೆ ಸಮಾಜಕಲ್ಯಾಣ,ಪೊಲೀಸ್, ಕಂದಾಯ ಇಲಾಖೆಗಳಲ್ಲಿ ವರ್ಗಾವಣೆಯಾಗುತ್ತಿದೆ. ಇದೇನಾ ಸಿದ್ದರಾಮಯ್ಯನವರೇ  ಸಂವಿಧಾನ ಎಂದು ಪ್ರಶ್ನಿಸಿದರು.

ಸಿದ್ದರಾಮಯ್ಯನವರಿಗೆ ಸೋತರೂ ಬುದ್ಧಿ ಬಂದಿಲ್ಲ. ಸಿದ್ದರಾಮಯ್ಯನವರನ್ನು ಸೋಲಿಸಿದ್ದೇ ಡಾ.ಜಿ.ಪರಮೇಶ್ವರ್ ಎಂದು ಹೊಸ ಬಾಂಬ್ ಸಿಡಿಸಿದರು. ಕೊರಟಗೆರೆಯಲ್ಲಿ ಪರಮೇಶ್ವರ್ ಸೋಲಿಸಿದ್ದು ಸಿದ್ದರಾಮಯ್ಯ. ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯನವರನ್ನು ಸೋಲಿಸಿದ್ದು ಕೂಡ ಪರಮೇಶ್ವರ್. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಸೋತಿದ್ದಾರೆ.ಜನ ನಿಮ್ಮನ್ನು ಮನೆಗೆ ಕಳುಹಿಸಿದ್ದಾರೆ. ನರೇಂದ್ರ ಮೋದಿಯವರನ್ನು ಇಡೀ ದೇಶವೇ ಒಪ್ಪಿದೆ. ಸಿದ್ದರಾಮಯ್ಯ, ಪಾಕಿಸ್ತಾನ ಇಬ್ಬರು ಒಪ್ಪಲ್ಲ ಎಂದು ಹೇಳಿದ್ದೆ. ಸಿದ್ದರಾಮಯ್ಯನವರೇ ನೀವೇನ್ ಇಂಟರ್ ನ್ಯಾಷನಲ್ ಲಿಡರ್ ರಾ ಎಂದು ಪ್ರಶ್ನಿಸಿದರು. ಹಿಂದುಳಿದ ವರ್ಗದ ಚಾಂಪಿಯನ್ ಸಿದ್ದರಾಮಯ್ಯ ಅಲ್ಲ, ನರೇಂದ್ರ ಮೋದಿ. ಹಿಂದುಳಿದ ವರ್ಗಕ್ಕೆ ಸಿದ್ದರಾಮಯ್ಯ ಕೊಡುಗೆ ಏನು? ಸಿದ್ದರಾಮಯ್ಯ ಅವರನ್ನು ರಾಷ್ಟ್ರೀಯ ಲೀಡರ್ ಮಾಡೋಕೆ ಹೊರಟಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಕಾಂಗ್ರೆಸ್ ಸ್ಥಿತಿ ಏನಾಯ್ತು ಎಂದರು. ಬಿಜೆಪಿ ಶಾಸಕರು ಜೆಡಿಎಸ್ ಸೇರುತ್ತಾರೆ ಎನ್ನುವ  ವಿಚಾರಕ್ಕೆ ಪ್ರತಿಕ್ರಿಯಿಸಿ ಮುಂದಿನ ಒಂದು ವರ್ಷ ರೇವಣ್ಣ ಎಲ್ಲಿರುತ್ತಾರೋ ಕಾದು ನೋಡಿ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ ಮೈಸೂರು, ಶಿವಮೊಗ್ಗ, ತುಮಕೂರಿನಲ್ಲಿ ಬಿಜೆಪಿಗೆ ಬಹುಮತ ಲಭಿಸಿದೆ.ನಾವು ಕಾಂಗ್ರೆಸ್ ವಿರೋಧಿಗಳು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕೈ ಜೋಡಿಸಲ್ಲ ಎಂದರು. ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಹಾಸ್ಯಾಸ್ಪದವಾಗಿದೆ. ಬಹುಮತ ಇಲ್ಲದೆ ಸಂಪೂರ್ಣ ಸಾಲ ಮನ್ನಾ ಇಲ್ಲ ಎಂದರು. ಮುಂದೆ ಪ್ರಣಾಳಿಕೆ ಚೇಂಜ್ ಮಾಡಲಿ. ಬಹುಮತ ಬಂದರೆ ಸಾಲ ಮನ್ನಾ ಮಾಡುತ್ತೇನೆ ಎಂದು ಬರೆದುಕೊಳ್ಳಲಿ ಎಂದರು.  ಚುನಾವಣಾ ಆಯೋಗ ನೀತಿ ಸಂಹಿತೆ ಜಾರಿ ಮಾಡಿದರೂ ವರ್ಗಾವಣೆ ದಂದೆ ಮಾತ್ರ ನಿಂತಿಲ್ಲ. ರಾಜ್ಯದ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷರಿಗೆ ಸಂವಿಧಾನದ ಬಗ್ಗೆ ಗೊತ್ತಿಲ್ವ? ಚುನಾವಣಾ ಆಯೋಗ ಇದರ  ಬಗ್ಗೆ ಕ್ರಮ ಜರುಗಿಸಬೇಕು. ನಾನು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇನೆ ಎಂದು ತಿಳಿಸಿದರು. ಕುಮಾರಸ್ವಾಮಿಗೆ ಮಾಜಿ ಸಿಎಂ ಸಿದ್ದರಾಮಯ್ಯ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯಿಸಿ ಸಿದ್ದರಾಮಯ್ಯ ಗಂಡುಗಲಿಯಾಗೋದನ್ನು ಬಿಟ್ಟು ಗುಮಾಸ್ತರ ರೀತಿ ನಡೆದುಕೊಳ್ಳುತ್ತಾರೆ.ಕೆಲಸ ಮಾಡಿಸೋಕೆ ಪತ್ರ ಬರಿಬೇಕಾ  ಎಂದು ಪ್ರಶ್ನಿಸಿದರಲ್ಲದೇ, ಗಡಿಬಿಡಿಯಲ್ಲಿ ರಾಹುಲ್ ಗಾಂಧಿ ಬದಲಿಗೆ ರಾಜೀವ್ ಗಾಂಧಿ ಎಂದು ತಪ್ಪಾಗಿ ನುಡಿದರು. ಸಂಸತ್ ನಲ್ಲಿ ಮೋದಿಯನ್ನು, ರಾಜೀವ್ ಗಾಂಧಿ ತಬ್ಬಿಕೊಂಡಿದ್ದರು ಎಂದ ಅವರು ಬಳಿಕ ತಪ್ಪಾಗಿದೆ ಕ್ಷಮಿಸಿ ಎಂದರು. ಪ್ರಧಾನಿ ಮೋದಿಯನ್ನು ಅಪ್ಪಿಕೊಂಡು ರಾಹುಲ್ ಗಾಂಧಿನೇ ಒಪ್ಪಿಕೊಂಡಿದ್ದಾರೆ. ಸಿದ್ದರಾಮಯ್ಯ ಚಾಮುಂಡೇಶ್ವರಿಯಲ್ಲೇ ಗೆಲ್ಲಲಿಲ್ಲ. ಇಂಥ ಸಿದ್ದರಾಮಯ್ಯರನ್ನ ಕೇಂದ್ರದ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ. ಇಲ್ಲಿಯೇ ಗೆಲ್ಲೋಕೆ ಸಾಧ್ಯವಾಗದ ಸಿದ್ದರಾಮಯ್ಯನವರು ದೇಶದಲ್ಲಿ ಕಾಂಗ್ರೆಸ್ ಗೆಲ್ಲಿಸೋಕೆ ಆಗುತ್ತಾ ಎಂದು ವ್ಯಂಗ್ಯವಾಡಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಸಿ.ಟಿ.ರವಿ ಸೇರಿದಂತೆ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.

ಮೈಸೂರು ಮಹಾನಗರ ಪಾಲಿಕೆ ಚುನಾವಣೆ ಸಂಬಂಧ ಇಂದು ರಾಜೇಂದ್ರ ಕಲಾ ಭವನದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ಪಾಲಿಕೆ ಟಿಕೇಟ್ ಆಕಾಂಕ್ಷಿಗಳು, ಹಾಲಿ, ಮಾಜಿ ಪಾಲಿಕೆ ಸದಸ್ಯರು ಪಾಲ್ಗೊಂಡಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ , ಶಾಸಕರಾದ ಸಿ.ಟಿ.ರವಿ, ಲಕ್ಷಣ ಸವದಿ, ಕೋಟೆ ಶಿವಣ್ಣ, ಶಾಸಕ ಎಸ್.ಎ.ರಾಮದಾಸ್, ನಗರಾಧ್ಯಕ್ಷ ಡಾ.ಬಿ.ಹೆಚ್.ಮಂಜುನಾಥ್ ಸೇರಿದಂತೆ  ಹಲವರು ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: