ಮೈಸೂರು

ಲಾಭದಾಯಕ ಉದ್ಯಮಕ್ಕಾಗಿ ಅಣಬೆ ಕೃಷಿ ಕೈಗೊಳ್ಳಿ: ಡಾ.ಜಿ.ಜನಾರ್ಧನ್

ಮೈಸೂರು,ಆ.20-ಅಣಬೆ ಕೃಷಿ ಸಾಮಾನ್ಯ ಕೃಷಿಗಿಂತ ವಿಭಿನ್ನವಾಗಿದೆ. ಲಾಭದಾಯಕ ಉದ್ಯಮಕ್ಕಾಗಿ ಅಣಬೆ ಕೃಷಿಯನ್ನು ಕೈಗೊಳ್ಳಬಹುದೆಂದು ತೋಟಗಾರಿಕೆ ಮಹಾವಿದ್ಯಾಲಯ ಮೈಸೂರಿನ ಡೀನ್ ಡಾ.ಜಿ. ಜನಾರ್ಧನ್ ತಿಳಿಸಿದರು.

ವಿಶ್ವದಲ್ಲಿ ಅಣಬೆಯನ್ನು ಒಂದು ಆಹಾರ ಪದಾರ್ಥವಾಗಿ ಗುರುತಿಸಿ ವಾಣಿಜ್ಯ ಬೆಳೆಯಾಗಿ ಬೆಳೆಯಲಾಗುತ್ತಿದೆ. ಇಂತಹ ಅಣಬೆ ಕೃಷಿಯ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸಲು ಹಾಗೂ ಅಣಬೆ ಕೃಷಿಯನ್ನು ಉತ್ತೇಜಿಸಲು ತೋಟಗಾರಿಕೆ ಮಹಾವಿದ್ಯಾಲಯ ಹಾಗೂ ವಿಸ್ತರಣಾ ಶಿಕ್ಷಣ ಘಟಕ ನಗರದ ವಾಣಿವಿಲಾಸ್ ವಿದ್ಯಾಸಂಸ್ಥೆಯ ಪದವಿ ವಿದ್ಯಾರ್ಥಿನಿಯರಿಗೆ ತರಬೇತಿ ಕಾರ್ಯಕ್ರಮ ಆಯೋಜಿಸಿತ್ತು.

ಸಂಪನ್ಮೂಲ ವ್ಯಕ್ತಿಯಾದ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ಸಸ್ಯರೋಗ ಶಾಸ್ತ್ರ ವಿಭಾಗದ ವಿಜ್ಞಾನಿ ಡಾ.ಸಿ.ಚಂದ್ರಶೇಖರ್ ಚಿಪ್ಪಣಬೆ ಬೇಸಾಯ ಮತ್ತು ಮೌಲ್ಯವರ್ಧನೆ ಕುರಿತಾದ ಹಸ್ತ ಪ್ರತಿಯನ್ನು ಬಿಡುಗಡೆ ಮಾಡಿದರು ಹಾಗೂ ಅಣಬೆ ಕೃಷಿಯ ಸುಧಾರಿತ ಬೇಸಾಯ ತಂತ್ರಜ್ಞಾನಗಳ ಬಗ್ಗೆ ವಿವರವಾಗಿ ತಿಳಿಸಿಕೊಟ್ಟರು.

ಮತ್ತೋರ್ವ ಸಂಪನ್ಮೂಲ ವ್ಯಕ್ತಿಯಾದ ತೋಟಗಾರಿಕೆ ಮಹಾವಿದ್ಯಾಲಯ ಸಹಾಯಕ ಪ್ರಾಧ್ಯಾಪಕ ಡಾ. ವಿಕ್ರಮ್ ಅಪ್ಪಣ್ಣ, ಚಿಪ್ಪಣಬೆ ಬೇಸಾಯ ಮತ್ತು ಮೌಲ್ಯವರ್ಧನೆಯ ಬಗ್ಗೆ ತಿಳಿಸಿಕೊಟ್ಟರು.

ಅಣಬೆ ಕೃಷಿಯಲ್ಲಿ ತೊಡಗಿಸಿಕೊಂಡ ತೋಟಗಾರಿಕೆ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಅವರ ಅನುಭವವನ್ನು ಹಂಚಿಕೊಂಡರು.

ಈ ಕಾರ್ಯಕ್ರಮದ ಅಂಗವಾಗಿ ಅಣಬೆ ಕೃಷಿಯ ವಸ್ತುಪ್ರದರ್ಶನವನ್ನು ಆಯೋಜಿಸಲಾಗಿತ್ತು. ಇದರಲ್ಲಿ ವಿವಿಧ ಜಾತಿಯ ಅಣಬೆಗಳು, ಅಣಬೆ ಬೆಳೆಯ ವಿವಿಧ ಹಂತಗಳು ಹಾಗೂ ಅಣಬೆಯ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ಪ್ರದರ್ಶಿಸಲಾಯಿತು.

ತೋಟಗಾರಿಕೆ ಮಹಾವಿದ್ಯಾಲಯದ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ತನ್ವೀರ್ ಅಹ್ಮದ್, ಸಹಾಯಕ ಪ್ರಾಧ್ಯಾಪಕರಾದ ಡಾ. ಅರವಿಂದ ಕುಮಾರ್, ಡಾ.ಎಚ್.ಎಂ.ಪಲ್ಲವಿ, ಡಾ.ಶೀಲಾ ರಾಣಿ, ಡಾ.ಆರ್.ರಾಜೇಶ್ವರಿ, ಡಾ.ಜಿ.ಪಿ.ಮುತ್ತುರಾಜು ಉಪಸ್ಥಿತರಿದ್ದರು. (ಎಂ.ಎನ್)

Leave a Reply

comments

Related Articles

error: