ಮೈಸೂರು

ಹಕ್ಕುಗಳಿಗೆ ಒತ್ತಾಯಿಸಿ ಆದಿವಾಸಿಗಳಿಂದ ‘ಡಿ.23’ರಂದು ಬೃಹತ್ ಜಾಥಾ

ಮೈಸೂರು ಜಿಲ್ಲೆಯ ಆದಿವಾಸಿಗಳ ಹಕ್ಕುಗಳಿಗಾಗಿ ಒತ್ತಾಯಿಸಿ ಹಾಗೂ ವೀರಾಜಪೇಟೆ ತಾಲೂಕಿನ ದಿಡ್ಡರಹಳ್ಳಿಯಲ್ಲಿ ಆದಿವಾಸಿಗಳನ್ನು ಅಕ್ರಮವಾಗಿ ತೆರವುಗೊಳಿಸಿದ ಅರಣ್ಯ ಇಲಾಖೆಯ ಕ್ರಮವನ್ನು ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ತು ಖಂಡಿಸಿತು.

ಬುಧವಾರ, ಜಿಲ್ಲಾ ಪತ್ರಕರ್ತರ ಭವನದಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಧ್ಯಕ್ಷ ಎಂ.ಕೃಷ್ಣಯ್ಯ, ಪುನರ್ ವಸತಿ ಕಲ್ಪಿಸದೇ ಸರ್ಕಾರ ಏಕಾಏಕಿ ಮೂಲ ಆದಿವಾಸಿಗಳನ್ನು ಒಕ್ಕಲೆಬ್ಬಿಸುತ್ತಿದೆ. ಇದನ್ನು ವಿರೋಧಿಸಿ ಡಿ.23ರ ಶುಕ್ರವಾರ ಬೆಳಗ್ಗೆ 11 ಗಂಟೆಗೆ ಜಿಲ್ಲಾ ವ್ಯಾಪ್ತಿಯ ಪ್ರಗತಿಪರ ಒಕ್ಕೂಟಗಳು ಹಾಗೂ ಆದಿವಾಸಿ ಸಂಘಟನೆಗಳ ಸಹಯೋಗದೊಂದಿಗೆ ಎಲ್ಲಾ ತಾಲೂಕು ಕೇಂದ್ರದ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಗಳ ಎದುರು ಬೃಹತ್ ಪ್ರತಿಭಟನೆ ಹಾಗೂ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಅನುದಾನಗಳನ್ನು ಖರ್ಚು ಮಾಡುವ ನೆಪದಲ್ಲಿ ಆದಿವಾಸಿಗಳ ತೆರವುಗೊಳಿಸುವ ಹುನ್ನಾರ ಸರ್ಕಾರದಿಂದ ನಡೆಯುತ್ತಿದ್ದು ಮೂಲ ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಲಾಬಿ ನಡೆಯುತ್ತಿದೆ. ಈ ಬಗ್ಗೆ ಸಂಪೂರ್ಣ ಸರ್ವೇಯ ಅಗತ್ಯವಿದೆ. ಆದಿವಾಸಿಗಳು ಅತಿ ಹೆಚ್ಚು ಶೋಷಣೆ ಹಾಗೂ ದೌರ್ಜನ್ಯಕ್ಕೊಳಗಾಗಿದ್ದಾರೆ. ಸಂವಿಧಾನದಲ್ಲಿ ರಕ್ಷಣೆ ಇದ್ದರೂ ಕೇವಲ ಕಡತಗಳಲ್ಲಿಯೇ ಉಳಿದಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಸುಳ್ಳು ಮೊಕದ್ದಮೆ ದಾಖಲಿಸಿ ಅಮಾಯಕರನ್ನು ಹಿಂಸಿಸುತ್ತಿದ್ದು ಶೀಘ್ರವೇ ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ 30 ದಿನಗಳ ಗಡುವು ನೀಡಲಾಗುವುದು. ತದನಂತರ ಜಿಲ್ಲಾ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ಆದಿವಾಸಿ ಬೃಹತ್ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಳ್ಳಲಾಗುವುದೆಂದು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪರಿಷತ್ತಿನ ಅಧ್ಯಕ್ಷ ನಟರಾಜ, ಪ್ರಧಾನ ಕಾರ್ಯದರ್ಶಿ ಬಿ.ಕಾವೇರ, ಕಾರ್ಯದರ್ಶಿ ಜಿ.ಸ್ವಾಮಿ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್.ಸಾವಿತ್ರಿ ಹಾಗೂ ಇತರೆ ಆದಿವಾಸಿ ಸಂತ್ರಸ್ತರು ಉಪಸ್ಥಿತರಿದ್ದರು.

Leave a Reply

comments

Related Articles

error: