ಪ್ರಮುಖ ಸುದ್ದಿ

ಭಿತ್ತಿ ಪತ್ರ ತೆರವು ಕಾರ್ಯಾಚರಣೆ ಖುದ್ದು ನಡೆಸಿದ ಮೇಯರ್ ಸಂಪತ್ ರಾಜ್

ರಾಜ್ಯ(ಬೆಂಗಳೂರು)ಆ.14:- ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೂರನೇ ದಿನವಾದ ಇಂದೂ ಕೂಡ ಮೇಯರ್ ಸಂಪತ್ ರಾಜ್ ಅವರು ಅಧಿಕಾರಿಗಳೊಂದಿಗೆ ನಗರದಲ್ಲಿನ ಗೋಡೆಗಳು ಮತ್ತು ಮರಗಳ ಮೇಲೆ ಅಂಟಿಸಲಾಗಿದ್ದ ಭಿತ್ತಿಪತ್ರ ಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ಮುಂದುವರೆಸಿದರು.

ಟೌನ್ ಹಾಲ್‌ನಿಂದ ಆರಂಭಗೊಂಡ ಭಿತ್ತಿಪತ್ರಗಳ ತೆರವು ಕಾರ್ಯಾಚರಣೆಯು ಕಲಾಸಿಪಾಳ್ಯ, ದೊಡ್ಡಣ್ಣ ಶೆಟ್ಟಿ ವೃತ್ತ, ಎಸ್.ಜೆ.ಪಿ. ರಸ್ತೆ ಸೇರಿದಂತೆ, ಹಲವು ಪ್ರದೇಶಗಳಲ್ಲಿನ ಗೋಡೆಗಳ ಮೇಲೆ ಅಂಟಿಸಿದ್ದ ಭಿತ್ತಿಪತ್ರಗಳನ್ನು ಕಿತ್ತುಹಾಕಿದರು.

ನಂತರ ಅಂಗಡಿಗಳ ಮಾಲೀಕರನ್ನು ಭೇಟಿ ಮಾಡಿ ಹೈಕೋರ್ಟ್ ಆದೇಶದ ಮಾಹಿತಿಯನ್ನು ತಿಳಿಸಿದ ಅವರು, ತಮ್ಮ ಸುತ್ತಮುತ್ತಲ ಪ್ರದೇಶಗಳಲ್ಲಿ ಯಾವುದೇ ಭಿತ್ತಿಪತ್ರಗಳನ್ನು ಅಂಟಿಸದಂತೆ ಜಾಗೃತಿ ವಹಿಸಬೇಕೆಂದು ತಿಳಿಸಿದರು.

ಅವಿನ್ಯೂ ರಸ್ತೆಯಲ್ಲಿ ಹೆಚ್ಚು ಭಿತ್ತಿಪತ್ರಗಳನ್ನು ಕಂಡ ಮೇಯರ್ ಅವರು ತಾವೇ ಖುದ್ದು ನಿಂತು ಎಲ್ಲಾ ಭಿತ್ತಿಪತ್ರಗಳನ್ನು ಕಿತ್ತುಹಾಕಿ ಪ್ರಹರಿಗಳಲ್ಲಿ ಸಿಬ್ಬಂದಿಗಳ ಸಹಾಯದಿಂದ ತುಂಬಿಸಿ ಹೊರಸಾಗಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರವನ್ನು ಸ್ವಚ್ಛಗೊಳಿಸಲು ಸಹಕಾರ ನೀಡಬೇಕು. ಎಲ್ಲೆಂದರಲ್ಲಿ ಭಿತ್ತಿಪತ್ರಗಳನ್ನು ಅಂಟಿಸಿ, ನಗರದ ಸೌಂದರ್ಯವನ್ನು ಹಾಳುಮಾಡಬಾರದೆಂದು ಹೇಳಿದರು. ಫುಟ್‌ಪಾತ್‌ಗಳಲ್ಲಿ ತರಕಾರಿ, ಪ್ಲಾಸ್ಟಿಕ್ ಆಟದ ಸಾಮಾನುಗಳನ್ನು ಮಾರಾಟ ಮಾಡುವವರು ಹೆಚ್ಚಾಗಿ ಪ್ಲಾಸ್ಟಿಕ್ ಬ್ಯಾಗ್‌ಗಳನ್ನು ಬಳಸುತ್ತಿದ್ದಾರೆ. ಇದೇ ವೇಳೆ ಅವರಿಗೂ ಪ್ಲಾಸ್ಟಿಕ್ ಬ್ಯಾಗ್ ಬಳಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಮೇಯರ್ ತಿಳಿಸಿದರು.

ಭಿತ್ತಿಪತ್ರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಿಲ್ಲುವುದಿಲ್ಲ. ನಿರಂತರವಾಗಿ ಮುಂದುವರೆಯಲಿದೆ ಎಂದು ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: