ಮೈಸೂರು

ದುರಾಸೆ ಇಲ್ಲದ ಪ್ರೀತಿ ತುಂಬಿಕೊಳ್ಳುವ ಸಂಸ್ಕೃತಿ ಬೇಕಾಗಿದೆ : ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ

ಅಸೂಯೆ ತುಂಬಿಕೊಂಡು ದೇವರ ಸ್ಮರಣೆ ಮಾಡಿದರೆ ಪ್ರಯೋಜನವಿಲ್ಲ. ಪ್ರೀತಿ ತುಂಬಿಕೊಳ್ಳುವ ಸಂಸ್ಕೃತಿ ಬೇಕಾಗಿದೆ ಎಂದು ಬೇಬಿ ಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ತಿಳಿಸಿದರು.

ಮೈಸೂರಿನ ಎನ್.ಆರ್.ಮೊಹಲ್ಲಾದ ಶಿವಾಜಿ ಮುಖ್ಯ ರಸ್ತೆಯಲ್ಲಿ ಕನಕ ಯುವ ವೇದಿಕೆ ವತಿಯಿಂದ ಏರ್ಪಡಿಸಿದ್ದ ಕನಕ ಜಯಂತ್ಯುತ್ಸವವನ್ನು ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ನಾನು ಎನ್ನುವ ಅಹಂ ಮತ್ತು ಬೇಕು ಎನ್ನುವ ದುರಾಸೆಯಿಂದ ಅಸೂಯೆ ಹೆಚ್ಚಾಗಿದೆ. ಜನರಲ್ಲಿ ಸಹನೆ ಇಲ್ಲವಾಗಿದೆ. ವೈಷಮ್ಯ ಹೆಚ್ಚುತ್ತಿರುವುದರಿಂದ ಸಮಾಜದಲ್ಲಿ ಕಿತ್ತಾಟಗಳು ನಡೆಯುತ್ತಿವೆ. ಭಕ್ತಿ ಇದ್ದರೆ ಮಾತ್ರ ದೇವರನ್ನು ಒಲಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಸಮುದ್ರವನ್ನು ಸೇರುವ ನದಿಗಳ ನೀರನ್ನು ಯಾವ ನದಿಯದ್ದು ಎಂದು ಹೇಳಲು ಸಾಧ್ಯವಾಗುವುದಿಲ್ಲ. ಹಾಗೆಯೇ ಸಮಾಜ ಸುಧಾರಕರು ಒಂದು ಜಾತಿಗೆ ಎಂದೂ ಸೀಮಿತರಾಗಿರುವುದಿಲ್ಲ. ಗಾಂಧೀಜಿ ಅವರನ್ನು ಮಹಾತ್ಮ ಎಂದು ಎಲ್ಲರೂ ಸ್ಮರಿಸುತ್ತಾರೆ. ಅಂತೆಯೇ ಕನಕದಾಸ, ಪುರಂದರದಾಸ, ಬಸವಣ್ಣ ಮೊದಲಾದ ಮಹನೀಯರನ್ನು ಎಲ್ಲರೂ ಸ್ಮರಿಸಬೇಕು. ಅವರ ತತ್ವಾದರ್ಶಗಳನ್ನು ಅಳವಡಿಸಿಕೊಂಡರೆ ಒಳಿತಿನೆಡೆಗೆ ಸಾಗಬಹುದು ಎಂದು ಕಿವಿ ಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಕನಕದಾಸರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಲಾಯಿತು. ಅನೇಕ ಗಣ್ಯರನ್ನು ಈ ಸಂದರ್ಭ ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಅರಮನೆ ಉತ್ತರ ದ್ವಾರದ ಕೋಟೆ ಆಂಜನೇಯ ಸ್ವಾಮಿ ದೇಗುಲ ಆವರಣದಿಂದ ಶಿವಾಜಿ ಮುಖ್ಯ ರಸ್ತೆವರೆಗೆ ವಿವಿಧ ಕಲಾತಂಡಗಳ ಮೆರವಣಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಕಾಗಿನೆಲೆ ಗುರುಪೀಠದ ಕೆ.ಆರ್.ನಗರದ ಶಾಖಾಮಠದ ಶಿವಾನಂದಪುರಿ ಸ್ವಾಮೀಜಿ, ಪಾಲಿಕೆ ಸದಸ್ಯ ಬಿ.ಎಂ.ನಟರಾಜು, ಬಿಜೆಪಿ ರಾಜ್ಯಪರಿಷತ್ ಸದಸ್ಯ ಬಿ.ಪಿ.ಮಂಜುನಾಥ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: