ಕರ್ನಾಟಕಮೈಸೂರು

ಸಾಹಿತ್ಯವನ್ನು ಇಂದು ಹಳ್ಳಿಗಳಿಗೆ ತಲುಪಿಸಬೇಕಾದ ಅಗತ್ಯತೆಯಿದೆ : ಡಾ.ನಿರಂಜನ ವಾನಳ್ಳಿ

‘ಆ್ಯಪಲ್ ನಾಡಿನ ಮೆಲುಕು ಪ್ರವಾಸ ಕಥನ’ ಲೋಕಾರ್ಪಣೆ

ರಾಜ್ಯ(ಶಿವಮೊಗ್ಗ),ಆ.16:- ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ, ಖ್ಯಾತ ಬರಹಗಾರ ಡಾ. ನಿರಂಜನ ವಾನಳ್ಳಿಯವರ ‘ಪ್ರವಾಸ ಕಥನ, ಆ್ಯಪಲ್ ನಾಡಿನ ಮೆಲುಕು’ ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಆನವಟ್ಟಿ ಗ್ರಾಮದಲ್ಲಿ ಲೋಕಾರ್ಪಣೆಗೊಂಡಿತು.

ಮೈಸೂರಿನ ನನಸು ಪ್ರಕಾಶನದಿಂದ ಪ್ರಕಾಶಿಸಲ್ಪಟ್ಟ ಆ್ಯಪಲ್ ನಾಡಿನ ಮೆಲುಕು ಹಾಗೂ ಗುರುರಾವ್ ನಾಡಿಗ್ ಅವರ ಚುಟುಕು ಕುಟುಕು ಕೃತಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಆನವಟ್ಟಿ ಘಟಕ, ವಿಶ್ವಭಾರತಿ‌ ಟ್ರಸ್ಟ್, ಹಾಗೂ ಲಯನ್ಸ್ ಕ್ಲಬ್ ಆನವಟ್ಟಿ ಇವರ ಸಂಯುಕ್ತ ಆಶ್ರಯದಲ್ಲಿ ಶೋಭಾಬಾಯಿ ಅನಂತ ರಾವ್ ದತ್ತಿನಿಧಿ ಕಾರ್ಯಕ್ರಮದ ಅಡಿಯಲ್ಲಿ ಲೋಕಾರ್ಪಣೆಗೊಂಡಿತು.

ಈ ಸಂದರ್ಭ ಕೃತಿಯ ಕರ್ತೃ ಡಾ.ನಿರಂಜನ ವಾನಳ್ಳಿ ಮಾತನಾಡಿ ಸಾಹಿತ್ಯವನ್ನು ಇಂದು ಹಳ್ಳಿಗಳಿಗೆ ತಲುಪಿಸಬೇಕಾದ ಅಗತ್ಯತೆಯಿದೆ. ಪುಸ್ತಕ ಬಿಡುಗಡೆಯಂತಹ ಸಮಾರಂಭಗಳು ಇಂದು ಗ್ರಾಮೀಣ ಪ್ರದೇಶಗಳಲ್ಲಿ ನಡೆಯಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಸಾಹಿತ್ಯಾಸಕ್ತರ ಸಂಖ್ಯೆ ಸಾಕಷ್ಟಿದೆ. ಒಂದು ಸುಂದರ ಸಂಜೆ ಪುಸ್ತಕ ಬಿಡುಗಡೆ, ಸಾಹಿತ್ಯದ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸಿದರೆ ಗ್ರಾಮೀಣ ಪ್ರದೇಶದ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ,” ಎಂದು ಹೇಳಿದರು. ಇಂದು ನಾವೆಲ್ಲರೂ ಸಮಯವಿಲ್ಲ ಎಂದು ಹೇಳುವ ಮನಸ್ಥಿತಿ ಹೊಂದಿದ್ದೇವೆ. ಯಾವುದೇ ಕೆಲಸ ಮಾಡುತ್ತಿರದಿದ್ದರೂ ನಮಗೆ ಸಮಯವಿರುವುದಿಲ್ಲ. ಹೀಗಿರುವಾಗ ಅತ್ಯಂತ ಕಡಿಮೆ ಅವಧಿಯಲ್ಲಿ ಓದುವಂತಹ ಪುಸ್ತಕಗಳನ್ನು ಓದುಗರಿಗೆ ನೀಡುವ ಅಗತ್ಯತೆಯಿದೆ. ಆ್ಯಪಲ್ ನಾಡಿನ ಮೆಲುಕು ಎಂಬ ನನ್ನ ಹಿಮಾಚಲ ಪ್ರದೇಶ ಪ್ರವಾಸ ಕಥನ ಒಂದು ಕೂರುವಿಕೆಯಲ್ಲಿ ಮುಗಿಯುವಂತಹ ಪುಸ್ತಕ. ಓದುಗರಿಗೆ ಇಷ್ಟವಾಗಬಲ್ಲ ಈ ಕೃತಿ ಇಂದು ಆನವಟ್ಟಿಯಂತಹ ಗ್ರಾಮೀಣ ಪ್ರದೇಶದಲ್ಲಿ ಬಿಡುಗಡೆಯಾಗಿರುವುದು ನನಗೆ ಅತ್ಯಂತ ಸಂತಸ ನೀಡಿದೆ ಎಂದರು.

ಆನವಟ್ಟಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಉಮೇಶ್ ಬಿಚ್ಚುಗತ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಮಂಜುನಾಥ್, ಸೊರಬ ತಾಲೂಕು ಪಂಚಾಯತ್ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ, ಶಿವಮೊಗ್ಗ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಿ ಬಿ ಶಂಕ್ರಪ್ಪ, ಗುರುರಾವ್ ನಾಡಿಗ್, ಮೈಸೂರಿನ ನನಸು ಪ್ರಕಾಶನದ ಸಂಸ್ಥಾಪಕರಾದ ಶ್ರೀಹರ್ಷ ಮತ್ತು ಶೃತಿ ಶ್ರೀಹರ್ಷ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. (ಎಸ್.ಎಚ್)

Leave a Reply

comments

Related Articles

error: