ಮೈಸೂರು

ನಂಜನಗೂಡು ರಸ್ತೆ ಪಕ್ಕದ ರಾಜಕಾಲುವೆ ಕಾಮಗಾರಿ ಶೀಘ್ರ ಮುಗಿಸಲು ಸಾರ್ವಜನಿಕರ ಒತ್ತಾಯ

ಮೈಸೂರು-ನಂಜನಗೂಡು ರಸ್ತೆಯ(ರಾ.ಹೆ.212) ಜೆ.ಎಸ್.ಎಸ್. ಕಲಾ ಮತ್ತು ವಾಣಿಜ್ಯ ಕಾಲೇಜಿನ ಪಕ್ಕದಲ್ಲಿರುವ ರಾಜಕಾಲುವೆ ಕಾಮಗಾರಿಯು ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ವಾಹನ ಸವಾರರು ನಿತ್ಯ ಕಿರಿಕಿರಿ ಎದುರಿಸುವಂತಾಗಿದೆ. ದ್ವಿಚಕ್ರ ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸುವುದು ಕಷ್ಟಕರವಾಗಿದ್ದು, ಅಪಘಾತಕ್ಕೀಡಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಇದರಿಂದ ಬೇಸರಗೊಂಡ ಸಾರ್ವಜನಿಕರು ಮಂದಗತಿಯ ಕಾಮಗಾರಿಯ ವಿರುದ್ಧ ಜಿಲ್ಲಾಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಅಗಲೀಕರಣ ನೆಪದಲ್ಲಿ ಕಳೆದ ವರ್ಷ ಆರಂಭವಾದ ರಾಜಕಾಲುವೆ ಕಾಮಗಾರಿಯು ಕುಂಟುತಾ ಸಾಗಿದ್ದು ಊಟಿ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ತೆರಳುವ ನೂರಾರು ವಾಹನಗಳು ಸರ್ಕಸ್ ನಡೆಸುವುದಲ್ಲದೆ ಕಿರಿದಾದ ರಸ್ತೆಯಲ್ಲಿ ಚಲಿಸುವ ವಾಹನ ಸವಾರರು ಸಂಚಾರ ಒತ್ತಡದಿಂದ ಪರದಾಡುವಂತಾಗಿದೆ.

ನಾಡ ಹಬ್ಬ ದಸರಾ ಮಹೋತ್ಸವಕ್ಕೆ ಇನ್ನೇನು ಕೆಲವೆ ದಿನಗಳು ಬಾಕಿ ಉಳಿದಿದೆ. ಈ ಸಂದರ್ಭ ನೆರೆ ರಾಜ್ಯಗಳಾದ ತಮಿಳುನಾಡು, ಕೇರಳದಿಂದ ಬರುವ ವಾಹನಗಳು ಇದೇ ರಸ್ತೆಯಲ್ಲಿ ಸಾಗುವುದರಿಂದ ವಾಹನದಟ್ಟಣೆ ಹೆಚ್ಚಾಗಿ ಸಂಚಾರ ದುಸ್ತರವಾಗುವ ಸಾಧ್ಯತೆ ಇದೆ.

ಈ ನಿಟ್ಟಿನಲ್ಲಿ ಜಿಲ್ಲಾಡಳಿತವು ಎಚ್ಚೆತ್ತುಕೊಂಡು ರಾಜಕಾಲುವೆ ಕಾಮಗಾರಿಯನ್ನು ಶೀಘ್ರದಲ್ಲಿ ಪೂರ್ಣಗೊಳಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Leave a Reply

comments

Related Articles

error: