ಕರ್ನಾಟಕ

ಪುರಸಭೆಯಲ್ಲಿ ಕೆಲಸ ಮಾಡುತ್ತಿರುವ ಹಂಗಾಮಿ ನೌಕರರು ಹಾಗೂ ಪೌರ ಕಾರ್ಮಿಕರಿಗೆ ವೇತನ ಪಾವತಿಸಲು ಒತ್ತಾಯಿಸಿ ಪ್ರತಿಭಟನೆ

ರಾಜ್ಯ(ಮಂಡ್ಯ)ಆ.11:- ಕೆ.ಆರ್.ಪೇಟೆ ಪುರಸಭೆಯಲ್ಲಿ ಕೆಲಸ ಮಾಡುತ್ತಿರುವ ಹಂಗಾಮಿ ನೌಕರರು ಹಾಗೂ ಪೌರ ಕಾರ್ಮಿಕರಿಗೆ ಕಳೆದ ಆರು ತಿಂಗಳಿನಿಂದ ವೇತನವನ್ನು ಪಾವತಿ ಮಾಡಿಲ್ಲ. ಕೇವಲ ಸಂಬಳದ ಹಣವನ್ನೇ ನಂಬಿಕೊಂಡು ಕೆಲಸ ಮಾಡುತ್ತಿರುವ ಬಡ ನೌಕರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಜಿಲ್ಲಾಧಿಕಾರಿಗಳು ಕೂಡಲೇ ಕ್ರಮ ವಹಿಸಿ ವೇತನ ಕೊಡಿಸಬೇಕೆಂದು ಆಗ್ರಹಿಸಿ ಪುರಸಭೆಯ ಪೌರ ಕಾರ್ಮಿಕರು ಮತ್ತು ಹಂಗಾಮಿ ನೌಕರರು ಪುರಸಭೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಪುರಸಭೆಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡು ಪಟ್ಟಣವನ್ನು ಸ್ವಚ್ಛಗೊಳಿಸುವ ಮೂಲಕ ಪಟ್ಟಣದ ಜನತೆಗೆ ಆರೋಗ್ಯವನ್ನು ಕಾಪಾಡುವ ಪುಣ್ಯದ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ಸೇರಿದಂತೆ ಬೀದಿ ದೀಪಗಳ ನಿರ್ವಹಣೆ, ಸ್ವಚ್ಛತೆ, ಕಛೇರಿಯಲ್ಲಿ ಅಟೆಂಡರ್ ಮತ್ತು ಡಿ.ಗ್ರೂಪ್ ನೌಕರರಂತೆ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕಳೆದ 8 ತಿಂಗಳುಗಳಿಂದ ವೇತನವನ್ನು ನೀಡಿಲ್ಲ. ಕೇವಲ ಸಂಬಳದ ಹಣವನ್ನೇ ನಂಬಿಕೊಂಡು ಜೀವನವನ್ನು ನಡೆಸುತ್ತಿರುವ ಬಡ ನೌಕರರು ಸಂಬಳ ಕೈಸೇರದ ಕಾರಣ ಜೀವನ ನಿರ್ವಹಣೆ ಕಷ್ಟವಾಗಿದ್ದು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬಡ್ಡಿ ಸಾಲ ಮಾಡಿ ಜೀವನ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಇನ್ನೊಂದು ವಾರದೊಳಗಾಗಿ ಸಂಬಳ ನೀಡದಿದ್ದರೆ ಗುತ್ತಿಗೆ ಆಧಾರದಲ್ಲಿ ಹಾಗೂ ಹಂಗಾಮಿಯಾಗಿ ಕೆಲಸ ಮಾಡುತ್ತಿರುವ 20ಕ್ಕೂ ಹೆಚ್ಚಿನ ನೌಕರರಿಗೆ ಅನುಕೂಲ ಮಾಡಿಕೊಡಬೇಕೆಂದು ನೇತೃತ್ವ ವಹಿಸಿದ್ದ ಪುರಸಭೆಯ ಹಂಗಾಮಿ ನೌಕರರ ಸಂಘದ ಅಧ್ಯಕ್ಷ ಮಂಟೆ ಮಂಜು ಒತ್ತಾಯ ಮಾಡಿದರು.

ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಆಲಿಸಿದ ಮುಖ್ಯಾಧಿಕಾರಿ ಮೂರ್ತಿ ಒಂದೆರಡು ದಿನಗಳಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಸಂಬಳದ ಹಣವನ್ನು ಬಿಡುಗಡೆ ಮಾಡಿಸಲು ಅಗತ್ಯ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪೌರಕಾರ್ಮಿಕರು ಹಾಗೂ ಹಂಗಾಮಿ ನೌಕರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದುಕೊಂಡರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: