ಪ್ರಮುಖ ಸುದ್ದಿ

1300 ಕುಟುಂಬಗಳ ಸ್ಥಳಾಂತರ : ಇಂದಿರಾ ನಗರ, ಚಾಮುಂಡೇಶ್ವರಿ ನಗರ ಈಗ ನಿರ್ಜನ ಪ್ರದೇಶ

ರಾಜ್ಯ(ಮಡಿಕೇರಿ )ಆ.17 :- ಕೊಡಗು ಜಿಲ್ಲೆಯಾದ್ಯಂತ ಆಶ್ಲೇಷ ಮಳೆಯ ಕೊನೆಯ ದಿನವಾದ ಗುರುವಾರ ರಾತ್ರಿ ಬಿರುಗಾಳಿಯೊಂದಿಗೆ ಸುರಿದ ಧಾರಾಕಾರ ಮಳೆಗೆ ಮಡಿಕೇರಿ ನಗರದ ಬಹುತೇಕ ಬಡಾವಣೆಗಳಲ್ಲಿ ಬರೆಕುಸಿತದಿಂದ ಮನೆಗಳು ನಾಶವಾಗಿವೆ. ಪ್ರಮುಖವಾಗಿ ಎತ್ತರದ ಪ್ರದೇಶವಾಗಿರುವ ಇಂದಿರಾ ನಗರ ಹಾಗೂ ಚಾಮುಂಡೇಶ್ವರಿ ನಗರದಲ್ಲಿ ಸಾಲು ಸಾಲಾಗಿ ಮನೆಗಳು ಕುಸಿಯುತ್ತಿದ್ದು, ಗುಡ್ಡ ಸಹಿತ ಮಂಗಳೂರು ರಸ್ತೆಯನ್ನು ಆವರಿಸಿಕೊಂಡಿವೆ.

ಭಾರೀ ಅಪಾಯದ ಪರಿಸ್ಥಿತಿ ಎದುರಾದ ಕಾರಣ ನಗರದ ಶ್ರೀ ಕುಂದುರುಮೊಟ್ಟೆ ಚೌಟಿ ಮಾರಿಯಮ್ಮ ದೇವಸ್ಥಾನದ ಬಳಿಯಿಂದ ಮಂಗಳೂರು ರಸ್ತೆಯ ತಾಳತ್‍ಮನೆಯವರೆಗಿನ ಎಲ್ಲಾ 1300 ಕುಟುಂಬಗಳನ್ನು ಗಂಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಬಡವರು, ಕಾರ್ಮಿಕ ವರ್ಗ ಬೆಟ್ಟದ ಮೇಲೊಂದು ನೆಲೆ ಕಂಡುಕೊಂಡು ಕಳೆದ ಎರಡು ದಶಕಗಳಿಗಿಂತಲೂ ಹೆಚ್ಚಿನ ಕಾಲ ಜೀವನ ನಡೆಸಿದ ಇಡೀ ಪ್ರದೇಶವನ್ನೆ ತೊರೆಯುವಂತಹ ದಯನೀಯ ಸ್ಥಿತಿ ಬಂದೊದಗಿದೆ. ಸುಮಾರು ಒಂದೂವರೆ ಸಾವಿರಕ್ಕೂ ಅಧಿಕ ಕುಟುಂಬಗಳಿದ್ದ ಪ್ರದೇಶ ಇದೀಗ ನಿರ್ಜನವಾಗಿದ್ದು, ಕೇವಲ ನಾಯಿ ಕೋಳಿಗಳಷ್ಟೆ ಬಾಕಿ ಉಳಿದಿವೆ.  ಸಾಕಷ್ಟು ಮನೆಗಳು ನಾಶವಾಗಿದ್ದು, ಒಂದು ಓಮಿನಿ ಜಖಂ ಗೊಂಡಿದ್ದು, ಸ್ಕೂಟಿ ವಾಹನ ಬರೆ ಕುಸಿತದಲ್ಲಿ ಸಿಲುಕಿ ಕಣ್ಮರೆಯಾಗಿದೆ.

ಮನೆಗಳು ಜರಿದ ರಭಸಕ್ಕೆ ಮಂಗಳೂರು ರಸ್ತೆಯ ಬದಿಯ ತಾಳತ್ ಮನೆಯಲ್ಲಿದ್ದ ನಗರಸಭಾ ಸದಸ್ಯ ಪಿ.ಡಿ. ಪೊನ್ನಪ್ಪ ಹಾಗೂ ಉದ್ಯಮಿ ಪಿ.ಸಿ, ತಮ್ಮಯ್ಯ ಅವರ ಮನೆ ಸಂಪೂರ್ಣ ಹಾನಿಗೀಡಾಗಿದೆ. ಬೆಟ್ಟದ ಮೇಲಿನಿಂದ ಪ್ರವಾಹದ ರೀತಿಯಲ್ಲಿ ಮಳೆ ನೀರು ಹರಿದು ಬಂದ ಪರಿಣಾಮ ತೆಂಗಿನ ಮರ ಸೇರಿದಂತೆ ಕೆಲವು ಗಿಡಗಂಟಿಗಳು ಮುರಿದು ತಳ ಭಾಗಕ್ಕೆ ಬಂದು ಬಿದ್ದಿದೆ. ಈ ಪ್ರದೇಶದಲ್ಲಿ ಆತಂಕದ ವಾತಾವರಣ ಮುಂದುವರಿದಿದ್ದು, ಅಂತರ್ಜಲ ಸಂಚಾರದ ಶಬ್ದದ ಅನುಭವ ನಿವಾಸಿಗಳಿಗೆ ಆಗಿದೆ. ಇಂದಿರಾ ನಗರ ಮತ್ತು ಚಾಮುಂಡೇಶ್ವರಿ ನಗರದಕ್ಕೆ ಯಾರೂ ಪ್ರವೇಶಿಸದಂತೆ ಬ್ಯಾರಿಕೇಡ್‍ಗಳನ್ನು ಅಳವಡಿಸಿ ನಿರ್ಬಂಧ ಹೇರಲಾಗಿದೆ. ಆಶ್ರಯ ಕಳೆದುಕೊಂಡ ಎಲ್ಲಾ ಕುಟುಂಬಗಳನ್ನು ನಗರದ ಗಂಜಿ ಕೇಂದ್ರಗಳಾದ ಶ್ರೀ ಲಕ್ಷ್ಮೀನರಸಿಂಹ ಕಲ್ಯಾಣ ಮಂಟಪ, ಕಾರ್ಯಪ್ಪ ವೃತ್ತದ  ಬಳಿಯ ಅಂಬೇಡ್ಕರ್ ಭವನ, ಅಂಗನವಾಡಿ ಕೇಂದ್ರ ಇನ್ನಿತರ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.ಮನೆ ಕಳೆದುಕೊಂಡವರಲ್ಲಿ ಜೀವ ಉಳಿದ ನೆಮ್ಮದಿ ಒಂದೆಡೆಯಾದರೆ, ನೆಲೆ ಇಲ್ಲದೆ ದುಃಖ ಮಡುಗಟ್ಟಿದೆ.  ನಗರದ ಹಳೇ ಖಾಸಗಿ ಬಸ್ ನಿಲ್ದಾಣದ ಹಿಂಬದಿಯ ಬರೆ ಕುಸಿಯುತ್ತಲೆ ಇದ್ದು, ಎರಡು ಮೂರು ಅಂಗಡಿಗಳು ಸಂಪೂರ್ಣ ಹಾನಿಗೆ ಒಳಗಾಗಿವೆ. ಉಳಿದಂತೆ ಈ ಪ್ರದೇಶದಲ್ಲಿರುವ ಹಳೆಯ ಪ್ರಯಾಣಿಕರ ತಂಗುದಾಣ ಕಟ್ಟಡ ಅಪಾಯಕಾರಿ ಸ್ಥಿತಿಯಲ್ಲಿದೆ.  ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ಎದುರು ಭಾಗದಲ್ಲಿರುವ ಎತ್ತರ ಪ್ರದೇಶದಲ್ಲಿ ಕೂಡ ಬರೆ ಕುಸಿದಿದ್ದು, ಕೆಳಗಿನ ಹೋಂ ಸ್ಟೇಗೆ ಹಾನಿಯಾಗಿದೆ. ಮತ್ತಷ್ಟು ಮಣ್ಣು ಕುಸಿಯುತ್ತಲೆ ಇದ್ದು, ಆತಂಕಗೊಂಡಿರುವ ಈ ಭಾಗದ ಅಂಗಡಿ ಮುಂಗಟ್ಟು ಮಾಲೀಕರು ತಮ್ಮ ವ್ಯಾಪಾರ ವಹಿವಾಟುಗಳನ್ನು ಸ್ಥÀಗಿತಗೊಳಿಸಿದ್ದಾರೆ.

ಶುಕ್ರವಾರ ಸಂತೆಯ ದಿನವಾದರೂ ನಗರದ ತುಂಬಾ ಅಘೋಷಿತ ಬಂದ್ ವಾತಾವರಣ ಕಂಡು ಬಂತು. ಕೆಲವರು ಪರ ಊರಿನಿಂದ ಬಂದ ಗ್ರಾಮೀಣ ಪ್ರಯಾಣಿಕರು ತಮ್ಮ ತಮ್ಮ ಗ್ರಾಮಗಳಿಗೆ ತೆರಳಲು ಬಸ್ ಸೇರಿದಂತೆ ಇತರ ವಾಹನಗಳು ಸಿಗದೆ ಪರದಾಡುತ್ತಿದ್ದ ದೃಶ್ಯ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ಕಂಡು ಬಂದಿತು. ಆಟೋ ರಿಕ್ಷಾಗಳ ಸಂಚಾರವು ವಿರಳವಾಗಿತ್ತು. ಕಳೆದ ಒಂದು ವಾರದ ಮಹಾ ಮಳೆಯಿಂದ ಪ್ರವಾಸಿಗರ ಆಗಮನ ಸಂಪೂರ್ಣವಾಗಿ ಕಡಿಮೆಯಾಗಿದ್ದು, ಇರುವಷ್ಟು ಬೆರಳೆಣಿಕೆಯ ಪ್ರವಾಸಿಗರು ಅತಂತ್ರ ಸ್ಥಿತಿಯಲ್ಲಿದ್ದಾರೆ. ವಿವಿಧ ಸಂಘ ಸಂಸ್ಥೆಗಳ ಸ್ವಯಂ ಸೇವಕರು ನಿರಾಶ್ರಿತರಿಗೆ ಆಶ್ರಯ ನಿಡುವುದರೊಂದಿಗೆ ಊಟ, ಬಟ್ಟೆಯ ವ್ಯವಸ್ಥೆಯನ್ನು ಕಲ್ಪಿಸುತ್ತಿದ್ದಾರೆ. ದಾನಿಗಳು ಕೂಡ ಸಹಾಯ ಹಸ್ತ ಚಾಚುತ್ತಿದ್ದಾರೆ. ನಗರದ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಸೇವಾ ಭಾರತಿ ಸಂಸ್ಥೆಯ ನೇತೃತ್ವದಲ್ಲಿ ನೆರವನ್ನು ನೀಡಲಾಗುತ್ತಿದ್ದು, ದಿನಸಿ ಸಾಮಗ್ರಿ, ಜಮಖಾನ ಹಾಗೂ ಧನ ಸಹಾಯಕ್ಕಾಗಿ ಸಂಸ್ಥೆಯ ಪ್ರಮುಖರು ಕೋರಿಕೊಂಡಿದ್ದು,  ದಾನಿಗಳು ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಚಂದ್ರಶೇಖರ್ 9449666952, ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ನೆರೆ ಸಂತ್ರಸ್ತರ ಹೆಲ್ಪ್ ಡೆಸ್ಕ್ ಆರಂಭಿಸಿದ್ದು, ಉಚಿತ ವೈದ್ಯಕೀಯ ಚಿಕಿತ್ಸೆ ನಿಡುವುದಾಗಿ ಘೋಷಿಸಿದೆ.ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ 2 ವಾರ್ಡ್‍ಗಳನ್ನು ಸಂತ್ರಸ್ತರಿಗಾಗಿ ತೆರೆದಿದ್ದು, ಉಚಿತ ವೈದ್ಯಕೀಯ ಸೇವೆ , ವಸತಿ, ಆಹಾರದ ಸೌಲಭ್ಯಗಳನ್ನು ಒದಗಿಸಲಾಗುವುದೆಂದು ಕಾಲೇಜಿನ ಮೆಡಿಕಲ್ ಡೈರೆಕ್ಟರ್ ಡಾ. ಕೆ.ವಿ. ಚಿದಾನಂದ ತಿಳಿಸಿದ್ದಾರೆ. ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ 08257-235561, ಮೊ.7353756060. ಉಳಿದಂತೆ ನಗರದಲ್ಲಿರುವ ಗಂಜಿ ಕೇಂದ್ರಗಳಿಗೆ ಜಿಲ್ಲೆಯ ವೈದ್ಯರುಗಳು ತೆರಳಿ ಸ್ವಯಂ ಪ್ರೇರಣೆಯಿಂದ ಸಂತ್ರಸ್ತರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಸಭಾಂಗಣದಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದ್ದು, ಸಂತ್ರಸ್ತರು ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ. ಕೆ.ಎಂ. ಗಣೇಶ್ ಮೊ.9448384010. ನಗರದಲ್ಲಿ ಶೀತಗಾಳಿಯೊಂದಿಗೆ ಮಳೆ ಮುಂದುವರಿದಿದ್ದು, ಎತ್ತರ ಹಾಗೂ ತಗ್ಗು ಪ್ರದೇಶದ ಜನರಲ್ಲಿ ಆತಂಕ ಮನೆ ಮಾಡಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: