ಕರ್ನಾಟಕಪ್ರಮುಖ ಸುದ್ದಿ

ಕೊಡಗು ಮಹಾ ಹಾನಿ : ದೇವರ ಕೆಲಸವೆಂದು ಕಾರ್ಯಪ್ರವೃತ್ತರಾಗಿ : ಅಧಿಕಾರಿಗಳಿಗೆ ಸಿಎಂ ಕುಮಾರಸ್ವಾಮಿ ಸೂಚನೆ

ರಾಜ್ಯ(ಮಡಿಕೇರಿ) ಆ.19 :- ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೊಡಗಿನ ಜನರ ಪರಿಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ದೇವರ ಕೆಲಸದಂತೆ ಅಧಿಕಾರಿಗಳು ಕಾರ್ಯಪ್ರವೃತ್ತ ರಾಗುವಂತೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದ್ದಾರೆ.

ಇನ್ನು ಮೂರು ದಿನಗಳಲ್ಲಿ ಜಿಲ್ಲೆಯಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ತಾತ್ಕಾಲಿಕ ಶೆಡ್‍ಗಳಲ್ಲಿ ಆಶ್ರಯ ಕಲ್ಪಿಸಲು ಕ್ರಮಕೈಗೊಳ್ಳುವಂತೆ ಆದೇಶಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಅಧಿಕಾರಿಗಳ ತುರ್ತು ಸಭೆ ನಡೆಸಿ ಜಿಲ್ಲೆಯಲ್ಲಿ ಕೈಗೊಂಡ ಪರಿಹಾರ ಕಾರ್ಯಗಳ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿ ಕುಮಾರಸ್ವಾಮಿ, ಸಮಸ್ಯೆ ಪರಿಹಾರ ಸಂಬಂಧ ಅಧಿಕಾರಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದ್ದು, ಜನತೆಯ ಕಣ್ಣೀರು ಒರೆಸುವುದು ಮುಖ್ಯವಾಗಬೇಕೆಂದು ಸೂಚಿಸಿದರು.

ಮನೆ ಕಳೆದುಕೊಂಡ ಬಡವರನ್ನು ಸಮುದಾಯ ಭವನಗಳಲ್ಲಿ ಹೆಚ್ಚು ದಿನ ಇಟ್ಟುಕೊಳ್ಳಲೂ ಕಷ್ಟಸಾಧ್ಯವಾಗಲಿದೆ. ಸಂತ್ರಸ್ತರಿಗೆ  ಶಾಶ್ವತವಾದ ಸೂರು ನೀಡುವ ಸಂಬಂಧಿತ ಇನ್ನು ಮೂರು ದಿನಗಳಲ್ಲಿ ಸರ್ಕಾರಿ ಜಾಗ ಗುರುತಿಸಿ ಶೆಡ್ ನಿರ್ಮಾಣ ಮಾಡಬೇಕು ಎಂದು ಆದೇಶಿಸಿದರು. ಶಾಶ್ವತವಾಗಿ ಮನೆ ನಿರ್ಮಾಣಕ್ಕೆ 4 ತಿಂಗಳಾದರೂ ಬೇಕಾದೀತು ಎಂದೂ ಕುಮಾರಸ್ವಾಮಿ ಅಭಿಪ್ರಾಯಪಟ್ಟರು.

ನಿರಾಶ್ರಿತರಿಗೆ ಸೌಕರ್ಯ ಕಲ್ಪಿಸುವ ಸಂದರ್ಭ ಯಾವುದೇ ಕಾರಣಕ್ಕೂ ಸರ್ಕಾರಕ್ಕೆ ಕಪ್ಪುಚುಕ್ಕೆಯಾಗದಂತೆ ಕಾರ್ಯನಿರ್ವಹಿಸಬೇಕು. ಸರ್ಕಾರ ಪುನರ್ ವಸತಿ ಕೇಂದ್ರಗಳಲ್ಲಿ ಎಲ್ಲಾ ರೀತಿಯ ಸೌಕರ್ಯ ನೀಡುತ್ತಿದೆ. ಈಗಾಗಲೇ ಕೇಂದ್ರಗಳಿಗೆ 120 ಸಂಚಾರಿ ಶೌಚಾಲಯ ರವಾನಿಸಲಾಗಿದೆ. ಇವುಗಳಿಗೆ ನೀರಿನ ಸಂಪರ್ಕ ನೀಡಿ ಸೋಮವಾರದಿಂದಲೇ ಬಳಕೆಗೆ ಯೋಗ್ಯವಾಗುವಂತೆ ನೋಡಿಕೊಳ್ಳಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದರು.

ಜಿಲ್ಲೆಯಲ್ಲಿ ಸಂಪರ್ಕ ಕಳೆದುಕೊಂಡ ರಸ್ತೆಗಳಿಗೆ ಮರುಸಂಪರ್ಕಕ್ಕೆ ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮಾರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದ ಕುಮಾರಸ್ವಾಮಿ, ಜಿ.ಪಂ. ಸೇರಿದ ರಸ್ತೆಗಳಲ್ಲಿನ ದುರಸ್ತಿ ಕಾರ್ಯಗಳನ್ನೂ ಕೈಗೊಳ್ಳಿ ಎಂದು ಹೇಳಿದರು.

ತಾನು ಈವರೆಗೆ ಕೊಡಗಿನ ಅಭಿವೃದ್ಧಿಗೆ ನೀಡಿರುವ ಯೋಜನೆಗಳೇ ಒಂದು ರೀತಿಯಲ್ಲಿದ್ದರೆ ಇದೀಗ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ಕೊಡಗಿಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಲಿರುವ ಯೋಜನೆಗಳೇ ಮತ್ತೊಂದು ರೀತಿಯಾದ್ದಾಗಿರುತ್ತದೆ  ಎಂದು ಕುಮಾರಸ್ವಾಮಿ ತಿಳಿಸಿದರು.

ಪ್ರವಾಹಪೀಡಿತ ಕೊಡಗಿನಲ್ಲಿ ಸರ್ಕಾರ ಕೈಗೊಂಡಿರುವ ಅತ್ಯುತ್ತಮ  ಕಾರ್ಯಗಳ ಬಗ್ಗೆ  ಯಾವುದೇ ಟೀಕೆ ವ್ಯಕ್ತವಾಗಬಾರದು ಎಂದೂ ಕಿವಿಮಾತು ಹೇಳಿದ ಅವರು, ಮಧ್ಯವರ್ತಿಗಳು ಸಂತ್ರಸ್ತರಿಗೆ ಜನರು ನೀಡುವ ಹಣವನ್ನು ದುರಪಯೋಗಪಡಿಸಿಕೊಳ್ಳದಂತೆ ಗಮನ ಹರಿಸಿ, ಜನತೆಯ ವಿಶ್ವಾಸ ಕಳೆದುಹೋಗದಂತೆ  ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮಡಿಕೇರಿಯಲ್ಲಿ ಖಾಸಗಿ ಬಸ್ ನಿಲ್ದಾಣದ ಹಿಂಬದಿ ಭೂಕುಸಿತದಿಂದ ಬಸ್ ನಿಲ್ದಾಣದ ಅನೇಕ ಕಟ್ಟಡಗಳು ಕುಸಿದುಹೋಗಿದೆ. ಹೀಗಾಗಿ ಅಲ್ಲಿನ ಎಲ್ಲಾ ಕಟ್ಟಡಗಳನ್ನೂ ನೆಲಸಮ ಮಾಡಿ ಎಂದೂ ಸೂಚಿಸಿದ ಕುಮಾರಸ್ವಾಮಿ, ಹೆಚ್ಚಿನ ಅಧಿಕಾರಿಗಳನ್ನು ಪರಿಹಾರ ಕಾರ್ಯಗಳಿಗೆ ನಿಯೋಜಿಸಿ ಎಂದರಲ್ಲದೇ ಪರಿಹಾರ ಕಾರ್ಯಗಳನ್ನು ಪರಿಶೀಲಿಸಲು ಮತ್ತೆ 3-4 ದಿನಗಳಲ್ಲಿ ಮತ್ತೆ ಮಡಿಕೇರಿಗೆ ಭೇಟಿ ನೀಡುವುದಾಗಿ ತಿಳಿಸಿದರು. ಸಂಪೂರ್ಣ ಹಾಳಾಗಿರುವ ಮಡಿಕೇರಿ- ಮಂಗಳೂರು ಸಂಪರ್ಕ ರಸ್ತೆಯನ್ನು ಮರು ನಿರ್ಮಾಣ ಮಾಡುವುದು ಇಂಜಿನಿಯರ್ ಗಳ ಮೊದಲ ಆದ್ಯತೆಯಾಗಿರಲಿ ಎಂದು ಹೇಳಿದರು. ಪರಿಹಾರ ಕಾರ್ಯದಲ್ಲಿ ಕರ್ತವ್ಯಲೋಪ ಎಸಗಿದ ಅಧಿಕಾರಿಗಳನ್ನು ಅಮಾನತು ಗೊಳಿಸಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಎಚ್ಚರಿಸಿದರು.

ಕೊಡಗಿನಲ್ಲಿ ಕಂಡುಕೇಳರಿಯದ ಕೆಟ್ಟ ಪರಿಸ್ಥಿತಿ ಎದುರಾದ ಸಂದರ್ಭ ಛಲಬಿಡದೇ, ಎದೆಗುಂದದೇ ಕಾರ್ಯನಿರ್ವಹಿಸುತ್ತಿರುವ  ಅಧಿಕಾರಿವರ್ಗ, ಸೇನಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ, ರಾಜ್ಯ ವಿಪತ್ತು ನಿರ್ವಹಣಾ ದಳ , ಸಂಘಸಂಸ್ಥೆಗಳು,ಪೊಲೀಸ್ ಅಧಿಕಾರಿಗಳಿಗೆ ಸರ್ಕಾರ ಧನ್ಯವಾದ ಸಲ್ಲಿಸುತ್ತಿದೆ ಎಂದು ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಪೊಲೀಸ್ ಉನ್ನತಾಧಿಕಾರಿಗಳಾದ ಎಂ.ಎನ್.ರೆಡ್ಡಿ, ಕಮಲ್ ಪಂತ್, ಬಿ.ಭಾಸ್ಕರ್ ರಾವ್, ಸುನೀಲ್ ಅಗರ್ವಾಲ್,  ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಕಲ್ಪನಾ, ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ, ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ಸಭೆಯಲ್ಲಿ ಹಾಜರಿದ್ದರು.   (ಕೆಸಿಐ,ಎಸ್.ಎಚ್)

Leave a Reply

comments

Related Articles

error: