
ಕರ್ನಾಟಕ
ಗಿಡ ನೆಡುವ ಮುಖೇನ ಹಸಿರು ಕರ್ನಾಟಕ ಪ್ರಾರಂಭ: ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ
ಹಾಸನ (ಆ.14): ಕರ್ನಾಟಕ ಅರಣ್ಯ ಇಲಾಖೆಯು ಹಸಿರು ಕರ್ನಾಟಕ ಆಂದೋಲನ ಕಾರ್ಯಕ್ರಮವನ್ನು ರಾಜ್ಯಾದ್ಯಂತ 15-08-2018ರಿಂದ 18-08-2018ರವರೆಗೆ ಗಿಡ ನೆಡುವ ಮುಖೇನ ಕಾರ್ಯಕ್ರಮವನ್ನು ರೂಪಿಸಿದ್ದು, ಈ ಬಾರಿ ಆಗಸ್ಟ್-15ರಂದು ನಡೆಯುವ 72ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನಗಳಲ್ಲಿ ಗಿಡ ನೆಡುವ ಮುಖೇನ ಹಸಿರು ಕರ್ನಾಟಕ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.
ಗ್ರಾಮಸ್ಥರು, ಸಂಘ-ಸಂಸ್ಥೆ, ಪರಿಸರ ಪ್ರೇಮಿಗಳು, ಶಾಲಾ ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು, ಸಾರ್ವಜನಿಕರು ಮತ್ತು ಸರ್ಕಾರಿ ನೌಕರರುಗಳ ಸಹಭಾಗಿತ್ವದಲ್ಲಿ ಹಮ್ಮಿಕೊಳ್ಳುವ ಈ ಕಾರ್ಯಕ್ರಮವು ಅರ್ಥಪೂರ್ಣ ಕಾರ್ಯಕ್ರಮವಾಗಿರುತ್ತದೆ.
ಮನೆಗೊಂದು ಮರ, ಊರಿಗೊಂದು ತೋಪು, ತಾಲ್ಲೂಕಿಗೊಂದು ಕಿರು ಅರಣ್ಯ, ಜಿಲ್ಲೆಗೊಂದು ಕಾಡು ಇದು ಹಸಿರು ಕರ್ನಾಟಕದ ಮುಖ್ಯ ಧ್ಯೇಯವಾಗಿರುತ್ತದೆ. ಸರ್ಕಾರಿ ಕಛೇರಿ ಆವರಣ, ಸರ್ಕಾರಿ ಭೂಮಿ, ಬೆಟ್ಟಗುಡ್ಡಗಳು, ಕೆರೆ ಅಂಗಳ ಪ್ರದೇಶಗಳಲ್ಲಿ ಗಿಡ ನೆಟ್ಟು ಸಂರಕ್ಷಿಸುವುದು.
ನಮ್ಮ ರಾಜ್ಯದ ನೈಸರ್ಗಿಕ ಅರಣ್ಯ ಸಂಪತ್ತು ಮತ್ತು ವನ್ಯ ಜೀವಿಗಳನ್ನು ನಮ್ಮೆಲ್ಲರ ಉಳಿವಿಗಾಗಿ ಸಂರಕ್ಷಿಸುವುದು. ನೀರು ಮತ್ತು ಉತ್ತಮ ಪರಿಸರಕ್ಕಾಗಿ ನಾವೆಲ್ಲರೂ ಸೇರಿ ಕರ್ನಾಟಕವನ್ನು ಹಸಿರಾಗಿಸೋಣ. (ಎನ್.ಬಿ)