ಮೈಸೂರು

ಕಬ್ಬುದರ ನಿಗದಿಗಾಗಿ ಡಿ.26ರಂದು ಸಕ್ಕರೆ ಸಚಿವರ ನಿವಾಸದ ಮುಂದೆ ಪ್ರತಿಭಟನೆ : ಕುರುಬೂರ್ ಶಾಂತಕುಮಾರ್

ಬಣ್ಣಾರಿ ಸಕ್ಕರೆ ಕಾರ್ಖಾನೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಕಳೆದ ವರ್ಷಕ್ಕಿಂತ ಕಡಿಮೆ ಕಬ್ಬಿನ ದರ ನೀಡಿ ರೈತರಿಗೆ ದ್ರೋಹವೆಸಗಲಾಗುತ್ತಿದೆ. ಹಿಂದಿನ ಸಾಲಿನ ಎಸ್ಎಪಿ ದರವನ್ನು ಟನ್ ಗೆ ಸುಮಾರು 250ರೂ. ನೀಡದೇ ರೈತರನ್ನು ವಂಚಿಸಲಾಗುತ್ತಿದೆ. ಜಿಲ್ಲಾಡಳಿತ ಹಾಗೂ ಸರ್ಕಾರ ನಿರ್ಲಕ್ಷ್ಯವಹಿಸುತ್ತಿದೆ. ಅದಕ್ಕಾಗಿ ಕಬ್ಬು ಬೆಳೆಗಾರರ ನ್ಯಾಯಕ್ಕಾಗಿ ಒತ್ತಾಯಿಸಿ ಡಿಸೆಂಬರ್ 26 ರಂದು ಮೈಸೂರಿನಲ್ಲಿ ಪ್ರತಿಭಟನೆ ಹಾಗೂ ನಿರಂತರ ಧರಣಿಯನ್ನು ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಕಬ್ಬುಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್ ತಿಳಿಸಿದರು.

ಮೈಸೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಕ್ಕರೆ ಸಚಿವ ಮಹದೇವಪ್ರಸಾದ್ ಬೆಳಗಾವಿಯ ಅಧಿವೇಶನದ ವೇಳೆ ಬಿಜಾಪುರ, ಬಾಗಲಕೋಟೆ, ಬೆಳಗಾವಿ 3 ಜಿಲ್ಲೆಗಳಿಗೆ ಎಫ್ಆರ್ ಪಿ ದರ ರೂ. 2,300 ಗೆ ಹೆಚ್ಚುವರಿಯಾಗಿ ರೂ. 300 ಏರಿಕೆ ಮಾಡಿ ಪ್ರಕಟಿಸಿದ್ದಾರೆ. ಆದರೆ ಬೇರೆ ಜಿಲ್ಲೆಗಳ ರೈತರ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆ. ಇಂತಹ ತಾರತಮ್ಯ ನೀತಿಯನ್ನು ಖಂಡಿಸಿ ನಿರಂತರ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಕೃಷಿಸಾಲ ಮರುಪಾವತಿಯ ಅವಧಿಯನ್ನು ಏಪ್ರಿಲ್ ತಿಂಗಳ ತನಕ ವಿಸ್ತರಿಸಬೇಕು. 60 ದಿನಗಳ ಅವಧಿ ವಿಸ್ತರಣೆ ಯಾವುದೇ ಪ್ರಯೋಜನವಾಗುವುದಿಲ್ಲ. ರೈತರು ಬರಗಾಲದಿಂದ ನರಳುತ್ತಿರುವಾಗ ಸಾಲ ಮರುಪಾವತಿ ಹೇಗೆ ಸಾಧ್ಯ ಎಂಬುದನ್ನು ಅರಿತು ವಿಸ್ತರಿಸಬೇಕು ಎಂದರು. ಕಬಿನಿ ಅಚ್ಚುಕಟ್ಟು ಭಾಗದ ರೈತರಿಗೆ ಬೆಳೆ ನಷ್ಟ ಪರಿಹಾರ ಎಕರೆಗೆ ಕನಿಷ್ಠ 25 ಸಾವಿರ ನೀಡಲು ಕೂಡಲೇ ನಿರ್ಧಾರ ಕೈಗೊಳ್ಳಬೇಕು. ದಿಡ್ಡಳ್ಳಿ ನೀರಾವರಿ ಹೋರಾಟ ಬೆತ್ತಲೆ ಪ್ರತಿಭಟನೆ ನಂತರ ಎಚ್ಚೆತ್ತ ಸರ್ಕಾರದ ನಡವಳಿಕೆ ಪ್ರಜಾಪ್ರಭುತ್ವಕ್ಕೆ ಅಪಮಾನವಾಗಿದೆ. ಅದಕ್ಕಾಗಿ ಡಿಸೆಂಬರ್ 26 ರಂದು ಬೆಳಿಗ್ಗೆ 11 ಗಂಟೆಗೆ ಸಕ್ಕರೆ ಸಚಿವರ ಕುವೆಂಪುನಗರದ ನಿವಾಸದ ಮುಂದೆ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ತಾಲೂಕು ಅಧ್ಯಕ್ಷ ಕಿರಗಸೂರು ಶಂಕರ್, ಹಾಡ್ಯ ರವಿ, ವರಕೂಡು ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: