ಮೈಸೂರು

ಕುಡಿಯುವ ನೀರು ಸಮರ್ಪಕ ನಿರ್ವಹಣೆಗೆ ಮೊದಲ ಆದ್ಯತೆ: ಪುರಸಭೆ ಅಧ್ಯಕ್ಷ ವೇಣುಗೋಪಾಲ್

ಬೈಲಕುಪ್ಪೆ: ವರ್ಷಗಳಿಂದ ಬಾಕಿ ಉಳಿದಿದ್ದ ಸಾರ್ವಜನಿಕರ ಅರ್ಜಿಗಳನ್ನು ವಿಲೇವಾರಿ ಮಾಡಿ ಹಲವಾರು ಸಮಸ್ಯೆಗಳನ್ನು ಬಗೆ ಹರಿಸುವ ಮೂಲಕ ಅಧಿಕಾರದ ನೂರನೇ ದಿನವನ್ನು ಪೂರೈಸಿದ ಬಗ್ಗೆ ಪುರಸಭೆ ಅಧ್ಯಕ್ಷ ವೇಣುಗೋಪಾಲ್ ಅವರು ಹರ್ಷ ವ್ಯಕ್ತಪಡಿಸಿದರು.

ಪಟ್ಟಣದಲ್ಲಿರುವ ಪುರಸಭೆ ಕಛೇರಿಯ ಸಭಾಂಗಣದಲ್ಲಿ ಬುಧವಾರ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಸಹಕಾರವೇ ಯಶಸ್ಸಿಗೆ ಕಾರಣ ಎಂದು ತಿಳಿಸಿದರು.

ಸೆ.24 ರಂದು ಸಭೆ ನಡೆಸಿ 93 ಅರ್ಜಿಗಳು ಕಛೇರಿಯಲ್ಲಿ ಉಳಿದುಕೊಂಡಿದ್ದು ಅದರಲ್ಲಿ ನಿಯಮಾನುಸಾರ ಕ್ರಮಕೈಗೊಂಡು ವಿಲೇವಾರಿ ಮಾಡಿದ್ದು, ಕಾರ್ಮಿಕರ ಕೊರತೆ ಇದ್ದರೂ ಲಭ್ಯವಿರುವ ಕಾರ್ಮಿಕರನ್ನು ಪ್ರತಿ ವಾರ್ಡುಗಳಲ್ಲಿ ಸರದಿ ಪ್ರಕಾರ ನೇಮಿಸಿ ಕಾರ್ಯ ನಿರ್ವಹಣೆ ಮಾಡಿ  ವಾರ್ಡ್ ಸದಸ್ಯರಿಂದ ಸಹಿ ಪಡೆದು ಬರುವಂತೆ ಸೂಚಿಸಲಾಗಿದೆ ಎಂದರು.

ಜೊತೆಗೆ ಪುರಸಭೆ ವ್ಯಾಪ್ತಿಯಲ್ಲಿರುವ 21 ಕೊಳವೆ ಬಾವಿಗಳ ಪೈಕಿ 5 ಕೊಳವೆ ಬಾವಿಗಳಲ್ಲಿ ಸಂಪೂರ್ಣವಾಗಿ ನೀರು ಬತ್ತಿ ಹೋಗಿದ್ದು ಇದರಿಂದ ಜನರಿಗೆ ಬಹಳಷ್ಟು ತೊಂದರೆ ಎದುರಾಗಿತ್ತು.

ಹೊಸದಾಗಿ ಪುರಸಭೆಗೆ ಸೇರ್ಪಡೆಯಾಗಿರುವ ಅಬ್ಬೂರು, ರಾಜಾಪುರ, ಮೆಲ್ಲಹಳ್ಳಿ, ಹರವೆ ಮಲ್ಲರಾಜಪಟ್ಟಣ, ಎಸ್.ಎಲ್.ವಿ. ಬಡಾವಣೆ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೇಳತೀರದಾಗಿತ್ತು.

ಕಳೆದ 20 ವರ್ಷಗಳ ಹಿಂದೆ ಕಾವೇರಿ ನದಿಯಿಂದ ಪಟ್ಟಣಕ್ಕೆ ತರಲಾಗಿರುವ ನೀರು ಮುಂದಿನ 2040 ನೇ ಸಾಲಿನವರೆಗೆ ಎದುರಾಗಬಹುದಾದ ನೀರಿನ ಅಗತ್ಯ ಪೂರೈಸುವ ಸಾಮರ್ಥ್ಯದ ಯೋಜನೆಯಾಗಿದೆ. ಆದರೆ, ನಿರ್ವಹಣೆ ಕೊರತೆಯಿಂದ ನೀರು ಸರಬರಾಜಾಗದೆ ತೊಂದರೆ ಅನುಭವಿಸುತ್ತಿದ್ದೆವು.

ಕುಡಿಯುವ ನೀರಿಗಾಗಿ ಸರ್ಕಾರ ನೀಡಿರುವ ಆದ್ಯತೆ ಮತ್ತು ಶಾಸಕರ ಸಹಕಾರದಿಂದ ಶುದ್ಧ ಕುಡಿಯುವ ನೀರು ಸೇರಿದಂತೆ ಎಲ್ಲ ರೀತಿಯಲ್ಲೂ ಕುಡಿಯುವ ನೀರಿಗೆ ತೊಂದರೆಯಾಗದಂತೆ ಹೊಸ ಕೊಳವೆ ಬಾವಿಗಳನ್ನು ತೋಡಿಸಿ ಅಗತ್ಯ ಕ್ರಮ ಕೈಗೊಂಡು ಸೌಲಭ್ಯ ಒದಗಿಸಲಾಗಿದೆ ಎಂದು ತಿಳಿಸಿದರು.

ಬರ ಆವರಿಸಿರುವ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ. ಆದ್ದರಿಂದ ಸಾರ್ವಜನಿಕರು ನೀರು ಪೋಲಾಗದಂತೆ ಹೆಚ್ಚು ನಿಗಾ ವಹಿಸಬೇಕು ಎಂದು ವೇಣುಗೋಪಾಲ್ ಮನವಿ ಮಾಡಿಕೊಂಡರು.

ಕೆ.ವೆಂಕಟೇಶ್ ಮಾರುಕಟ್ಟೆಯಲ್ಲಿ ವಾಣಿಜ್ಯ ಮಳಿಗೆಗಳು ಹಾಗೂ ಪುರಸಭಾ ಕಛೇರಿ ಕಟ್ಟಡ ನಿರ್ಮಾಣಕ್ಕೆ ತಲಾ 30 ಲಕ್ಷ ರೂ.ಗಳಿಗೆ ಕ್ರಿಯಾಯೋಜನೆಯಾಗಿದ್ದು ಸರ್ಕಾರಿ ಜೂನಿಯರ್‌ ಕಾಲೇಜು ಆವರಣದಲ್ಲಿ 2೦ ಲಕ್ಷ ರೂ. ವೆಚ್ಚದ ಬಯಲು ರಂಗಮಂದಿರ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ.

ಪಟ್ಟಣದ 3 ಕಡೆಯಲ್ಲಿ ಸ್ವಾಗತ ಕಮಾನು ನಾಮಫಲಕಕ್ಕೆ 30 ಲಕ್ಷ ರೂ.ಗಳನ್ನು ಕಾದಿರಿಸಲಾಗಿದ್ದು ಸರ್ಕಾರವು ಪ್ರಗತಿಗಾಗಿ ವಿಶೇಷ ಅನುದಾನ ನೀಡಿದೆ. ಜಿಲ್ಲಾಧಿಕಾರಿಗಳು ಈ ಕುರಿತು ಕ್ರಮ ವಹಿಸಲಿದ್ದಾರೆ ಎಂದು ತಿಳಿಸಿದರು.

ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಮನೆ ನಿರ್ಮಿಸಿಕೊಳ್ಳಲು 300 ಜನರಿಗೆ ಅವಕಾಶವಿದ್ದು ಕೇವಲ 237 ಅರ್ಜಿಗಳು ಮಾತ್ರ ಬಂದಿವೆ. ಅದರಲ್ಲೂ ಎಸ್.ಸಿ. ಮತ್ತು ಎಸ್.ಟಿ. ಜನಾಂಗದ ಅರ್ಜಿಗಳು ಇನ್ನೂ 63 ಬೇಕಾಗಿವೆ. ಆದ್ದರಿಂದ ಜ.15 ರ ಒಳಗಾಗಿ ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.

ಸಂತೇಮಾಳದಲ್ಲಿ ನೂತನವಾಗಿ ನಿರ್ಮಿಸಿರುವ ವಾಣಿಜ್ಯ ಮಳಿಗೆಗಳ ಬಾಡಿಗೆ ಹರಾಜು ಪ್ರಕ್ರಿಯೆ ಸದ್ಯದಲ್ಲೇ ನಿಯಮಾನುಸಾರ ನಡೆಯಲಿದ್ದು, ಶೌಚಾಲಯ ನಿರ್ಮಾಣಕ್ಕೆ 5 ಸಾವಿರ ರೂ. ಸಹಾಯಧನವಾಗಿ ಪುರಸಭೆಯಿಂದ ನೀಡಲಾಗುವುದು.ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ತಿಳಿಸಿದರು.

ಹೆಚ್ಚಿನ ವಿವರಕ್ಕೆ 9743999914 ಸಂಖ್ಯೆಯನ್ನು ಸಂಪರ್ಕಿಸಬೇಕೆಂದು ಕೋರಿದರು. ಈ ಸಂದರ್ಭದಲ್ಲಿ ಸದಸ್ಯ ಅಮ್ಜದ್ ಷರೀಫ್ ಹಾಜರಿದ್ದರು.

Leave a Reply

comments

Related Articles

error: