ಮೈಸೂರು

ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಮೈಸೂರು, ಆ.15:- ನಗರದ ಬೋಗಾದಿ ಮುಖ್ಯ ರಸ್ತೆಯಲ್ಲಿರುವ ಗಂಗೋತ್ರಿ ಪಬ್ಲಿಕ್ ಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಇಂದು 72ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮ, ಸಡಗರದಿಂದ ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮೈಸೂರು ವಿಶ್ವವಿದ್ಯಾನಿಲಯದ ನಿವೃತ್ತ ಕನ್ನಡ ಪ್ರಾಧ್ಯಾಪಕ, ಹಿರಿಯ ಚಿಂತಕ ಡಾ.ಕೆ.ಅನಂತರಾಮು ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಇಂದು ನಾವು ಬಹಳ ಸಂಭ್ರಮದ ವಾತಾವರಣದಲ್ಲಿ ನಾವಿದ್ದೇವೆ. ವರುಣನ ಕೃಪೆಯಿಂದ ಸ್ವಾತಂತ್ರ್ಯ ಸೂರ್ಯನೂ ಬೆಳಗುತ್ತಿದ್ದಾನೆ. ಗಂಗೋತ್ರಿ ಎಂದರೆ ಜ್ಞಾನದ ಗಂಗೆ. ಈ ಸ್ವಾತಂತ್ರ್ಯವು ಸುಲಭವಾಗಿ ಬಂದಿಲ್ಲ. ಬ್ರಿಟಿಷರ ಕಪಿಮುಷ್ಠಿಯಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ. ನಮ್ಮ ಜೀವನಕ್ಕೆ ಮೂರು ಬಹು ಮುಖ್ಯವಾದವು. ಅದೇನೆಂದರೆ ಮೊದಲನೆಯದು ಮನೆ, ಎರಡನೆಯದು ಶಾಲೆ ಹಾಗೂ ಮೂರನೆಯದು ಸಮಾಜ. ಈ ಮೂರು ಪರಿಸರಗಳಲ್ಲಿ ಬೆಳವಣಿಗೆ ಹೊಂದಬೇಕು. ಮಾತೃ ದೇವೋ ಭವಃ, ಪಿತೃ ದೇವೋ ಭವಃ ಆಚಾರ್ಯ ದೇವೋ ಭವಃ. ಮನೆಯಲ್ಲಿ ತಂದೆ ತಾಯಿಗೆ ವಿಕಾಸ ಹೊಂದಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ನನ್ನ ದೃಷ್ಟಿಯಲ್ಲಿ ಸ್ವಾತಂತ್ರ್ಯವೆಂದರೆ ಅದು ಪ್ರಜಾತಂತ್ರ ವ್ಯವಸ್ಥೆಯ ಅಡಿಪಾಯ. ಒಬ್ಬರನ್ನೊಬ್ಬರು ಗೌರವಿಸುವ, ಸರ್ವರ ಘನತೆಯನ್ನು ಕಾಯುವ ಮನುಷ್ಯನ ಮೂಲಭೂತ ಹಕ್ಕುಗಳು ಮತ್ತು ನ್ಯಾಯವನ್ನು ಎತ್ತಿ ಹಿಡಿಯುವ ಆದರ್ಶ, ಸಾಮಾಜಿಕ ಭದ್ರತೆ, ಗುಣಮಟ್ಟದ ಬದುಕು, ಮಾನವ ಸಮಾನತೆ, ಸ್ತ್ರೀಯರನ್ನು ಗೌರವಿಸುವ ಮತ್ತು ಸಹಿಷ್ಣುತೆಯನ್ನು ಉತ್ತೇಜಿಸುವ ಉದಾತ್ತ ತತ್ತ್ವ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಟಿ.ರಂಗಪ್ಪನವರು ಮಾತನಾಡಿ, ಸತ್ಯ ಮತ್ತು ಅಹಿಂಸೆಯನ್ನು ನಾವು ಸಮಾಜದಲ್ಲಿ ಅಳವಡಿಸಿಕೊಂಡಾಗಲೇ ಸಂಪೂರ್ಣ ಸ್ವಾತಂತ್ರ್ಯ ಅರ್ಥಪೂರ್ಣವಾಗುವುದು. ನೀವು ಮಕ್ಕಳಿಗೆ 18 ವರ್ಷ ಆಗುವವರೆಗೆ ಮೊಬೈಲ್ ಕೊಡಬೇಡಿ. ಇಂದು ಮೊಬೈಲ್ ಮಾರಕವಾಗಿದೆ. ವಾಟ್ಸ್‍ಅಪ್, ಫೇಸ್‍ಬುಕ್ ನಾಯಿಕೊಡೆಯಂತೆ ಹಬ್ಬಿರುವುದರಿಂದ ಮಕ್ಕಳು ವಿದ್ಯಾಭ್ಯಾಸದ ಕಡೆ ಗಮನ ಕೊಡದೇ ಬರೀ ಮೊಬೈಲ್‍ನಲ್ಲಿ ಮುಳುಗಿರುತ್ತಾರೆ ಎಂದು ಪೋಷಕರಿಗೆ ಸಲಹೆ  ನೀಡಿದರು. ವೇದಿಕೆಯಲ್ಲಿ ಮಾಜಿ ಮೇಯರ್ ಟಿ.ಬಿ.ಚಿಕ್ಕಣ್ಣ, ಸಂಯೋಜನಾಧಿಕಾರಿ ಕಾಂತಿ ನಾಯಕ್, ಶಾಲಾ ಮುಖ್ಯೋಪಾಧ್ಯಾಯಿನಿ ಝರೀನಾ ಬಾಬುಲ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಧರ್ ಹಾಗೂ ಸಮಾಜ ಸೇವಕ ಜಿ.ಪಿ.ಹರೀಶ್ ಉಪಸ್ಥಿತರಿದ್ದರು.

ಈ ವರ್ಷ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ.ಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಎಸ್.ಎಸ್.ಎಲ್.ಸಿ.ಯಲ್ಲಿ ಕನ್ನಡದಲ್ಲಿ 125ಕ್ಕೆ 125 ಅಂಕ ಪಡೆದ ಎಂ.ಸಾಯಿಶ್ರೀ ಹಾಗೂ ಆರ್.ಚಂದನ 125ಕ್ಕೆ 124 ಅಂಕಗಳನ್ನು ಗಳಿಸಿದ್ದರು. ಪಿಯುಸಿಯಲ್ಲಿ ಡಿಸ್ಟಿಂಗ್‍ಷನ್‍ನಲ್ಲಿ ಪಿ.ಜೀವನ್ ಹಾಗೂ ಪೂಜಾಶ್ರೀ ಅತಿ ಹೆಚ್ಚು ಅಂಕಗಳನ್ನು ಪಡೆದಿದ್ದರು. ವೇದಿಕೆಯ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಪ್ರಾರಂಭದಲ್ಲಿ ಶಿಕ್ಷಕಿ ಆಶಾ ಪ್ರಾರ್ಥನೆಯನ್ನು ಮಾಡಿದರು. ಶಿಕ್ಷಕಿ ಕವಿತಾ ಎಲ್ಲರನ್ನೂ ಸ್ವಾಗತಿಸಿದರು. ಶಿಕ್ಷಕಿ ರಾಜೇಶ್ವರಿ ನಿರೂಪಣೆಗೈದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: