ದೇಶಪ್ರಮುಖ ಸುದ್ದಿ

ಹೆಸರಿಗೆ ಮಾತ್ರವಿರುವ ರಾಜಕೀಯ ಪಕ್ಷಗಳು ಪಟ್ಟಿಯಿಂದ ಹೊರಕ್ಕೆ..?

ಸುಮಾರು 200 ರಾಜಕೀಯ ಪಕ್ಷಗಳನ್ನು ಪಟ್ಟಿಯಿಂದ ತೆಗೆದುಹಾಕುವಂತೆ ಭಾರತೀಯ ಚುನಾವಣಾ ಆಯೋಗವು ಶೀಘ್ರದಲ್ಲೇ ಕೇಂದ್ರ ನೇರ ತೆರಿಗೆಗಳ ಮಂಡಳಿ(ಸಿಬಿಡಿಟಿ)ಗೆ ಶಿಫಾರಸು ಮಾಡಲಿದೆ. ಪಟ್ಟಿಯಿಂದ ಹೊರಹಾಕಬೇಕಾದ ಪಕ್ಷಗಳ ಹೆಸರು ಮತ್ತು ಮಾಹಿತಿಯನ್ನು ಆಯೋಗವು ಕೆಲ ದಿನಗಳಲ್ಲಿ ಸಿಬಿಡಿಟಿಗೆ ಕಳುಹಿಸಲಿದೆ.

ಈ ಪಕ್ಷಗಳು ಹೆಸರಿಗೆ ಮಾತ್ರವಿದ್ದು, 2005ರಿಂದ ಯಾವುದೇ ಚುನಾವಣೆಯಲ್ಲೂ ಸ್ಪರ್ಧಿಸಿಲ್ಲ. ಅಕ್ರಮವಾಗಿ ಹಣ ಸಂಪಾದಿಸಲು ರಾಜಕೀಯ ಪಕ್ಷದ ಹೆಸರನ್ನು ಇಟ್ಟುಕೊಂಡಿರಬಹುದೆಂದು ಚುನಾವಣಾ ಆಯೋಗ ಸಂಶಯ ವ್ಯಕ್ತಪಡಿಸಿದೆ.

ಇದು ಕೇವಲ ಆರಂಭವಷ್ಟೇ. ಇತರ ಕೆಲ ಪಕ್ಷಗಳ ಹೆಸರನ್ನೂ ಪಟ್ಟಿಯಿಂದ ತೆಗೆದುಹಾಕಲು ಚಿಂತನೆ ನಡೆಯುತ್ತಿದೆ. ಕೆಲ ಪಕ್ಷಗಳು ತಮ್ಮ ಆದಾಯದ ಮೂಲ ಮತ್ತು ತೆರಿಗೆ ಕಟ್ಟಿರುವ ಬಗ್ಗೆ ಯಾವುದೇ ಮಾಹಿತಿಯನ್ನು ಈವರೆಗೆ ಸಲ್ಲಿಸಿಲ್ಲ ಎಂದು ಆಯೋಗ ತಿಳಿಸಿದೆ.

ಪಟ್ಟಿಯಿಂದ ಹೊರಹಾಕಲಾಗುವ ಪಕ್ಷಗಳ ಹಣಕಾಸಿನ ವ್ಯವಹಾರಗಳ ಬಗ್ಗೆ ಕೇಂದ್ರ ನೇರ ತೆರಿಗೆಗಳ ಮಂಡಳಿಯು ತೀವ್ರ ನಿಗಾ ಇಡಬೇಕು. ಇದರಿಂದ ಕಪ್ಪುಹಣ ಬಿಳಿ ಮಾಡುವ ನಿಟ್ಟಿನಲ್ಲಿ ರಾಜಕೀಯ ಪಕ್ಷ ಕಟ್ಟಿಕೊಂಡವರಿಗೆ ಸ್ಪಷ್ಟ ಸಂದೇಶ ತಲುಪುತ್ತದೆ ಎಂದು ಚುನಾವಣಾ ಆಯೋಗವು ಅಭಿಪ್ರಾಯಪಟ್ಟಿದೆ.

ಪ್ರಸ್ತುತ 7 ರಾಷ್ಟ್ರೀಯ ಪಕ್ಷಗಳು, 58 ರಾಜ್ಯ ಪಕ್ಷಗಳು ಮತ್ತು 1786 ಗುರುತಿಸದಿರುವ ರಾಜಕೀಯ ಪಕ್ಷಗಳಿವೆ ಎಂದು ಆಯೋಗ ಮಾಹಿತಿ ನೀಡಿದೆ.

ಸುಗ್ರೀವಾಜ್ಞೆ ಹೊರಡಿಸಲು ಕೇಂದ್ರ ಸರಕಾರ ನಿರ್ಧಾರ: ಎರಡು ಸುಗ್ರೀವಾಜ್ಞೆಯನ್ನು ಹೊರಡಿಸಲು ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸರಕಾರಿ ಮತ್ತು ಖಾಸಗಿ ನೌಕರರಿಗೆ ಆನ್‍ಲೈನ್ ಮತ್ತು ಚೆಕ್‍ ಮೂಲಕ ವೇತನ ಪಾವತಿ ಬಗ್ಗೆ ಕೇಂದ್ರ ಸರಕಾರ ಶೀಘ್ರವೇ ಸುಗ್ರೀವಾಜ್ಞೆ ಹೊರಡಿಸಲು ನಿರ್ಧರಿಸಿದೆ.

Leave a Reply

comments

Related Articles

error: