ಪ್ರಮುಖ ಸುದ್ದಿಮೈಸೂರು

ಪಾಲಿಕೆ ಚುನಾವಣೆಗೆ ಟಿಕೆಟ್ ಪಡೆಯಲು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ದೌಡಾಯಿಸುತ್ತಿದ್ದಾರೆ ಕೈ ಮುಖಂಡರು

ಮೈಸೂರು,ಆ.18:- ಆಗಸ್ಟ್ 31 ರಂದು ನಡೆಯಲಿರುವ ಮೈಸೂರು ನಗರ ಪಾಲಿಕೆ ಚುನಾವಣೆಗೆ ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆ ನಡೆಸುತ್ತಿದ್ದು, ಈ ನಡುವೆ  ಪಾಲಿಕೆ ಚುನಾವಣೆಗೆ  ಟಿಕೆಟ್ ಪಡೆಯಲು  ಮಾಜಿ ಸಿಎಂ ಸಿದ್ದರಾಮಯ್ಯ  ಅವರ ಮನೆಗೆ ಕೈ ಮುಖಂಡರು ದೌಡಾಯಿಸುತ್ತಿದ್ದಾರೆ ಎನ್ನಲಾಗಿದೆ.

ಸಚಿವ ಕೃಷ್ಣ ಭೈರೇಗೌಡ, ಗುರುಪಾದಸ್ವಾಮಿ, ಎಂ ಕೆ ಸೋಮಶೇಖರ್, ತನ್ವೀರ್ ಸೇಠ್, ನಗರಾಧ್ಯಕ್ಷ  ಆರ್ ಮೂರ್ತಿ ನೇತೃತ್ವದ ನಿಯೋಗ ಮಾಜಿ ಸಿಎಂ ಸಿದ್ದರಾಮಯ್ಯರನ್ನು  ಭೇಟಿ ಮಾಡಿ ಚರ್ಚೆ ನಡೆಸಿದರು. ಮೈಸೂರಿನ ಶಾರದಾದೇವಿ ನಗರದಲ್ಲಿರುವ ನಿವಾಸದಲ್ಲಿ  ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೈ ಮುಖಂಡರೊಂದಿಗೆ ಸಭೆ ನಡೆಸಿದರು.

ಮಾಜಿ ಶಾಸಕ ಸೋಮಶೇಖರ್ , ಮಾಜಿ ಸಚಿವ ಹೆಚ್ ವಿಜಯ ಶಂಕರ್ , ಮಾಜಿ ಮುಡಾ ಅಧ್ಯಕ್ಷ ಧ್ರುವ ಕುಮಾರ್ ಜೊತೆ ಟಿಕೆಟ್ ಹಂಚಿಕೆಯ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಯಾವ ಕ್ಷೇತ್ರವನ್ನು ಯಾವ ನಾಯಕರ ಹೆಗಲಿಗೆ ನೀಡಬೇಕೆಂಬುದನ್ನು ನಿರ್ಧರಿಸಲಾಗಿದೆ. ಅಂತೆಯೇ  ಎನ್ ಆರ್ ಕ್ಷೇತ್ರ ತನ್ವೀರ್ ಸೇಠ್ ಹೆಗಲಿಗೆ, ಕೆ ಆರ್ ಕ್ಷೇತ್ರದ ಉಸ್ತುವಾರಿ ಮಾಜಿ ಶಾಸಕ ಸೋಮಶೇಖರ್  ಗೆ, ಚಾಮರಾಜ ಕ್ಷೇತ್ರ ವಾಸು ಅವರಿಗೆ ಹೊಣೆ  ನೀಡಲಾಗಿದೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾನು ಟಿಕೆಟ್ ಫೈನಲ್  ಮಾಡುತ್ತೇನೆ ಎಂದು ಮಾಜಿ  ಸಿ ಎಂ ಸಿದ್ದರಾಮಯ್ಯ ತಿಳಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.  ಇಂದು ಸಂಜೆ ಮತ್ತೊಂದು ಸುತ್ತಿನ ಸಭೆ ನಡೆಸಿ  ನಂತರ  ಪಾಲಿಕೆಯ 65 ವಾರ್ಡ್ ಗಳ ಟಿಕೆಟ್ ಫೈನಲ್  ಮಾಡಲಾಗುತ್ತದೆ ಎಂದು ಕಾಂಗ್ರೆಸ್ ಮುಖಂಡರು ತಿಳಿಸಿದ್ದಾರೆ. ಎನ್ ಆರ್ ಚಾಮರಾಜ ಕ್ಷೇತ್ರದ ಮೇಲೆ ಕೈ ನಾಯಕರ ಕಣ್ಣು ಬಿದ್ದಿದ್ದು, ಈ ಭಾರಿ ಗೆಲ್ಲುವ ಹಾಗೂ ಯುವ ನಾಯಕರಿಗೆ ಮಣೆ ಹಾಕಲು ಮುಖಂಡರು ನಿರ್ಧರಿಸಿದ್ದಾರೆ.  ಮಾಜಿ ಮೇಯರ್ , ಈಗಾಗಲೇ ಅಧಿಕಾರ ಅನುಭವಿಸಿರೋ ನಾಯಕರಿಗೆ ಕೋಕ್  ನೀಡಿ ಸಾಮಾಜಿಕ ನ್ಯಾಯದ ಅಡಿ ಟಿಕೆಟ್ ಹಂಚಿಕೆ  ಮಾಡುವುದಾಗಿ ಮೈಸೂರಿನಲ್ಲಿ ಕಾಂಗ್ರೆಸ್ ಮುಖಂಡರು ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ

ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಗೆಲ್ಲುವವರನ್ನು ಮಾತ್ರ ಕಣಕ್ಕಿಳಿಸಲಾಗುವುದು ಎಂದು  ಮಾಜಿ ಶಾಸಕ ಸೋಮಶೇಖರ್ ಹೇಳಿದ್ದಾರೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಾಜಿ ಶಾಸಕ ಸೋಮಶೇಖರ್, ಈಗಾಗಲೇ  ಎಲ್ಲ ಮುಖಂಡರೊಡನೆ ಚರ್ಚೆ ಮಾಡಲಾಗುತ್ತಿದೆ. ಆದರೆ ಇನ್ನೂ ಟಿಕೆಟ್  ಅಂತಿಮವಾಗಿಲ್ಲ. ಮಾಜಿ, ಹಾಲಿ ಸದಸ್ಯರು ಮತ್ತು ಯುವಕರು ಸೇರಿದಂತೆ ಗೆಲ್ಲುವವರನ್ನು  ಮಾತ್ರ ಕಣಕ್ಕಿಳಿಸಲಾಗುವುದು  ಎಂದು  ಸ್ಪಷ್ಟನೆ ನೀಡಿದ್ದಾರೆ.

ಕೆ. ಆರ್ ಕ್ಷೇತ್ರದಲ್ಲಿರುವ 20  ವಾರ್ಡ್ ಗಳನ್ನು ಕ್ಲೀನ್ ಸ್ವೀಪ್ ಮಾಡಲು ಬಿಜೆಪಿ ಮಾಡಿರುವ ಟೀಮ್ -20  ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಎಂ.ಕೆ ಸೋಮಶೇಖರ್, ಟೀಮ್20  ಎಲ್ಲ ಬರಿ ತೋರಿಸಿಕೊಳ್ಳೋಕೆ  ಮಾತ್ರ. ಕಳೆದ ಬಾರಿ ಎಷ್ಟು ಸೀಟ್ ಗಳನ್ನ ಗೆದ್ದಿದ್ದಾರೆ ? ಎಂದು ಪ್ರಶ್ನೆ ಮಾಡಿದರಲ್ಲದೇ,ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಅತಿ ಹೆಚ್ಚು ವಾರ್ಡ್ ಗಳಲ್ಲಿ ನಾವೇ ಗೆಲ್ಲುತ್ತೇವೆ ಎಂದು  ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್).

Leave a Reply

comments

Related Articles

error: