ಮೈಸೂರು

ಪೌರಕಾರ್ಮಿಕರ ಸೌಲಭ್ಯ ತಿಳಿಸುವ ಕಾಯಕಕ್ಕೆ ಮೊದಲ ಆದ್ಯತೆ : ಎಂ.ಆರ್.ವೆಂಕಟೇಶ್

ಅಧಿಕಾರಿಗಳ ಬೇಜವಾಬ್ದಾರಿಯಿಂದ ಸಮಾಜದಲ್ಲೇ ಕೆಳ ಸ್ಥರದಲ್ಲಿರುವ ಪೌರಕಾರ್ಮಿಕರು ಅಭಿವೃದ್ಧಿಯಿಂದ ದೂರ ಉಳಿದಿದ್ದು, ಅಂತಹವರಿಗೆ ಸೌಲಭ್ಯ ತಿಳಿಸುವ ಕಾಯಕಕ್ಕೆ ಮೊದಲ ಆದ್ಯತೆ ನೀಡಲಾಗಿದೆ  ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ್ ತಿಳಿಸಿದರು.

ಮೈಸೂರು ನಗರಪಾಲಿಕೆ ಸಭಾಂಗಣದಲ್ಲಿ  ಬುಧವಾರ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ ಹಾಗೂ ಜಿಲ್ಲಾಡಳಿತದ ನೇತೃತ್ವದಲ್ಲಿ ನಡೆದ ಪೌರಕಾರ್ಮಿಕರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಯೋಗದ ಅಧ್ಯಕ್ಷರ ಎಂ.ಆರ್.ವೆಂಕಟೇಶ್  ಮಾತನಾಡಿದರು. ಪೌರ ಕಾರ್ಮಿಕರನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರು 78ಕೋಟಿ ಅನುದಾನವನ್ನು ಪೌರಕಾರ್ಮಿಕರ ಅಭಿವೃದ್ಧಿಗೆ ನೀಡಿದ್ದಾರೆ.48ಸಾವಿರ ಗುತ್ತಿಗೆ ನೌಕರರನ್ನು ಖಾಯಂಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದಾರೆ ಎಂದು ತಿಳಿಸಿದರು.

ಪೌರಕಾರ್ಮಿಕರಿಗೆ ಹೊಸ ವರ್ಷದ ಆರಂಭಕ್ಕೆ ಹೆಲ್ಪಲೈನ್, ವಿದೇಶ ಪ್ರಯಾಣ, ಗೃಹಭಾಗ್ಯ, ಆರೋಗ್ಯ ಭಾಗ್ಯ ಸೇರಿದಂತೆ ಇನ್ನೂ ಹಲವು ರೀತಿ ಸೌಲಭ್ಯಗಳನ್ನು ಮುಟ್ಟಿಸುವ ಕೆಲಸವನ್ನು ಆಯೋಗದಿಂದ ಮಾಡಲಾಗುವುದು. ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಪೌರಕಾರ್ಮಿಕರಿಗೆ ನೂರಾರು ರೀತಿಯ ಸೌಲಭ್ಯಗಳಿವೆ. ಈ ಹಿನ್ನಲೆಯಲ್ಲಿ ಜನವರಿಯಲ್ಲಿ ರಾಜ್ಯ ಹಾಗೂ ಎಲ್ಲಾ ಜಿಲ್ಲಾಕೇಂದ್ರಗಳಲ್ಲೂ ಪೌರಕಾರ್ಮಿಕರ ಹೆಲ್ಪಲೈನ್‍ಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ಪೌರಕಾರ್ಮಿಕರ ವಿದ್ಯಾಭ್ಯಾಸಕ್ಕೆ ಉಚಿತ ವಸತಿ ಸೌಲಭ್ಯ ಸೇರಿದಂತೆ ಧನ ಸಹಾಯ, ಆರೋಗ್ಯದಲ್ಲೂ ಶೇ,20 ರಷ್ಟು ವಿನಾಯಿತಿ, ನಿತ್ಯ ದುಡಿಯುವ ಪೌರಕಾರ್ಮಿಕರಿಗೆ ಬಿಸಿಯೂಟ ಯೋಜನೆ ಕಲ್ಪಿಸುವ ಕುರಿತು, ವಸತಿ ಸೌಲಭ್ಯ, ವೇತನ ಹೆಚ್ಚಳ ಸೇರಿದಂತೆ ಇನ್ನೂ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಇವೆಲ್ಲಾ ಯೋಜನಾ ವರದಿಯನ್ನು ಅಯೋಗ ಸಿದ್ಧಪಡಿಸಿ ರಾಜ್ಯ ಸರ್ಕಾರದ ಮುಂದಿಡಲಿದ್ದು, ಮುಂದಿನ ವರ್ಷದಲ್ಲಿ ಇವೆಲ್ಲದಕ್ಕೂ ಅನುಮೋದನೆ ದೊರೆಯಲಿದೆ ಎಂದರು.

ಪಾಲಿಕೆಯ ಕೆಲವು ಅಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Leave a Reply

comments

Related Articles

error: