ಕರ್ನಾಟಕಪ್ರಮುಖ ಸುದ್ದಿ

ಕೇಂದ್ರದಿಂದ ಮೊದಲ ಹಂತ 100 ಕೋಟಿ ರೂ. ಬೇಕು : ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮನವಿ

ರಾಜ್ಯ(ಮಡಿಕೇರಿ )ಆ.20 :- ಕೇರಳಕ್ಕೆ 500 ಕೋಟಿ ರೂ. ನೀಡಿರುವ ಪ್ರಧಾನಿ ಮೋದಿ ಕೊಡಗು ಜಿಲ್ಲೆಯಲ್ಲಿ ಪರಿಹಾರ ಕಾರ್ಯಗಳಿಗಾಗಿ ಕನಿಷ್ಟ 100 ಕೋಟಿ ರೂ. ಗಳನ್ನಾದರೂ ಪ್ರಥಮ ಹಂತದಲ್ಲಿ ಬಿಡುಗಡೆಗೊಳಿಸಬೇಕೆಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮನವಿ ಮಾಡಿದ್ದಾರೆ. ಜಿಲ್ಲೆಯಲ್ಲಿ ಇಷ್ಟೆಲ್ಲಾ ಹಾನಿಯಾದರೂ ಕೇಂದ್ರ ಸರ್ಕಾರದಿಂದ ಪ್ರಮುಖ ಖಾತೆಯ ಸಚಿವರು ಯಾರೂ ಕೊಡಗಿಗೆ ಭೇಟಿ ನೀಡದಿರುವುದು ವಿಷಾದನೀಯ ಎಂದು ಉಪಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರಕೃತಿ ವಿಕೋಪದಿಂದ ನಲುಗಿರುವ ಕೊಡಗಿನಲ್ಲಿ ಈವರೆಗೆ 5 ಸಾವಿರ ಮನೆಗಳು ನಾಶವಾಗಿದ್ದು, ರಾಜ್ಯ ಸರಕಾರ ಸದಾ ಕೊಡಗಿನ ಜನತೆಯೊಂದಿಗಿದೆ. ಕೇಂದ್ರ ಸರ್ಕಾರದಿಂದ ರಾಜ್ಯವು ಕೊಡಗಿನ  ಸಮಸ್ಯೆ ಪರಿಹಾರಕ್ಕೆ ಪ್ರಥಮ ಹಂತದಲ್ಲಿ ಕನಿಷ್ಟ 100 ಕೋಟಿ ರೂ.ಗಳನ್ನು ನಿರೀಕ್ಷಿಸುತ್ತಿದೆ ಎಂದು ಹೇಳಿದರು.

ಅತಿವೃಷ್ಟಿ ಪೀಡಿತ ಕೊಡಗು ಜಿಲ್ಲೆಗೆ ಭೇಟಿ ನೀಡಿದ ಪರಮೇಶ್ವರ್ ಮಡಿಕೇರಿಯಲ್ಲಿನ ನಿರಾಶ್ರಿತರ ಕೇಂದ್ರಗಳಿಗೂ ತೆರಳಿ ಅಲ್ಲಿ ಆಶ್ರಯ ಪಡೆದಿರುವ ಜನರಿಗೆ ಸಾಂತ್ವನ ಹೇಳಿದರು.

ನಂತರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಪರಮೇಶ್ವರ್, ಪ್ರಕೃತಿ ವಿಕೋಪದಿಂದಾಗಿ ಉಂಟಾಗಿರುವ ಸಮಸ್ಯೆಯನ್ನು ಸರ್ಕಾರ ಅತ್ಯಂತ ಗಂಭೀರ ಎಂದು ಪರಿಗಣಿಸಿದೆ ಎಂದರು. 7 ಜನ ಸಾವನ್ನಪ್ಪಿರುವುದು ಅಧಿಕೃತವಾಗಿದ್ದರೂ ಮಣ್ಣಿನಡಿ ಇನ್ನೂ ಕೆಲವರು ಸಿಲುಕಿ ಸಾವನ್ನಪ್ಪಿರುವ ಶಂಕೆಯಿದೆ ಎಂದು ಹೇಳಿದರು. ಈವರೆಗೆ 5 ಸಾವಿರ ಮನೆಗಳು ನಾಶವಾಗಿದ್ದು, ನಿರಾಶ್ರಿತರಿಗೆ ಮನೆಗಳನ್ನು ಹೊಸ ಬಡಾವಣೆ ನಿರ್ಮಾಣದ ಮೂಲಕ ನಿರ್ಮಿಸಿಕೊಡಲಾಗುತ್ತದೆ ಎಂದೂ ಸಚಿವರು ಹೇಳಿದರು.

ಕೊಡಗಿನಲ್ಲಿ ಸಂಭವಿಸಿರುವ ನಷ್ಟದ ಲೆಕ್ಕ ಹಾಕಲು ಇನ್ನೂ ಸಾಧ್ಯವಾಗಿಲ್ಲ. ಅನೇಕ ಗ್ರಾಮಗಳಿಗೆ ಸಂಪರ್ಕ ರಸ್ತೆಯೇ ಇಲ್ಲವಾದ್ದರಿಂದಾಗಿ ನಷ್ಟದ ಸಮೀಕ್ಷೆಯೇ ಸಿಗುತ್ತಿಲ್ಲ ಎಂದರು.ಮಳೆ ಸಂಪೂರ್ಣವಾಗಿ ನಿಂತ ಮೇಲಷ್ಟೇ ಕೊಡಗಿನಲ್ಲಿ ಸಂಭವಿಸಿರುವ ನಷ್ಟದ ಅಂದಾಜು ದೊರಕಲಿದೆ ಎಂದೂ ಸಚಿವರು ತಿಳಿಸಿದರು.

ಕಳೆದೆರಡು ದಿನಗಳಿಗೆ ಹೋಲಿಸಿದರೆ ಈಗಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬಂದಿದೆ ಎಂದು ಹೇಳಿದ ಡಾ.ಜಿ.ಪರಮೇಶ್ವರ್, ಕೊಡಗಿನ ಸಂತ್ರಸ್ಥರ ಪರಿಹಾರ ನಿಧಿಗೆ ರಾಜ್ಯದ ಪೆÇಲೀಸ್ ಸಿಬ್ಬಂದಿಗಳು 1 ದಿನದ ವೇತನವಾದ 5.82 ಕೋಟಿ ರೂ. ಮತ್ತು ಅಗ್ನಿಶಾಮಕ ದಳದ 10 ಸಾವಿರ ಸಿಬ್ಬಂದಿಗಳು 1 ದಿನದ ವೇತನ ನೀಡಲಿದ್ದು ಸುಮಾರು 7 ಕೋಟಿ ರು.  ಆರ್ಥಿಕ ಪರಿಹಾರ ನೀಡಲಿದ್ದಾರೆ ಎಂದು ತಿಳಿಸಿದರು.

ಕೊಡಗಿಗೆ ರವಾನಿಸಿರುವ ಪರಿಹಾರ ಸಾಮಾಗ್ರಿಗಳು ದುರ್ಬಳಕೆಯಾಗುತ್ತಿದೆ ಎಂದು ಕೇಳಿಬಂದಿರುವ ದೂರಿನ ಬಗ್ಗೆ ಗಮನ ಹರಿಸಲಾಗುತ್ತದೆ ಎಂದೂ ಪರಮೇಶ್ವರ್  ಹೇಳಿದರು.

ಕೊಡಗು ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಶಾಸಕ  ಶ್ರೀನಿವಾಸ್ , ಎಡಿಜಿಪಿ ಬಿ.ಭಾಸ್ಕರ್ ರಾವ್,  ಸುನೀಲ್  ಅಗರ್ ವಾಲ್, ಜಿಲ್ಲಾಧಿಕಾರಿ ಶ್ರಿವಿದ್ಯಾ,  ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೇಕರ್ ಹಾಜರಿದ್ದರು.

ಗ್ರಾಮಸ್ಥರ ರಕ್ಷಣೆಯಾಗಿದೆ

ಕೊಡಗಿನ ಮಕ್ಕಂದೂರು, ಮುಕ್ಕೋಡ್ಲು ಸೇರಿದಂತೆ ಭೂಕುಸಿತಕ್ಕೊಳಕ್ಕಾಗಿ ಸಂಕಷ್ಟದಲ್ಲಿರುವ ಗ್ರಾಮ  ವ್ಯಾಪ್ತಿಯ ಎಲ್ಲಾ ಜನತೆಯನ್ನು ರಕ್ಷಿಸಲಾಗಿದೆ. ಸೋಮವಾರ ಕೂಡ ಸೇನಾ ಕಾರ್ಯಾಚರಣೆ ನಡೆಸಲಾಗಿದ್ದು,  ಅಪಾಯದಲ್ಲಿದ್ದ ಎಲ್ಲಾ ಗ್ರಾಮಸ್ಥರನ್ನು ಸುರಕ್ಷಿತವಾಗಿ ಕರೆತರಲಾಗಿದೆ. ಸೇನಾ ಕಾರ್ಯಾಚರಣೆ ಯಶಸ್ವಿಯಾಗಿದೆ ಎಂದು ಅಗ್ನಿಶಾಮಕ ದಳ ಮತ್ತು ಗೃಹ ರಕ್ಷಕ ದಳದ ಮಹಾನಿರ್ದೇಶಕ ಎಂ.ಎನ್.ರೆಡ್ಡಿ ಮಾಹಿತಿ ನೀಡಿದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: