
ಪ್ರಮುಖ ಸುದ್ದಿ
ಕೊಡಗು,ಮಲೆನಾಡು, ಕರಾವಳಿ ಭಾಗದಲ್ಲಿ ಎರಡು ದಿನಗಳಲ್ಲಿ ಮಳೆಯ ಪ್ರಮಾಣ ಸಂಪೂರ್ಣ ಇಳಿಮುಖ : ಡಾ.ಜಿ.ಎಸ್.ಶ್ರೀನಿವಾಸ್
ರಾಜ್ಯ(ಬೆಂಗಳೂರು)ಆ.20:- ಕಳೆದ ಒಂದು ವಾರದಿಂದ ನಿರಂತರ ಮಳೆ, ಗುಡ್ಡ ಕುಸಿತ, ಪ್ರವಾಹದಿಂದ ತತ್ತರಿಸಿ ಹೋಗಿರುವ ಕೊಡಗು ಜಿಲ್ಲೆಯ ಜನರಿಗೆ ರಿಲೀಫ್ ನೀಡುವ ಸುದ್ದಿ ಲಭಿಸಿದೆ. ಕೊಡಗು ಸೇರಿದಂತೆ ಮಲೆನಾಡು, ಕರಾವಳಿ ಭಾಗದಲ್ಲಿ ಎರಡು ದಿನಗಳಲ್ಲಿ ಮಳೆಯ ಪ್ರಮಾಣ ಸಂಪೂರ್ಣ ಇಳಿಮುಖವಾಗಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ತಿಳಿಸಿದ್ದಾರೆ.
ಮಳೆಯ ಪ್ರಮಾಣ ಕುರಿತು ಮಾತನಾಡಿರುವ ಡಾ.ಜಿ.ಎಸ್.ಶ್ರೀನಿವಾಸ್, ಈ ಬಾರಿ ಕರಾವಳಿ, ಮಲೆನಾಡು ಭಾಗಗಳಲ್ಲಿ ನಿರೀಕ್ಷೆಗಿಂತ ಶೇ.50ರಷ್ಟು ಹೆಚ್ಚು ಮಳೆಯಾಗಿದೆ. ಸಾಧಾರಣ ಮಳೆ ಮುಂದುವರೆಯಲಿದ್ದು, ಇನ್ನೆರಡು ದಿನಗಳಲ್ಲಿ ಮಳೆ ಪ್ರಮಾಣ ಇಳಿಕೆಯಾಗಲಿದೆ ಎಂದು ತಿಳಿಸಿದ್ದಾರೆ.
ಕಳೆದ ನಾಲ್ಕೈದು ದಿನಗಳಿಂದ ವಾಡಿಕೆಗಿಂತ ಹೆಚ್ಚು ಪ್ರಮಾಣದ ಮಳೆಯಾಗಿದ್ದರಿಂದ ಅತಿವೃಷ್ಟಿ ಹಾಗೂ ಪ್ರವಾಹವಾಗಿತ್ತು. ನಿನ್ನೆ ಚಿಕ್ಕಮಗಳೂರು ಹಾಗೂ ಕೊಡಗಿನ ಕೆಲವೆಡೆ ಭಾರೀ ಮಳೆಯಾಗಿದೆ. ಆದರೂ ಒಟ್ಟಾರೆ ಮಳೆ ಪ್ರಮಾಣ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ. ಎಡಬಿಡದೆ ನಿರಂತರವಾಗಿ ಸುರಿದ ಮಳೆಯಿಂದ ಭೂಮಿಯಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿ ಭೂಕುಸಿತಗಳು ಉಂಟಾಗಿವೆ ಎಂದಿದ್ದಾರೆ.
ಕಳೆದ ಬಾರಿ ಆಗಸ್ಟ್ ನಲ್ಲಿ ಬೆಂಗಳೂರು, ಸುತ್ತಮುತ್ತ ವಾಡಿಕೆಗಿಂತ ಹೆಚ್ಚು ಮಳೆಯಾಗಿತ್ತು. ಆದರೇ ಈ ಬಾರಿ ಬೆಂಗಳೂರಿನಲ್ಲಿ ಹೆಚ್ಚು ಮಳೆಯಾಗಿಲ್ಲ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)