ಪ್ರಮುಖ ಸುದ್ದಿ

ಊರಿಗೆ ಊರೇ ಖಾಲಿ : ಮಕ್ಕಂದೂರು, ಮುಕ್ಕೋಡ್ಲು, ಕಾಲೂರು ಕಣ್ಮರೆ : ಸಾವಿನ ಸಂಖ್ಯೆ 6 ಕ್ಕೆ ಏರಿಕೆ : ಯೋಧರಿಂದ ಕಾರ್ಯಾಚರಣೆ ಚುರುಕು 

ರಾಜ್ಯ(ಮಡಿಕೇರಿ )ಆ.17 :- ಕಾವೇರಿನಾಡು ಕೊಡಗಿನಲ್ಲಿ ಪ್ರಕೃತಿ ತೋರಿದ ಮುನಿಸಿಗೆ ಊರಿಗೆ ಊರೇ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಮಕ್ಕಂದೂರು, ಮುಕ್ಕೋಡ್ಲು, ಕಾಲೂರು ಗ್ರಾಮಗಳು ಕಣ್ಮರೆಯ ಸ್ಥಿತಿಯಲ್ಲಿವೆ.

ಈ ಭಾಗದ ಬೃಹತ್ ಗುಡ್ಡಗಳು ಕುಸಿಯುತ್ತಲೇ ಇದ್ದು, ವಾಸದ ಮನೆ, ಕೃಷಿಯ ಭೂಮಿಯ ನಾಪತ್ತೆಯಾಗಿದೆ. ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿರುವ ಬಡ ಜೀವಗಳ ಕಣ್ಣೀರು ಕೋಡಿ ಕೋಡಿಯಾಗಿ ಹರಿಯುತ್ತಿದೆ.

ನಿರಂತರವಾಗಿ ಸುರಿಯುತ್ತಿರುವ ಭಾರೀ ಪ್ರಮಾಣದ ಗಾಳಿ ಮಳೆಯಿಂದಾಗಿ ಮಡಿಕೇರಿ ತಾಲೂಕಿನ ಮಕ್ಕಂದೂರು, ಮುಕ್ಕೋಡ್ಲು, ಕಾಲೂರು ಸೇರಿದಂತೆ ಹತ್ತು ಹಲವು ಗ್ರಾಮಗಳಲ್ಲಿ ಬೆಟ್ಟ ಪ್ರದೇಶಗಳೇ ಕುಸಿಯುತ್ತಿದ್ದು, ಆತಂಕಿತ ನೂರಾರು ಕುಟುಂಬಗಳು ಮನೆ ತೊರೆದಿದ್ದರೆ, ಮತ್ತೆ ನೂರಾರು ಮಂದಿ ನೆರವಿಗಾಗಿ ಕಾಯುತ್ತಿದ್ದಾರೆ.  ಜಿಲ್ಲೆಗೆ ಆಗಮಿಸಿರುವ ಯೋಧರು ಇಲ್ಲಿಯವರೆಗೆ ಸುಮಾರು 873 ಮಂದಿಯನ್ನು ರಕ್ಷಿಸಿದ್ದಾರೆ. ನಿರಾಶ್ರಿತ ಕೇಂದ್ರಗಳಲ್ಲಿ ಸಾವಿರಕ್ಕೂ ಅಧಿಕ ಮಂದಿಗೆ ಆಶ್ರಯ ನೀಡಲಾಗಿದೆ. ಮಹಾಮಳೆಯ ದಾಳಿಗೆ ಇಲ್ಲಿಯವರೆಗೆ ಆರು ಮಂದಿ ಮೃತಪಟ್ಟಿದ್ದು, ಮಣ್ಣಿನಡಿ ಸಿಲುಕಿಕೊಂಡಿರುವವರ ಬಗ್ಗೆ ನಿಖರ ಮಾಹಿತಿ ಇಲ್ಲ.

ಮೂರು ದಿನಗಳ ಮಳೆಗೆ 845 ಮನೆಗಳು ಹಾನಿಗೀಡಾಗಿದ್ದು, 98 ಕಿ.ಮೀ ರಸ್ತೆ, 58 ಸೇತುವೆ, 243 ಸರ್ಕಾರಿ ಕಟ್ಟಡಗಳು ಅಪಾಯವನ್ನು ಎದುರಿಸಿವೆ. 3006 ವಿದ್ಯುತ್ ಕಂಬಗಳು ಹಾಗೂ ಟ್ರಾನ್ಸ್‍ಫಾರ್ಮರ್‍ಗಳು ಹಾನಿಗೀಡಾಗಿವೆ ಎಂದು ಸರಕಾರ ಮಾಹಿತಿ ನೀಡಿದೆ.

ಹೆಚ್ಚಿನ ಸಂಖ್ಯೆಯ ಯೋಧರಿಗೆ ಕರೆ

ಕ್ಷಿಪ್ರ ಕಾರ್ಯಪಡೆ ಅಪಾಯದಂಚಿನಲ್ಲಿದ್ದ ಮಕ್ಕಂದೂರಿನ 47 ಗ್ರಾಮಸ್ಥರನ್ನು ರಕ್ಷಣೆ ಮಾಡಿದೆ. 92 ವರ್ಷದ ಕಮಲಮ್ಮ ಸೇರಿದಂತೆ ನಾಲ್ಕು ಮಕ್ಕಳು ಇವರಲ್ಲಿ ಸೇರಿದ್ದಾರೆ. ಕುಗ್ರಾಮಗಳಲ್ಲಿ ಸಿಲುಕಿರುವವವರನ್ನು ರಕ್ಷಿಸಲು  ಡೋಗ್ರಾ ರೆಜ್‍ಮೆಂಟ್‍ನ 60 ಸೈನಿಕರು, ಭಾರತೀಯ ಸೇನಾ ಪಡೆಯ ತಾಂತ್ರಿಕ ವಿಭಾಗದ 73 ಸೈನಿಕರು, 12 ಮಂದಿ ಪರಿಣಿತ ಮುಳುಗು ತಜ್ಞರು, ಅಗ್ನಿಶಾಮಕ ದಳ 200 ಸಿಬ್ಬಂದಿಗಳು, ನಾಗರಿಕ ರಕ್ಷಣಾ ಪಡೆ ಆ.18 ರಂದು ಕೊಡಗು ಜಿಲ್ಲೆಗೆ ಆಗಮಿಸಲಿದೆ ಎಂದು ಕಂದಾಯ ಕಾರ್ಯದರ್ಶಿಗಳು ತಿಳಿಸಿದ್ದಾರೆ.

ವೃದ್ಧೆ ಸಾವು

ಕಂಡು ಕೇಳರಿಯದ ಅವಘಡಗಳ ಸರಮಾಲೆ ಈ ಗ್ರಾಮೀಣ ಭಾಗಗಳಲ್ಲಿ ಮುಂದುವರೆದಿದ್ದು, ಶುಕ್ರವಾರ ಬೆಳಿಗ್ಗೆ ಗಾಳಿಬೀಡು ಬಳಿಯ ಹೆಬ್ಬೆಟ್ಟಗೇರಿ ಗ್ರಾಮದ ಮಿನ್ನಂಡ ಕುಟುಂಬಕ್ಕೆ ಸೇರಿದ ವೃದ್ಧೆಯೊಬ್ಬರು ಭಾರೀ ಪ್ರಮಾಣದ ಬರೆ ಕುಸಿತಕ್ಕೆ ಸಿಲುಕಿ ಸಾವನ್ನಪ್ಪಿರುವ ಭೀಕರ ಘಟನೆ ನಡೆದಿದೆಯಾದರೆ, ಮಕ್ಕಂದೂರು, ತಂತಿಪಾಲ, ಮೇಘತ್ತಾಳು ವಿಭಾಗದಲ್ಲಿ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದಾರೆನ್ನುವ ಸುದ್ದಿಗಳು ಹರಡುತ್ತಿವೆಯಾದರು ದೃಢ ಪಟ್ಟಿಲ್ಲ. ಮಡಿಕೇರಿ ನಗರದ ಅನತಿ ದೂರದಲ್ಲಿರುವ ದೇವಸ್ತೂರಿನಲ್ಲಿ  ಹೊಳೆ ಒಂದೆಡೆ ಉಕ್ಕಿ ಹರಿಯುತ್ತಿದ್ದರೆ, ಇದರ ಸಮೀಪದ ಗಾಮೀಣ ಭಾಗಗಳಾದ ಕಾಲೂರು, ಮುಕ್ಕೋಡ್ಲು ವಿಭಾಗದಲ್ಲಿ ಭಾರೀ ಪ್ರಮಾಣದ ಬರೆ ಕುಸಿತದಿಂದ ಅಲ್ಲಿನ ಜನತೆ ಕಂಗಾಲಾಗಿದ್ದು, ಉಟ್ಟ ಬಟ್ಟೆಯಲ್ಲೆ ನೂರಾರು ಕುಟುಂಬಗಳು ಕುಸಿದ ಬರೆ, ಉಕ್ಕಿಹರಿಯುತ್ತಿರುವ ಕಿರುತೊರೆಗಳ ನಡುವೆ ಕಾಲ್ನಡಿಗೆಯಲ್ಲೆ ಗ್ರಾಮ ತೆರೆದು ಮಡಿಕೇರಿ ಸೇರಿದಂತೆ ಸಮೀಪದ ತಮ್ಮ ಬಂಧುಗಳ ಮನೆಗಳಿಗೆ, ಮಡಿಕೇರಿಯ ಗಂಜಿ ಕೇಂದ್ರ್ರಗಳಿಗೆ ತೆರಳುತ್ತಿದ್ದಾರೆ.

ಕಾಲೂರು ಮತ್ತು ಪ್ರವಾಸಿ ತಾಣ ಮಾಂದಲಪಟ್ಟಿಯ ನಡುವಿನ ಬಾರಿಬೆಳ್ಳಚ್ಚ ಎಂಬಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತಗಳಿಂದ 40 ಕುಟುಂಬದ ಇನ್ನೂರಕ್ಕು ಹೆಚ್ಚಿನ ಮಂದಿ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ವರದಿಯಾಗಿದೆ.

ಸೈನ್ಯದ ಕಾರ್ಯಾಚರಣೆ-ಈಗಾಗಲೆ ಜಿಲ್ಲೆಗೆ ಆಗಮಿಸಿರುವ  80ಕ್ಕೂ ಹೆಚ್ಚಿನ ಸೈನಿಕರನ್ನು ಒಳಗೊಂಡ ತುಕುಡಿ ಮಕ್ಕಂದೂರಿನ ತಂತಿಪಾಲ, ಮೇಘತ್ತಾಳು ವಿಭಾಗದಲ್ಲಿ ಸಂಕಷ್ಟದಲ್ಲಿ ಸಿಲುಕಿಕೊಂಡಿರುವವರ ರಕ್ಷಣೆಗೆ ಸಮರೋಪಾದಿಯ ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ.

ಜೋಡುಪಾಲದಲ್ಲಿ ರಕ್ಷಣೆ

ಮಡಿಕೇರಿಯಿಂದ ಮಂಗಳೂರಿಗೆ ತೆರಳುವ ಹಾದಿಯ ಜೋಡುಪಾಲ ವಿಭಾಗದ ಬೆಟ್ಟ ಪ್ರದೇಶದಲ್ಲಿ ಭಾರೀ ಪ್ರಮಾಣದ ಬರೆಕುಸಿತದಿಂದ ಮನೆಗಳಿಗೆ ಹಾನಿಯಾಗಿ,  ಸಂಕಷ್ಟಕ್ಕೆ ಸಿಲುಕಿದ್ದ ಇಪ್ಪತ್ತಕ್ಕೂ ಹೆಚ್ಚಿನ ಮಂದಿಯನ್ನು ಸುತ್ತಮುತ್ತಲ ಗ್ರಾಮಸ್ಥರೆ ರಕ್ಷಿಸಿರುವ ಘಟನೆ ವರದಿಯಾಗಿದೆ.

ಕೂಡಿಗೆ ಜಲಾವೃತ  

ಹಾರಂಗಿ ಜಲಾಶಯದಿಂದ ನೀರು ಧಾರಾಕಾರವಾಗಿ ಹರಿಯುತ್ತಿರುವುದರಿಂದ ಕೂಡಿಗೆ ಭಾಗ ಜಲಾವೃತಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ಥರಿಗೆ ಅಭಯ ನೀಡಿದರು.

ಕಂದಾಯ ಸಚಿವರ ಭೇಟಿ

ಜಿಲ್ಲೆಯ ಮುಕ್ಕೊಡ್ಲು, ಗಾಳಿಬೀಡು, ಕಾಲೂರು, ಮಕ್ಕಂದೂರು, ಮಾದಾಪುರ, ಹಟ್ಟಿಹೊಳೆ, ಎರಡನೇ ಮೊಣ್ಣಂಗೇರಿ, ದೇವಸ್ತೂರು, ಚೆರಿಯಪರಂಬು, ಕಣಿವೆ, ನೆಲ್ಯಹುದಿಕೇರಿ, ಗುಹ್ಯ ಮತ್ತಿತರ ಕಡೆಗಳಲ್ಲಿ ಅತಿವೃಷ್ಟಿಗೆ ಸಿಲುಕಿರುವ ಬಗ್ಗೆ ಮಾಹಿತಿ ಇದ್ದು, ಸಂತ್ರಸ್ಥರನ್ನು ಕರೆತರಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡಿದೆ. ಆ ನಿಟ್ಟಿನಲ್ಲಿ ವಿವಿಧ ಕಡೆಗಳಲ್ಲಿ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಕಂದಾಯ ಸಚಿವರು ವಿವರಿಸಿದರು.

ಈಗಾಗಲೇ ಕರೆತರಲಾಗಿರುವ ಸಂತ್ರಸ್ಥರಿಗೆ 20 ಕಡೆಗಳಲ್ಲಿ ಗಂಜಿ ಕೇಂದ್ರ ತೆರೆಯಲಾಗಿದ್ದು, ಊಟ, ಉಪಹಾರ, ಬಟ್ಟೆ, ಬೆಡ್‍ಶೀಟ್ ಮತ್ತಿತರ ಅಗತ್ಯ ವಸ್ತುಗಳನ್ನು ಪೂರೈಸಲಾಗುತ್ತಿದೆ. ಜೊತೆಗೆ ಸರ್ಕಾರೇತರ ಸಂಸ್ಥೆಗಳು ಸಹ ಮುಂದೆ ಬಂದಿವೆ ಎಂದು  ಆರ್.ವಿ.ದೇಶಪಾಂಡೆ ಅವರು ತಿಳಿಸಿದರು.

ಹವಾಮಾನ ವೈಪರಿತ್ಯದಿಂದಾಗಿ ಹೆಲಿಕಾಪ್ಟರ್‍ಗಳು ಜಿಲ್ಲೆಗೆ ಬರಲು ಸಾಧ್ಯವಾಗಿಲ್ಲ, ಆದ್ದರಿಂದ ಸಂತ್ರಸ್ಥರನ್ನು ರಕ್ಷಿಸುವ ನಿಟ್ಟಿನಲ್ಲಿ ಹತ್ತಿರದ ಮೈಸೂರು ಮತ್ತು ಹಾಸನ ಜಿಲ್ಲೆಗಳಿಂದ ಕಂದಾಯ ಹಾಗೂ ಪಂಚಾಯತ್ ರಾಜ್ ಸಿಬ್ಬಂದಿಗಳನ್ನು ನಿಯೋಜಿಸಲಾಗುವುದು ಹಾಗೆಯೇ ವೈದ್ಯರು, ಶುಶ್ರ್ರೂಷಕರು ಹಾಗೂ ಇತರರನ್ನು  ನಿಯೋಜಿಸಲು ಈಗಾಗಲೇ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಆದೇಶ ಹೊರಡಿಸಿದ್ದಾರೆ ಎಂದು ಕಂದಾಯ ಸಚಿವರು ಹೇಳಿದರು.

ಕೊಡಗು ಜಿಲ್ಲೆಯ ಜನರು ಸಂಕಷ್ಟ ಪರಿಸ್ಥಿತಿಯಲ್ಲಿದ್ದು, ಇವರ ಜೀವ ರಕ್ಷಣೆಗೆ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ.  ಸಂತ್ರಸ್ಥರಿಗೆ ಔಷಧಿ, ಆಹಾರ ಪೂರೈಕೆ, ಸೀಮೆಎಣ್ಣೆ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಹಾಗೆಯೇ ಕಾರವಾರದಿಂದ ನೌಕಾಪಡೆ ಆಗಮಿಸಲಿದೆ. ಜೊತೆಗೆ ಯೋಧರು ಬರಲಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು. ಸರ್ಕಾರದಿಂದ ಯಾವುದೇ ರೀತಿಯ ಕೊರತೆ ಉಂಟಾಗದಂತೆ ನೋಡಿಕೊಳ್ಳಲಾಗುವುದು. ಆ ದಿಸೆಯಲ್ಲಿ ಎಲ್ಲರೂ ಕೈಜೋಡಿಸುವಂತೆ ಕಂದಾಯ ಸಚಿವರು ಮನವಿ ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರು ಪ್ರವಾಹಕ್ಕೆ ಸಿಲುಕಿರುವವರುನ್ನು ಕರೆತರಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಕರೆತರಲಾಗಿರುವ ಸಂತ್ರಸ್ಥರಿಗೆ ಊಟೋಪಚಾರ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಕಳೆದ ಎರಡು-ಮೂರು ದಿನಗಳಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ 4 ಮಂದಿ ಮೃತಪಟ್ಟಿದ್ದಾರೆ. ಇಬ್ಬರು ಕಾಣೆಯಾಗಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಗೂ ಮೊದಲು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾದಾಪುರ, ಮುಕ್ಕೊಡ್ಲು, ಹಟ್ಟಿಹೊಳೆ, ಕಾಲೂರು ಇತರೆ ಕಡೆಗಳಲ್ಲಿ ಪ್ರವಾಹಕ್ಕೆ ತುತ್ತಾಗಿದ್ದು ಇವರನ್ನು ತ್ವರಿವಾಗಿ ಸ್ಥಳಾಂತರ ಮಾಡಬೇಕಿದೆ. ಆ ನಿಟ್ಟಿನಲ್ಲಿ ಅಗತ್ಯ ಸೇನಾ ಪಡೆ ನಿಯೋಜಿಸುವುದು, ಹಾಗೂ ಜೆಸಿಬಿ ತರಿಸಬೇಕಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಮುಕ್ಲೊಡ್ಲು ಗ್ರಾಮದ ಸುತ್ತಮುತ್ತ 300 ಮಂದಿ ಅತಿವೃಷ್ಟಿಗೆ ಸಿಲುಕಿಕೊಂಡಿದ್ದು, ನನ್ನ ಮನೆ ಬಳಿ ಸಂತ್ರಸ್ಥರು ಇದ್ದರೂ ಸಹ ಅವರನ್ನು ಕರೆತರಲು ಅಸಾಯಕವಾಗಿದ್ದೇನೆ, ಕೂಡಲೇ ಅವರನ್ನು ಸ್ಥಳಾಂತಬೇಕು ಎಂದು ಕಣ್ಣೀರಿಟ್ಟರು.

ಮಾದಾಪುರದಿಂದ ಹಟ್ಟಿಹೊಳಗೆ ತೆರಳಲು ಸಾಧ್ಯವಾಗುತ್ತಿಲ್ಲ, ಸಂತ್ರಸ್ತರು ಮಗು ಹಿಡಿದು ಕೂಗಿದರೂ ಅವರನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ವೀಣಾ ಅಚ್ಚಯ್ಯ ಅವರು ಅಳಲು ತೋಡಿಕೊಂಡರು.

ವಿಧಾನ ಪರಿಷತ್ ಸದಸಸ್ಯರಾದ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಸಂತ್ರಸ್ಥರನ್ನು ಕರೆತರಲು ತಾಂತ್ರಿಕವಾಗಿ ಕಾರ್ಯ ಪ್ರವೃತ್ತರಾಗಬೇಕಿದೆ. ಆ ನಿಟ್ಟಿನಲ್ಲಿ ಕೂಡಲೇ ಪ್ರಯತ್ನ ಮಾಡಬೇಕಿದೆ ಎಂದು ಅವರು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್, ಜಿ.ಪಂ.ಸಿಇಒ ಪ್ರಶಾಂತ್ ಕುಮಾರ್ ಮಿಶ್ರ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರವೀಣ್ ಕುಮಾರ್ ಇತರರು ಹಾಜರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: