ಮೈಸೂರು

ಡಿ.23-25 : ಮೈಸೂರಿನಲ್ಲಿ ಮೊದಲ ಬಾರಿಗೆ ರಾಜ್ಯ ಮಟ್ಟದ ಯುವಜನೋತ್ಸವ

ಸ್ವಾಮಿ ವಿವೇಕಾನಂದ ಜನ್ಮದಿನೋತ್ಸವದ ಅಂಗವಾಗಿ ಇದೇ ಮೊದಲ ಬಾರಿಗೆ ರಾಜ್ಯಮಟ್ಟದ ಯುವಜನೋತ್ಸವ ಕಾರ್ಯಕ್ರಮವನ್ನು ಡಿ.23ರಂದು ಮೈಸೂರಿನಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ತಿಳಿಸಿದರು.

ಬುಧವಾರ ಮೈಸೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ನಡೆದ ಜಿಲ್ಲಾ ಮಟ್ಟದ ಸ್ಪರ್ಧೆಗಳಲ್ಲಿ ವಿಜೇತರಾದ ಸುಮಾರು 2000 ಮಂದಿ ಸ್ಪರ್ಧಾಳುಗಳು ಭಾಗವಹಿಸಲಿದ್ದು, ಶಾಸ್ತ್ರೀಯ ನೃತ್ಯ ಶಾಸ್ತ್ರೀಯ ವಾದ್ಯ, ಹಾರ್ಮೋನಿಯಂ, ಗಿಟಾರ್, ಶಾಸ್ತ್ರೀಯ ಗಾಯನ, ಆಶುಭಾಷಣ, ಏಕಾಂಗಿ ನಾಟಕ, ಜನಪದ ಗೀತೆ ಮತ್ತು ಜನಪದ ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಹೇಳಿದರು.

23 ರಂದು ಮಧ್ಯಾಹ್ನ 1 ಗಂಟೆಗೆ ಕಲಾ ಜಾಥಾ ನಡೆಯಲಿದ್ದು, ಮಧ್ಯಾಹ್ನ 3 ಗಂಟೆಗೆ ಕಲಾಮಂದಿರದಲ್ಲಿ ನಡೆಯುವ ಕಾರ್ಯಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಸಂಚಿಕೆಯನ್ನು ಸಚಿವ ಮಹದೇವಪ್ಪ ಬಿಡಗಡೆ ಮಾಡಲಿದ್ದು, ಸಚಿವರಾದ ಪ್ರಮೋದ್ ಮಧ್ವರಾಜ್, ತನ್ವೀರ್ ಸೇಠ್, ಶಾಸಕ ವಾಸು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. 3 ದಿನಗಳ ಕಾರ್ಯಕ್ರಮ 25 ರಂದು ಸೆನೆಟ್ ಭವನದಲ್ಲಿ ಸಮಾರೋಪಗೊಳ್ಳಲಿದೆ. ಭಾಗವಹಿಸಲು ಇಚ್ಛಿಸುವವರು 23 ರಂದು ಬೆಳಿಗ್ಗೆ 7 ಗಂಟೆಯಿಂದ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದರು.

ಅರಮನೆಯಲ್ಲಿ ಫಲಪುಷ್ಪ ಪ್ರದರ್ಶನ: ನಗರಕ್ಕೆ ಆಗಮಿಸುವ ಪ್ರವಾಸಿಗರನ್ನು ಆಕರ್ಷಿಸುವ ಸಲುವಾಗಿ ಅರಮನೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಆಯೋಜಿಸಲಾಗಿದ್ದು, 23 ರಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಯ್ಯ ಅವರು ಉದ್ಘಾಟಿಸಲಿದ್ದಾರೆ. ಪ್ರದರ್ಶನ 10 ದಿನಗಳ ಕಾಲ ನಡೆಯಲಿದ್ದು, 15 ಸಾವಿರ ವಿಭಿನ್ನ ರೀತಿಯ ಅಲಂಕಾರಿಕ ಹೂಗಳು, ಬೋನ್ಸಾಯ್ ಗಿಡಗಳನ್ನು ಪ್ರದರ್ಶನದಲ್ಲಿಡಲಾಗಿದೆ. ವಯಸ್ಕರಿಗೆ 20 ಹಾಗೂ ಮಕ್ಕಳಿಗೆ 10 ರೂ. ಪ್ರವೇಶ ದರ ನಿಗದಿ ಮಾಡಲಾಗಿದೆ. ಇದೇ ವೇಳೆ ಅರಮನೆ ಆವರಣದಲ್ಲಿ ಛಾಯಾಚಿತ್ರ ಪ್ರದರ್ಶನ, ಉಚಿತ ವೈ-ಫೈ ಹಾಟ್‍ಸ್ಪಾಟ್, ಹೆಲ್ತ್ ಕಿಯೋಸ್ಕ್ ಮತ್ತು ಶಿಶು ಆರೈಕೆ ಕೇಂದ್ರಗಳನ್ನು ಉದ್ಘಾಟಿಸಲಾಗುವುದು.

ಕೇಕ್ ಉತ್ಸವ: ಜಿಲ್ಲಾ ಹೋಟೆಲ್‍ಗಳು, ಬೇಕರಿ ಮತ್ತು ರೆಸ್ಟೋರೆಂಟ್ ಮಾಲೀಕರ ಸಂಘ ಪ್ರವಾಸಿ ನಿರ್ವಾಹಕ ಸಂಸ್ಥೆಗಳು ಹಾಗೂ ಪ್ರವಾಸಿ ಮಾರ್ಗದರ್ಶಿಗಳು ಹಾಗೂ ಇತರೆ ಸಂಘ ಸಂಸ್ಥೆಗಳ ಸಹಯೋಗ ಹಾಗೂ ಜಿಲ್ಲಾಡಳಿತದ ನೆರವಿನೊಂದಿಗೆ ಡಿ.27 ಹಾಗೂ 28 ರಂದು ಕೇಕ್ ಉತ್ಸವವನ್ನು ಆಯೋಜಿಸಲಾಗಿದೆ. ಬೇಕರಿಗಳು ಕಾಂಡಿಮೆಂಟ್ಸ್, ಹೋಟೆಲ್‍ಗಳು ಮತ್ತು ರೆಸ್ಟೋರೆಂಟ್‍ಗಳು ಹಾಗೂ ಸಾರ್ವಜನಿಕರು, ಗೃಹ ತಯಾರಕರ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದೆ.

ಸುದ್ದಿಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಇಲಾಖೆ ಉಪ ನಿರ್ದೇಶಕ ಕಾ.ರಾಮೇಶ್ವರಪ್ಪ, ವೆಂಕಟೇಶ್, ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: