ಮೈಸೂರು

ಕ್ಯಾಲೆಂಡರ್ ಮತ್ತು ಗಡಿಯಾರ ಜೀವನದ ಅವಿಭಾಜ್ಯ ಅಂಗಗಳಂತೆ: ಡಾ.ಸಿ.ಪಿ.ಕೆ

ಹಿರಿಯ ಸಾಹಿತಿ ಡಾ.ಸಿ.ಪಿ.ಕೆಯವರು ನಿಸರ್ಗ ಲಾ ಅಸೋಸಿಯೇಟ್ಸ್  2017ನೇ ವರ್ಷದ ನೂತನ ಕ್ಯಾಲೆಂಡರ್ ಅನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, ಕ್ಯಾಲೆಂಡರ್ ಮತ್ತು ಗಡಿಯಾರ ಜೀವನದ ಅವಿಭಾಜ್ಯ ಅಂಗಗಳಂತೆ, ಜಾಗೃತೆಯಿಂದ ಕಾಪಾಡಬೇಕು. ಕ್ಯಾಲೆಂಡರ್ ಖಾಲಿ ಜಾಗದಲ್ಲಿ ಉಪಯುಕ್ತ ಮಾಹಿತಿ ಅಥವಾ ಕನ್ನಡ ಚರಿತ್ರೆಯನ್ನು ಮುದ್ರಿಸಿದರೆ ಕಲಾಕೃತಿಯಂತೆ ಸಂರಕ್ಷಿಸಬಹುದು ಎಂದು ಆಶಿಸಿದರು.

ವಕೀಲ ಸಮುದಾಯವೂ ಸ್ವಾತಂತ್ರ್ಯ ಚಳುವಳಿಯಲ್ಲಿ ಮಹತ್ವದ ಪಾತ್ರವಹಿಸಿತ್ತು. ಇಂದು ಸಮಾಜದಲ್ಲಿ ನಾನಾ ಬಗೆಯ ಮೌಢ್ಯಗಳು ತುಂಬಿದ್ದು ಅವುಗಳನ್ನು ತೊಲಗಿಸಿ ವೈಚಾರಿಕ ಮನೋಭಾವವನ್ನು ಬಿತ್ತುವಲ್ಲಿ ನ್ಯಾಯವಾದಿಗಳು ಮುಂದಾಗಿ ಸಂವಿಧಾನದ ಆಶಯವನ್ನು ಈಡೇರಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಗತಿಪರ ರೈತ, ರಾಜ್ಯ ಪ್ರಶಸ್ತಿ ವಿಜೇತ ಹಾಗೂ 2015ರ ನಾಡಹಬ್ಬ ದಸರಾ ಉದ್ಘಾಟಕ ಪುಟ್ಟಯ್ಯ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಮಳೆಯಿಲ್ಲದೇ ಕಷ್ಟದದಿನಗಳನ್ನು ಎದುರಿಸಿದ್ದೇವೆ. ಮುಂದಿನ ವರ್ಷ ಉತ್ತಮ ಮಳೆ-ಬೆಳೆಯಾಗಿ ಜನರು ನೆಮ್ಮದಿಯಿಂದ ಜೀವನ ಸಾಗಿಸಲಿ ಎಂದು ಅಧಿದೇವತೆ ಚಾಮುಂಡೇಶ್ವರಿಯನ್ನು ಪ್ರಾರ್ಥಿಸಿ, ಪ್ರಕೃತಿ ನಮ್ಮನ್ನು ಸಲಹುತ್ತಿದೆಯೇ ಹೊರತು ಸರ್ಕಾರಗಳಲ್ಲ ಎಂದು ವ್ಯಂಗ್ಯವಾಗಿ ನುಡಿದರು.

ಸ್ವಾಭಿಮಾನ ಹುಟ್ಟಿನಿಂದ ಬರಬೇಕು. ಆಗ ಮಾತ್ರ ದೇಶಕ್ಕೆ ಕೊಡುಗೆ ನೀಡಲು ಸಾಧ್ಯ. ರೈತರಿಗೆ, ಕೂಲಿಕಾರರಿಗೆ, ದುರ್ಬಲರಿಗೆ, ಅಬಲೆಯರಿಗೆ ನ್ಯಾಯ ದೊರಕಿಸುವಲ್ಲಿ ವಕೀಲರು ಕಾರ್ಯಪ್ರವೃತ್ತರಾಗಬೇಕೆಂದು ಸೂಚಿಸಿದರು.

ನಿಸರ್ಗ ಲಾ ಅಸೋಸಿಯೇಟ್ಸ್‍ ಮುಖ್ಯಸ್ಥ ಬಿ.ಶಿವಣ್ಣ, ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಪ್ರಾಧ್ಯಾಪಕ ಪ್ರೊ.ಶಿವಕುಮಾರ್, ನಾಗರಿಕ ಹಕ್ಕುಗಳ ರಾಜ್ಯ ಸಮಿತಿಯ ಡಾ.ಆರ್.ಡಿ.ಕುಮಾರ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ‍್ಯಕ್ಷೆ ಮಂಗಳ ಗೌರಿ, ಭ್ರಷ್ಠಾಚಾರ ವಿರೋಧಿ ರಾಜ್ಯಾಧ್ಯಕ್ಷ ನಂಜುಂಡರಾಜ, ವಕೀಲರಾದ ಕೆ.ಎಸ್.ನಾಗರಾಜು, ರವಿಚಂದ್ರ ಹಾಗೂ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಈ ಸಂದರ್ಭಕ್ಕೆ ಸಾಕ್ಷಿಯಾದರು.

Leave a Reply

comments

Related Articles

error: