ಪ್ರಮುಖ ಸುದ್ದಿಮೈಸೂರು

ಕಲಾವಿದರಿಗೆ ಮನ್ನಣೆ ಸಿಗಬೇಕು : ಬೆಳಕೆರೆ ನಿಧನ ನೋವು ತಂದಿದೆ : ಉಮಾಶ್ರೀ ಹೇಳಿಕೆ

rangayana-web-2ಸರ್ಕಾರ ಕಲಾವಿದರನ್ನು ಗುರುತಿಸಿ, ಅವರಿಗೆ ಸ್ಥಾನ ಮಾನವನ್ನು  ನೀಡಬೇಕು.  ಕಲಾವಿದರಿಗೆ ಸಮಾಜದಲ್ಲಿ ಮನ್ನಣೆ ಸಿಗಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದರು.

ರಂಗಾಯಣದ ವತಿಯಿಂದ ಬುಧವಾರ ಭೂಮಿಗೀತ ಸಭಾಂಗಣದಲ್ಲಿ  ಅಗಲಿದ ಹಿರಿಯ ರಂಗಭೂಮಿ ಕಲಾವಿದ ಮಂಜುನಾಥ್ ಬೆಳಕೆರೆ ಅವರ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಸಚಿವೆ ಉಮಾಶ್ರೀ ಪಾಲ್ಗೊಂಡು ಮಂಜುನಾಥ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಬಳಿಕ ಮಾತನಾಡಿದ ಅವರು ಕಲಾವಿದರು ರಂಗಭೂಮಿಗಾಗಿ ತಮ್ಮ ಜೀವನವನ್ನೇ ಅರ್ಪಿಸುತ್ತಾರೆ.ಅವರನ್ನು ಎಂದೂ ಮರೆಯಬಾರದು. ಮಂಜುನಾಥ ಅವರ ನಿಧನ ರಂಗಭೂಮಿಗೆ ತುಂಬಲಾರದ ನಷ್ಟ ಎಂದರು. ಸದಾ ಕ್ರೀಯಾಶೀಲರಾಗಿದ್ದ ಮಂಜುನಾಥ್ ರಂಗ ಚಟುವಡಿಕೆಗಳಲ್ಲಿ ಯಾವುದೇ ಚೌಕಟ್ಟಿಲ್ಲದೇ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸರಳ, ಸಜ್ಜನಿಕೆಯಿಂದ ಕೂಡಿದ ಮೇರು ನಟರಾಗಿದ್ದರು. ತಮ್ಮನ್ನೇ ಕಲೆಗಾಗಿ ಅರ್ಪಿಸಿದ್ದರು ಎಂದರು.

ಬೆಳಕೆರೆಯವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ರಂಗಭೂಮಿಯು ಬೇರೆಯವರ ಬದುಕಿಗೆ ಬೆಳಕಾಗುವಂತಹ ಕಲಾವಿದರನ್ನು ಸಮಾಜಕ್ಕೆ ನೀಡಿದೆ. ಕಲಾವಿದರ ಬದುಕು ವೈಯುಕ್ತಿಕವಾಗಿ ದುರಂತಗಳಿಂದ ಕೂಡಿರುತ್ತವೆ. ಅವರಿಗೆ ನಿಜವಾಗಿಯೂ ಮನ್ನಣೆ ಸಿಗುವಂತಾಗಬೇಕು ಎಂದು ತಿಳಿಸಿದರು.

ಹಿರಿಯ ರಂಗಕರ್ಮಿ ಪ್ರಸನ್ನ ಮಾತನಾಡಿ, ಮಂಜುನಾಥ್ ಬೆಳಕೆರೆ 27ವರ್ಷಗಳ ಕಾಲ ರಂಗಭೂಮಿಯಲ್ಲಿ ನಟ, ನಿರ್ದೇಶಕ, ವಸ್ತ್ರ ವಿನ್ಯಾಸಗಾರರಾಗಿ ಸೇವೆ ಸಲ್ಲಿಸಿದ್ದರು. ಕುಸುಮ ಬಾಲೆ ಎಂಬ ನಾಟಕದಲ್ಲಿ ಅಭಿನಯಿಸಿದ್ದ ಕಳ್ಳನ ಪಾತ್ರದ ಮೂಲಕ ತನ್ನನ್ನು ತಾನು ಗುರುತಿಸಿಕೊಂಡರು. ಅವರಿಗೆ ಗೌರವ ಸಲ್ಲುವ ಮೊದಲೇ ಅಗಲಿರುವುದು ನಿಜಕ್ಕೂ ನೋವಿನ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ನಿರ್ಮಲಾ ಮಠಪತಿ, ರಂಗಾಯಣ ಮಾಜಿ ನಿರ್ದೇಶಕ ಹೆಚ್.ಜನ್ನಾರ್ದನ್, ಕದಂಬ ವೇದಿಕೆಯ ರಾಜಶೇಖರ ಕದಂಬ  ಮತ್ತಿತರರು ಉಪಸ್ಥಿತರಿದ್ದರು

Leave a Reply

comments

Related Articles

error: