ಮೈಸೂರು

‘ಅಹಿಂಸಾ ಪಾಲನೆಯಿಂದ ಸಮಾಜ ಸುರಕ್ಷಿತ : ಪ್ರವಚನಕಾರರ ಅಭಿಮತ

ಮೈಸೂರು, ಆ.13:- ‘ಇಂದಿನ ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರಾದಿಯಾಗಿ ಎಲ್ಲರಿಗೂ ಸುರಕ್ಷಿತ ಜೀವನದ ಅವಶ್ಯಕತೆ ಇದೆ. ಹೆಚ್ಚುತ್ತಿರುವ ಹಿಂಸೆ, ಕ್ರೌರ್ಯ ಹಾಗೂ ಅತ್ಯಾಚಾರಗಳು ಸಾಮಾನ್ಯ ಜನರನ್ನೂ ಕೂಡ ಕಂಗೆಡಿಸಿವೆ. ಭಗವದ್ಗೀತೆಯಲ್ಲಿ ಪರಮಾತ್ಮನು ನೀಡಿರುವ ಸಂದೇಶದಂತೆ ಪ್ರತಿಯೊಬ್ಬರೂ ತಮ್ಮ ಜೀವನದಿಂದ ಹಿಂಸೆಯನ್ನು ಸಂಪೂರ್ಣವಾಗಿ ವರ್ಜಿಸುವ ಅವಶ್ಯಕತೆ ಇಂದು ಕಂಡು ಬರುತ್ತಿದೆ’ ಎಂಬ ಅಭಿಪ್ರಾಯ ನಗರದ ಕಲಾಮಂದಿರದಲ್ಲಿ ನಡೆದ ಭಗವದ್ಗೀತೆಯ ಜೀವನ ಸಂದೇಶ ಕಾರ್ಯಕ್ರಮದಲ್ಲಿ ಪ್ರವಚನಕಾರರಿಂದ ವ್ಯಕ್ತವಾಯಿತು.

ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ವತಿಯಂದ ನಿನ್ನೆ ಆಯೋಜಿಸಲಾಗಿದ್ದ ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಮೂರು ಪ್ರವಚನಕಾರರು ಭಾಗವಹಿಸಿದ್ದು ಅಬು ಪರ್ವತದಿಂದ ಸಂಸ್ಥೆಯ ಹೆಚ್ಚುವರಿ ಪ್ರಧಾನ ಕಾರ್ಯಕಾರಿ ಸಚಿವರಾದ ಬಿಕೆ ಬೃಜ್ ಮೋಹನ್‍ಜೀ, ನಗರದ ಹೆಸರಾಂತ ಹಿರಿಯ ಚಿಂತಕರಾದ ಪ್ರೊ.ಕೆ.ಕೇಶವಮೂರ್ತಿ ಹಾಗೂ ಶಿರಸಿಯಿಂದ ಆಗಮಿಸಿದ್ದ ಅನುಭವಿ ರಾಜಯೋಗಿನಿ ಬಿಕೆ ವೀಣಾಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಕೆ ಬೃಜ್ ಮೋಹನ್‍ಜೀ ಮಾತನಾಡಿ ಮೌಲ್ಯಗಳ ಅವನತಿಯಾದಾಗ ಗೀತೆಯ ಭಗವಂತನು ಅವತರಿಸುತ್ತಾನೆ. ಆ ಸಮಯ ಈಗ ಸ್ಪಷ್ಟವಾಗಿ ಗೋಚರಿಸುತ್ತಿದೆ. ಅಸುರಿ ಮೌಲ್ಯಗಳು ಸಮಾಪ್ತಿಯಾಗಿ ದೈವಿಕ ಮೌಲ್ಯಗಳು ಎಲ್ಲೆಡೆ ಕಾಣಬೇಕಿದೆ. ಸಮಾಜದಲ್ಲಿ ಕಾಣುತ್ತಿರುವ ದುಃಖ ಹಾಗೂ ಅಶಾಂತಿಗೆ ಮನುಷ್ಯನಲ್ಲಿರುವ ದುರ್ಗುಣಗಳೇ ಮೂಲ ಕಾರಣವಾಗಿವೆ. ಗಾಂಧೀಜಿಯವರಂತೆ ಎಲ್ಲರೂ ಸತ್ಯ ಮತ್ತು ಅಹಿಂಸೆಯ ಪಾಲನೆ ಮಾಡಿದಾಗ ದುರ್ಗುಣಗಳ ಮೂಲೋತ್ಪಾಟನೆಯಾಗುತ್ತದೆ. ಅದಕ್ಕಾಗಿ ನಮ್ಮ ಆಚರಣೆಯಲ್ಲಿ ಸದ್ಧರ್ಮದ ಪಾಲನೆ ಹಾಗೂ ಕರ್ಮದಲ್ಲಿ ಆತ್ಮಿಕ ಸ್ಥಿತಿ ಅವಶ್ಯಕವಾಗಿ ಅನುಸರಣೆಯಾಗಬೇಕಿದೆ. ಪ್ರತಿಯೊಬ್ಬ ಮನುಷ್ಯನೂ ತಾನು ಮಾಡಿದ ಕರ್ಮದ ಅನುಸಾರವಾಗಿ ಜನ್ಮವನ್ನು ಪಡೆಯುತ್ತಾ ಸುಖ ದುಃಖಗಳನ್ನು ಭೋಗಿಸುತ್ತಾನೆ. ಆದರೆ ಸಮಾಜದಲ್ಲಿ ಆಧ್ಯಾತ್ಮಿಕ ಆರೋಗ್ಯವನ್ನು ಕಾಣಬೇಕೆಂದರೆ ಸಮಷ್ಟಿಯಲ್ಲಿ ಕರ್ಮದ ಗುಣಮಟ್ಟ ಹೆಚ್ಚಬೇಕಾಗಿದೆ. ರೋಗ ನಿವಾರಣೆಯಾಗಲು ವೈದ್ಯರು ಸಲಹೆ ಮಾಡಿದ ಪಥ್ಯವನ್ನು ರೋಗಿಯು ಹೇಗೆ ಪಾಲಿಸುತ್ತಾನೋ ಹಾಗೆಯೇ ಪರಮಾತ್ಮನು ಗೀತೆಯಲ್ಲಿ ತಿಳಿಸಿದಂತೆ ಅವನಿಗೆ ಶರಣಾಗಿ ಕರ್ಮಗಳನ್ನು ಮಾಡಿದ್ದಾದರೆ ಖಂಡಿತವಾಗಿ ಸಮಾಜದ ಕೊಳಕು ನಿರ್ಮೂಲವಾಗಿ ಸ್ವಚ್ಛ ಬದುಕು ಕಾಣಲು ಸಾಧ್ಯವಾಗುತ್ತದೆ ಎಂದರು.

ಖ್ಯಾತ ಪ್ರವಚನಕಾರರಾದ ಪ್ರೊ.ಕೆ.ಕೇಶವಮೂರ್ತಿ ಮಾತನಾಡಿ ‘ಯೋಗಃ ಕರ್ಮಸು ಕೌಶಲಂ’ ಎಂದು ಪರಮಾತ್ಮನು ತಿಳಿಸಿದ್ದಾನೆ. ಜನರು ಇಂದ್ರಿಯಗಳಿಗೆ ದಾಸರಾಗಿರುವುದರಿಂದ ದುಃಖ ಅಶಾಂತಿಗಳು ಹೆಚ್ಚುತ್ತಿವೆ. ಪಂಚೇಂದ್ರಿಯಗಳ ಮೇಲೆ ಪ್ರಭುತ್ವ ಸಾಧಿಸುವುದರಿಂದ ನಾವು ಮಾಡುವ ಕರ್ಮವು ಕುಶಲಕರ್ಮವಾಗುವುದು. ಇದೇ ನಿಜವಾದ ಯೋಗ. ಆದ್ದರಿಂದ ಭಗವದ್ಗೀತೆಯ ಜ್ಞಾನವನ್ನು ಅನುಷ್ಠಾನಗೊಳಿಸಲು ಸ್ವಧರ್ಮದಲ್ಲಿ ಸ್ಥಿತರಾಗಿ ನಮ್ಮ ಕೆಲಸ ಕಾರ್ಯಗಳನ್ನು ಮಾಡಬೇಕಾಗುತ್ತದೆ. ಆತ್ಮಜ್ಞಾನದಿಂದ ಮನಸ್ಸು ಶುದ್ಧವಾಗಿ ಸಂಕಲ್ಪಗಳಲ್ಲಿ ಸಮರ್ಥತೆ ಕಂಡು ಬರುತ್ತದೆ ಎಂದು ತಿಳಿಸಿದರು.

ಬ್ರಹ್ಮಕುಮಾರಿ ವೀಣಾಜಿ ಮಾತನಾಡಿ ಗೀತೆಯು ಮೂಕನಿಗೆ ಮಾತನಾಡುವುದನ್ನು, ಕುಂಟನಿಗೆ ಪರ್ವತ ಏರುವುದನ್ನು ಕಲಿಸಿಕೊಡುವುದರ ಜೊತೆಗೆ ಮನುಷ್ಯನ ಜೀವನವನ್ನು ಸಹಜ ಮಾರ್ಗದಲ್ಲಿ ಕೊಂಡೊಯ್ಯುವ ಜ್ಞಾನ ನೀಡುತ್ತದೆ. ಹಾಗೂ ಗೀತೆಯ ಅಧ್ಯಯನದಿಂದ ಆತ್ಮವಿಶ್ವಾಸ ವೃದ್ಧಿಸುತ್ತದೆ. ಆತ್ಮವು ಅಮರ, ಶರೀರವು ನನ್ನ ವಸ್ತ್ರ ಎಂದು ತಿಳಿಯುವುದರಿಂದ ಮನಸ್ಸಿನಲ್ಲಿರುವ ಭಯವು ಮಾಯವಾಗುತ್ತದೆ. ಗೀತೆಯು ಪ್ರತಿಯೊಬ್ಬರ ಕೈದೀವಿಗೆಯಂತೆ ಕೆಲಸ ಮಾಡುತ್ತದೆ. ನಮ್ಮ ಉದ್ಧಾರವನ್ನು ನಾವೇ ಮಾಡಿಕೊಳ್ಳಬೇಕು. ಅದಕ್ಕಾಗಿ ನಾನು ಯಾರು ಎಂಬ ಸೂಕ್ಷ್ಮ ಜ್ಞಾನವನ್ನು ಅರ್ಥ ಮಾಡಿಕೊಳ್ಳಬೇಕು. ಯಾರ ಮನಸ್ಸಿನಲ್ಲಿ ಭಗವಂತನ ನೆನಪು ನೆಲೆಸಿರುತ್ತದೆಯೋ ಅವರಲ್ಲಿ ಅಹಂಕಾರ, ಈರ್ಷೆ, ದ್ವೇಷ ಮುಂತಾದ ಅವಗುಣಗಳು ದೂರವಾಗುತ್ತವೆ ಎಂದರು.

ಬಿಕೆ ಲಕ್ಷ್ಮೀಜಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಗಾಂಧೀಜಿಯವರು ಗೀತೆಯನ್ನು ತಾಯಿ ಎಂದು ಕರೆದಿದ್ದಾರೆ. ಮಗುವು ತನ್ನ ತಾಯಿಯ ಬಗ್ಗೆ ಎಲ್ಲ ವಿಚಾರಗಳಲ್ಲಿಯೂ ಹೇಗೆ ವಿಶ್ವಾಸವಿಡುತ್ತದೆಯೋ ಹಾಗೆಯೇ ಮಾನವಾತ್ಮರು ಗೀತೆಯ ಬಗ್ಗೆ ಶ್ರದ್ಧೆ ಇಟ್ಟಾಗ ಅಂತಹವರಿಗೆ ಒಳಿತಾಗುವುದು ಸಹಜ ಎಂದರು.

ಇಂದ್ರಾಣಿ ಅನಂತರಾಮು ಸುಶ್ರಾವ್ಯವಾಗಿ ಕೃಷ್ಣನ ಬಗ್ಗೆ ಗೀತೆಗಳನ್ನು ಹಾಡಿದರು. ಬಿಕೆ ರಾಮಚಂದ್ರರಾವ್ ಸ್ವಾಗತಿಸಿದರು. ಬಿಕೆ ಸಪ್ನಾ ಸಂಸ್ಥೆಯ ಪರಿಚಯ ನೀಡಿದರು. ಬಿಕೆ ಕೃಷ್ಣಮೂರ್ತಿ ವಂದಿಸಿದರು. ಬಿಕೆ ರಂಗನಾಥ್ ಕಾರ್ಯಕ್ರಮ ನಿರೂಪಿಸಿದರು. ಎಲ್ಲ ಪ್ರವಚನಕಾರರಿಗೆ ಸನ್ಮಾನ ಮಾಡಿ ಕೃಷ್ಣಾರ್ಜುನರ ಫಲಕಗಳನ್ನು ನೆನಪಿನ ಕಾಣಿಕೆಯಾಗಿ ನೀಡಲಾಯಿತು.        (ಜಿ.ಕೆ,ಎಸ್.ಎಚ್)

 

Leave a Reply

comments

Related Articles

error: