
ಪ್ರಮುಖ ಸುದ್ದಿ
ಗುಡ್ಡ ಕುಸಿತ ಹಿನ್ನೆಲೆ : ಶಿರಾಡಿ ಘಾಟ್ ವಾಹನ ಸಂಚಾರ ಸ್ಥಗಿತ
ರಾಜ್ಯ(ಮಂಗಳೂರು)ಆ.16:- ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೇ ಸುರಿಯುತ್ತಿದ್ದ ಮಳೆ ಬುಧವಾರ ಕೊಂಚ ಶಾಂತವಾಗಿದ್ದು, ನದಿಗಳಲ್ಲಿ ಪ್ರವಾಹ ಅಪಾಯಮಟ್ಟಕ್ಕಿಂತ ಕೆಳಗಿಳಿದಿದೆ. ಶಿರಾಡಿ ಘಾಟಿಯ ಮೇಲೆ ಅಲ್ಲಲ್ಲಿ ಮರ ಉರುಳಿ ಬೀಳುವುದು, ಗುಡ್ಡ ಕುಸಿಯುವುದು ನಡೆದಿರುವುದರಿಂದ ವಾಹನ ಸಂಚಾರ ಹತ್ತು ದಿನಗಳ ಕಾಲ ಬಾಧಿತವಾಗಿಯೇ ಇರುವುದರಿಂದ ಹೆದ್ದಾರಿಯಲ್ಲಿ ವಾಹನ ಸಂಚಾರವನ್ನು ರದ್ದುಪಡಿಸಿ ಉಪವಿಭಾಗಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮಂಗಳವಾರ ರಾತ್ರಿ ರಾಷ್ಟ್ರೀಯ ಹೆದ್ದಾರಿ 75ರ ದೊಡ್ಡತಪ್ಳು ಬಳಿ ಅನಿಲ್ ಟ್ಯಾಂಕರ್ ಒಂದು ಉರುಳಿಬಿದ್ದು, ಚಾಲಕ ಕ್ಲೀನರ್ ಸಾವನ್ನಪ್ಪಿದ್ದರು. ಸ್ಥಳಕ್ಕೆ ಅಪಘಾತ ನೋಡಲು ತೆರಳಿದ ವ್ಯಕ್ತಿಯೋರ್ವರು ವಾಹನ ಬಡಿದು ಸಾವನ್ನಪ್ಪಿದ್ದರು. ಟ್ಯಾಂಕರ್ ನಿಂದ ಅನಿಲ ಕೂಡ ಸೋರಿಕೆಯಾಗಿತ್ತು. ಹೆದ್ದಾರಿ ಮೇಲೆ ಕಲ್ಲು ಮಣ್ಣುಗಳುರುಳುತ್ತಿದ್ದು, ವಾಹನ ಸಂಚಾರ ಅಪಾಯವಾಗಿಯೇ ಇದೆ. ಇದರಿಂದ ವಾಹನ ಸಂಚಾರ ರದ್ದುಪಡಿಸಲಾಗಿದೆ. ಸುಬ್ರಹ್ಮಣ್ಯ ಸಕಲೇಶಪುರ ನಡುವಿನ ರೈಲ್ವೆ ಹಳಿಯಲ್ಲಿ ಎಡಕುಮೇರಿ ಬಳಿ ಗುಡ್ಡ ಕುಸಿದಿದ್ದು,ತೆರವು ಗೊಳಿಸಿದರೂ ಮತ್ತೆ ಮತ್ತೆ ಕುಸಿಯುತ್ತಿದೆ. ಇದರಿಂದ ಮಾರ್ಗ ಸುಗಮವಾಗಲು ಇನ್ನೂ ನಾಲ್ಕೈದು ದಿನ ಬೇಕಾಗಬಹುದೆಂದು ರೈಲ್ವೆ ಮೂಲಗಳು ತಿಳಿಸಿವೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)