ಮೈಸೂರು

ಗಿರಗೂರು ಗ್ರಾಮದಲ್ಲಿ ಮಾದರಿ ಅಂಗನವಾಡಿ

ಬೈಲಕುಪ್ಪೆ: ಅಂಗನವಾಡಿ ಕೇಂದ್ರವೆಂದರೆ ಸರಿಯಾದ ನಿರ್ವಹಣೆ ಇಲ್ಲದಿರುವುದೇ ಹೆಚ್ಚು ಎನ್ನಬಹುದು. ಆದರೆ ಇಲ್ಲೊಂದು ಕೇಂದ್ರ ನೋಡುಗರ ಮನಸೆಳೆಯುವಂತಿದ್ದು, ಎಲ್ಲರಿಗೂ ಮಾದರಿಯಾಗಿರುವುದನ್ನು ಕಾಣಬಹುದಾಗಿದೆ.

ತಾಲೂಕಿನ ಬೈಲಕುಪ್ಪೆ ಸಮೀಪದ ಗಿರಗೂರು ಗ್ರಾಮದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೇರಿದ ಅಂಗನವಾಡಿ ಕಟ್ಟಡವೇ ಉತ್ತಮ ಪರಿಸರದೊಂದಿಗೆ ಎಲ್ಲರ ಗಮನ ಸೆಳೆಯುತ್ತಿದೆ. ಗ್ರಾಮದ ಅವರಿವರ ಖಾಸಗಿ ಮನೆಯಲ್ಲಿ 2-3 ವರ್ಷಗಳ ಕಾಲ ನಡೆದುಕೊಂಡು ಬರುತ್ತಿದ್ದ ಅಂಗನವಾಡಿ ಕೇಂದ್ರಕ್ಕೆ ಕಳೆದ 6 ವರ್ಷಗಳ ಹಿಂದೆಯಷ್ಟೆ ಕಾಂಪೌಂಡಿನೊಂದಿಗೆ ಕಟ್ಟಡವನ್ನು ನಿರ್ಮಿಸಲಾಗಿದೆ.

ಈ ಅಂಗನವಾಡಿ ಕೇಂದ್ರದಲ್ಲಿ ಶಿಕ್ಷಕಿಯಾಗಿ ಶ್ಯಾಮಲಾ ಮತ್ತು ಸಹಾಯಕಿಯಾಗಿ ಸರೋಜ ಎಂಬುವವರು ನೇಮಕವಾಗಿ ಕಾರ್ಯನಿರ್ವಹಿಸುತ್ತಿದ್ದು, 7 ರಿಂದ 10 ಮಕ್ಕಳು ದಾಖಲಾಗಿರುವುದನ್ನು ಕಾಣಬಹುದಾಗಿದೆ. ಕೇಂದ್ರವು ಕಾಂಪೌಂಡ್ ಒಳಗೆ ಮಕ್ಕಳ ಆಟೋಟಗಳ ಸಂಪನ್ಮೂಲಗಳನ್ನು ಹೊಂದಿದ್ದು, ಇದರ ಜೊತೆಗೆ ವಿವಿಧ ರೀತಿಯ ಬಣ್ಣದ ಹೂಗಳು ಹಾಗೂ ತರಕಾರಿ ಗಿಡಗಳೊಂದಿಗೆ ಹಸಿರು ಕಂಗೊಳಿಸುತ್ತಿದೆ.

ಅಂಗನವಾಡಿ ಕಟ್ಟಡ ಮತ್ತು ಶೌಚಾಲಯದ ಗೋಡೆ ಹಾಗೂ ಕಾಂಪೌಂಡ್‌ನಲ್ಲಿ ರಾಜ್ಯ ಮತ್ತು ರಾಷ್ಟ್ರದ ಪ್ರತಿಷ್ಠೆಯನ್ನು ಸಾರುವ ನುಡಿಗಳೊಂದಿಗೆ ವನ್ಯಜೀವಿಗಳ ಚಿತ್ತಾರಗಳನ್ನು ಬಿಡಿಸಿರುವುದು ಎಲ್ಲರನ್ನು ಸೆಳೆಯುತ್ತಿವೆ.

ಇದರ ನಿರ್ವಹಣೆ ಬಗ್ಗೆ ಶಿಕ್ಷಕಿ ಶ್ಯಾಮಲಮ್ಮ ಮಾತನಾಡಿ, ಗ್ರಾಮದ ಅಕ್ಕ-ಪಕ್ಕದಲ್ಲಿರುವ ಶ್ರೀಬಸವೇಶ್ವರ, ಶ್ರೀದೊಡ್ಡಮ್ಮತಾಯಿ, ಶ್ರೀಚಿಕ್ಕಮ್ಮತಾಯಿ ಹಾಗೂ ನಿತ್ಯಜ್ಯೋತಿ ಸೇರಿದಂತೆ ಅನೇಕ ಮಹಿಳಾ ಸ್ವ-ಸಹಾಯ ಸಂಘಗಳು ಪ್ರತಿ ಶನಿವಾರ ಮಧ್ಯಾಹ್ನದ ನಂತರ ಇಲ್ಲೆ ಸಭೆ ನಡೆಸುತ್ತಾರೆ. ಆದ್ದರಿಂದ ಅಂಗನವಾಡಿ ಕೇಂದ್ರಕ್ಕೆ ಗೋಡೆ ಗಡಿಯಾರ, ಚಾಪೆ, ಕುರ್ಚಿ ಸೇರಿದಂತೆ ಹಲವು ಅಗತ್ಯ ವಸ್ತುಗಳನ್ನು ಕೊಡುಗೆಯಾಗಿ ನೀಡುತ್ತಿದ್ದು, ಗೋಡೆಬರಹವನ್ನು ಮೈಸೂರಿನ ಕಲಾ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಮಾಡಿಕೊಟ್ಟಿದ್ದಾರೆ.

ಎಲ್ಲರ ಸಹಕಾರದಿಂದ ಉತ್ತಮ ಕೇಂದ್ರವಾಗಿ ಗುರ್ತಿಸಿಕೊಂಡಿದ್ದು, ಪ್ರಶಸ್ತಿಗೂ ಪಾತ್ರವಾಗಿದೆ. ಗಿಡಗಳಿಗೆ ಬರದ ಛಾಯೆ ಆವರಿಸಿರುವುದರಿಂದ ನೀರಿನ ಸಮಸ್ಯೆ ದಿನೇ ದಿನೇ ಎದುರಾಗುತ್ತಿದೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.

ಅಲ್ಲದೆ ಕೂಲಿಯನ್ನೇ ನಂಬಿಕೊಂಡು ಬದುಕುತ್ತಿರುವ ಜನರೇ ಈ ಗ್ರಾಮದ ಸುತ್ತ-ಮುತ್ತ ಹೆಚ್ಚಿನ ಸಂಖ್ಯೆಯಲ್ಲಿದ್ದು, ಸಮೀಪವಿರುವ ತೋಟಗಳನ್ನು ಕಳೆದ 8-10 ತಿಂಗಳಿನಿಂದಲೂ ಉತ್ತರ ಭಾರತ ಮತ್ತು ನೆರೆ ರಾಜ್ಯಗಳಿಂದ ಕೂಲಿಗಾಗಿ ವಲಸೆ ಬಂದು ತೋಟಗಳಲ್ಲೆ ಬಿಡಾರ ಹೂಡಿದ್ದಾರೆ. ಇವರಲ್ಲಿ ಬಹಳಷ್ಟು ಮಂದಿ ಗರ್ಭಿಣಿ ಸ್ತ್ರೀಯರು ಮತ್ತು ಹಸುಗೂಸುಗಳಿದ್ದು, ಅವರಿಗೆ ಇಲಾಖೆಯಿಂದ ದೊರೆಯುವ ಸೌಲಭ್ಯವನ್ನು ಒದಗಿಸುವುದರೊಂದಿಗೆ ಆಹಾರ ಪದಾರ್ಥಗಳನ್ನು ತಲುಪಿಸಲಾಗುತ್ತಿದೆ ಎಂದು ವಿವರಿಸಿದರು.

ಅಂಗನವಾಡಿಯಲ್ಲಿನ ಮಕ್ಕಳಿಗೆ ಎಲ್ಲ ರೀತಿಯ ಸೌಲಭ್ಯ ದೊರೆಯುವ ಅವಕಾಶ ಇದ್ದರೂ ಅವಕಾಶ ವಂಚಿತರಾಗುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಮಾದರಿ ಕೇಂದ್ರಗಳನ್ನು ನೋಡಿ ಎಲ್ಲರೂ ಎಚ್ಚೆತ್ತುಕೊಳ್ಳಬೇಕೆಂಬುದೇ ನಾಗರಿಕರ ಮನವಿಯಾಗಿದೆ.

ವರದಿ: ರಾಜೇಶ್.

bylakuppe-two

Leave a Reply

comments

Related Articles

error: