ದೇಶಪ್ರಮುಖ ಸುದ್ದಿ

ಗೂಗಲ್, ಯೂಟೂಬ್‍ನಲ್ಲಿ ಲೈವ್ ಆಗಲಿದೆ ಕೆಂಪುಕೋಟೆ ಮೇಲಿನ ಪ್ರಧಾನಿ ಮೋದಿ ಭಾಷಣ!

ನವದೆಹಲಿ (ಆ.14): ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನದ ಅಂಗವಾಗಿ ಆ.15ರಂದು ದೇಶವನ್ನುದ್ದೇಶಿಸಿ ಮಾಡಲಿರುವ ಭಾಷಣವನ್ನು ಗೂಗಲ್ ಹೋಮ್‍ ಪೇಜ್‍ನಲ್ಲಿ ನೇರಪ್ರಸಾರ ಮಾಡಲು ನಿರ್ಧರಿಸಲಾಗಿದೆ!

ಲೈವ್ ಪ್ರಸಾರಕ್ಕಾಗಿ ಪ್ರಸಾರ ಭಾರತೀಯು ಗೂಗಲ್ ಮತ್ತು ಯೂಟ್ಯೂಬ್ ಜೊತೆ ಕೈಜೋಡಿಸಿದೆ. ಡಿಜಿಟಲ್ ಪೀಳಿಗೆಯನ್ನೂ ತಲುಪುವ ಉದ್ದೇಶದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಮೋದಿಯವರ ಭಾಷಣವನ್ನು ಆಗಸ್ಟ್ 15 ರಂದು ಲೈವ್ ಪ್ರಸಾರ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.

ಆಗಸ್ಟ್ 15 ರಂದು ಗೂಗಲ್ ನಲ್ಲಿ ‘Independence day’ ಎಂದು ಸರ್ಚ್ ಮಾಡಿದರೆ ಗೂಗಲ್ ಹೋಂ ಪೇಜ್ ನಲ್ಲಿಯೇ ಮೋದಿಯವರ ಭಾಷಣದ ಲೈವ್ ವಿಡಿಯೋ ಸಿಕ್ಕಲಿದೆ! ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಎದುರು ತ್ರಿವರ್ಣ ಧ್ವಜ ಹಾರಿಸಿದ ನಂತರ ಪ್ರಧಾನಿ ಮೋದಿಯವರು ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಈ ಸ್ವಾತಂತ್ರ್ಯೋತ್ಸವ ಭಾಷಣವು ಮೋದಿಯವರ 5 ವರ್ಷಗಳ ಪ್ರಧಾನಿ ಅವಧಿಯಲ್ಲಿ ಕಡೆಯದಾಗಿರುವುದರಿಂದ ಮತ್ತಷ್ಟು ಕುತೂಹಲ ಕೆರಳಿಸಿದೆ.

ಈ ಬಾರಿ ದೂರದರ್ಶನದ ಯೂ ಟ್ಯೂಬ್ ಪೇಜ್ ಗೆ ಹೋಗಿ ಪ್ರಧಾನಿ ಭಾಷಣವನ್ನು ಹುಡುಕುವ ಪ್ರಮೇಯವಿಲ್ಲ. ಗೂಗಲ್ ಸರ್ಚ್ ನಿಂದಲೇ ಭಾಷಣದ ನೇರ ಪ್ರಸಾರ ದೊರೆಯಲಿದೆ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಪದಗ್ರಹಣದ ಸಮಯದಲ್ಲೂ ಕಾರ್ಯಕ್ರಮವನ್ನು ಹೀಗೆಯೇ ಲೈವ್ ಪ್ರಸಾರ ಮಾಡಲಾಗಿತ್ತು. ಈ ವರ್ಷ ಸ್ವಾತಂತ್ರ್ಯೋತ್ಸವ ಭಾಷಣಕ್ಕೆ ಜನರಿಂದಲೇ ಸಲಹೆ ಸೂಚನೆ ಸ್ವೀಕರಿಸಿರುವ ಕಾರಣ ಭಾಷಣದ ಬಗ್ಗೆ ಜನರಲ್ಲಿ ಮತ್ತಷ್ಟು ನಿರೀಕ್ಷೆಗಳು ಗರಿಗೆದರಿವೆ. (ಎನ್.ಬಿ)

Leave a Reply

comments

Related Articles

error: