ಮೈಸೂರು

ಕುವೆಂಪು ಜಯಂತಿ: ‘ಕಾಲಕ್ಕೆ ಕನ್ನಡಿ – ವಿಶ್ವಕವಿ ಕುವೆಂಪು’ ಗೀತಗಾಯನ, ರಥಯಾತ್ರೆ

ರಾಷ್ಟ್ರಕವಿ ಕುವೆಂಪುರವರ 112ನೇ ಜನ್ಮದಿನೋತ್ಸವದಂಗವಾಗಿ ಕಾನ್ಮಲೆಗಳ ಮೇರು ಶಿಖರ “ಕಾಲಕ್ಕೆ ಕನ್ನಡಿ – ವಿಶ್ವಕವಿ ಕುವೆಂಪು” ವಿಷಯವಾಗಿ ಕುವೆಂಪು ವಿರಚಿತ ಗೀತ ಗಾಯನ, ರೂಪಕ, ನೃತ್ಯ, ನಾಟಕ ಹಾಗೂ ಕಾವ್ಯೋತ್ಸವವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ ತಿಳಿಸಿದರು.

ಅವರು ಬುಧವಾರ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಡಿ.29ರ ಗುರುವಾರ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ಸಂಜೆ 5 ಗಂಟೆಗೆ ಕಾರ್ಯಕ್ರಮ ಆಯೋಜಿಸಲಾಗಿದೆ. ಜ್ಞಾನಪೀಠ ಪುರಸ್ಕೃತ ಜಾನಪದ ಕವಿ ಡಾ.ಚಂದ್ರಶೇಖರ ಕಂಬಾರರು ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ನಟ ರಾಘವೇಂದ್ರ ರಾಜಕುಮಾರ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ತಿಳಿಸಿದರು.

ಖ್ಯಾತ ಗಾಯಕ ಡಾ. ಶಮಿತ ಮಲ್ನಾಡ್ ಹಾಗೂ ತಂಡದವರಿಂದ ಗೀತಗಾಯನ, ಡ್ರಾಮಾ ಜ್ಯೂನಿಯರ್ಸ್ ಖ್ಯಾತಿಯ ಬಾಲನಟರಿಂದ ಕುವೆಂಪು ವಿರಚಿತ ಶೂದ್ರ ನಾಟಕ ಪ್ರದರ್ಶನವಿದೆ. ಜನಚೇತನ ಟ್ರಸ್ಟ್, ಗ್ರಾಮೀಣ ಟ್ರಸ್ಟ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲಾಕೂಟ ಮೈಸೂರು ಹಾಗೂ ಜನಚೇತನ ಟ್ರಸ್ಟ್ ಸಹಯೋಗದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ರಥಯಾತ್ರೆ: ಜನ್ಮ ದಿನಾಚರಣೆ ಪ್ರಯುಕ್ತ ಡಿ.22 ರಿಂದ ರಥಯಾತ್ರೆಯನ್ನು ಹಮ್ಮಿಕೊಂಡಿದ್ದು, ಕುವೆಂಪುರವರ ಪುತ್ರಿ ತಾರಿಣಿ ಚಿದಾನಂದ್ ‘ಉದಯರವಿಯ’ಯಲ್ಲಿ ಚಾಲನೆ ನೀಡುವರು. ಹಿರಿಯ ಸಾಹಿತಿ ಡಾ. ಸಿ.ಪಿ.ಕೆ. ಅವರು ಮುಖ್ಯ ಅತಿಥಿಯಾಗಿರುವರು. ಜನಚೇತನ ಟ್ರಸ್ಟ್ ಕುವೆಂಪು ಬದುಕು-ಬರಹದ “ನೇಗಿಲಹಾಡು” ಪತ್ರಿಕೆಯನ್ನು ಚಿಂತಕ ನೀಲಗಿರಿ ತಳವಾರ್ ಬಿಡುಗಡೆಗೊಳಿಸುವರು.

ರಥವು ಕುವೆಂಪು ನಿವಾಸದಿಂದ ಹೊರಟು ನಿರ್ಮಲ ಕಾನ್ವೆಂಟ್, ಒಂಟಿಕೊಪ್ಪಲು, ವೆಂಕಟರಮಣಸ್ವಾಮಿ ದೇವಸ್ಥಾನ ಮೂಲಕ ವಿಕ್ರಾಂತ್ ಟೈರ್ಸ್ ಕಾರ್ಖಾನೆಯಿಂದ ರಿಂಗ್ ರಸ್ತೆಯಲ್ಲಿ ಸಾಗಿ ಬನ್ನೂರು ತಲುಪುವುದು. ಡಿ.23 ಹಾಗೂ 24ರಂದು ಬನ್ನೂರು – ಟಿ.ನರಸೀಪುರ ಹೋಬಳಿಗಳು, ಡಿ.25ರಂದು ಮೈಸೂರು ತಾಲೂಕಿನ ಗ್ರಾಮಗಳಲ್ಲಿ, ಡಿ.26ರಿಂದ 29 ರ ವರೆಗೆ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಡಿ.29 ರ ಸಂಜೆ 5 ಕ್ಕೆ ಬಯಲು ರಂಗಮಂದಿರ ತಲುಪಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜನಚೇತನ ಟ್ರಸ್ಟ್ ಅಧ್ಯಕ್ಷ ಪ್ರಸನ್ನ ಎನ್.ಗೌಡ, ಗ್ರಾಮೀಣ ಟ್ರಸ್ಟ್ ಅಧ್ಯಕ್ಷ ರಾಜು ಬಿ. ಕನ್ನಲಿ, ಕಲಾಕೂಟ ಮೈಸೂರು ಅಧ್ಯಕ್ಷ ಎಂ. ಚಂದ್ರಶೇಖರ್ ಹಾಗೂ ಜನಚೇತನ ಟ್ರಸ್ಟ್ ನ ಟ್ರಸ್ಟಿ ಪ್ರಶಾಂತ್  ಉಪಸ್ಥಿತರಿದ್ದರು.

Leave a Reply

comments

Related Articles

error: