ಪ್ರಮುಖ ಸುದ್ದಿ

30 ಸಾವಿರ ಕೋಟಿ ರೂ. ಪರಿಹಾರ ಘೋಷಣೆಗೆ ಸಿಎನ್‍ಸಿ ಆಗ್ರಹ

ರಾಜ್ಯ(ಮಡಿಕೇರಿ) ಆ.22 :-  ಕೊಡಗಿನ ಉತ್ತರ ಮತ್ತು ವಾಯುವ್ಯ  ಭಾಗದಲ್ಲಿ ಸಂಭವಿಸಿರುವ ಭೂ ಕುಸಿತಕ್ಕೆ ಹಾರಂಗಿ ಜಲಾಶಯವೇ ಮೂಲ ಕಾರಣ ಎಂದು ಆರೋಪಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‍ಸಿ) ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ, ನಿರಾಶ್ರಿತರಿಗೆ ಶಾಶ್ವತ ಪುನರ್ವಸತಿ ಮತ್ತು ಕೃಷಿ ಭೂಮಿಯನ್ನು ಕಲ್ಪಿಸಲು 30 ಸಾವಿರ ಕೋಟಿ ರೂ. ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾರಂಗಿ ಜಲಾಶಯವನ್ನು ಸಂಪೂರ್ಣವಾಗಿ ತೆರವು ಮಾಡಬೇಕು ಎಂದು ಒತ್ತಾಯಿಸಿದರು. ಭೂಗರ್ಭ ಇಲಾಖೆಯ ವಿಶ್ಲೇಷಣೆಯಂತೆ ಅಣೆಕಟ್ಟೆಗಳಿಂದ ನೆಲಮಟ್ಟದಲ್ಲಿ 120 ಕಿ.ಮೀ. ಅಂತರ ಹಾಗೂ ಅಂತರಿಕ್ಷ ಮಟ್ಟದಲ್ಲಿ 60 ಕಿ.ಮೀ. ಅಂತರದ ವ್ಯಾಪ್ತಿ ಆಪತ್ತು ಸೃಷ್ಟಿಯ ಪ್ರದೇಶವಾಗಿದೆ. ಅದೇ ರೀತಿ ಹಾರಂಗಿ ಅಣೆಕಟ್ಟೆಯಿಂದ ಮಡಿಕೇರಿವರೆಗೆ ಅಂತರಿಕ್ಷ ಮಟ್ಟದ ಅಂತರ 15 ಕಿ.ಮೀ ಹಾಗೂ ನೆಲ ಮಟ್ಟದ ಅಂತರ 30 ಕಿ.ಮೀ.ಗಳಾಗಿವೆ. ಅಲ್ಲದೆ ಹಾರಂಗಿ ಅಣೆಕಟ್ಟೆಯಲ್ಲಿ ವರ್ಷವಿಡೀ ನೀರು ಶೇಖರಿಸಿಡುವುದರಿಂದ ಹಿನ್ನೀರು ಭೂಮಿಯಡಿಯಲ್ಲಿ ಜಲಾನಯನ ಪ್ರದೇಶವಾದ ಗಾಳಿಬೀಡು ಸುತ್ತಮುತ್ತಲ ಪ್ರದೇಶದವರೆಗೂ ವ್ಯಾಪಿಸಿ ಮಣ್ಣು ಸಡಿಲಗೊಳ್ಳುತ್ತಿದೆ. ಇದೇ ಕಾರಣದಿಂದ ಹಟ್ಟಿಹೊಳೆ, ಮಕ್ಕಂದೂರು, ತಂತಿಪಾಲ, ಕಾಲೂರು, ದೇವಸ್ತೂರು, 2ನೇ ಮೊಣ್ಣಂಗೇರಿ, ಜೋಡುಪಾಲದವರೆಗಿನ ಬೆಟ್ಟ ಪ್ರದೇಶಗಳು ಕುಸಿತಗೊಂಡಿವೆ ಎಂದು ವಿಶ್ಲೇಷಿಸಿದರು.

ಹಾರಂಗಿ ಜಲಾಶಯದ ಶೇಖರಣಾ ಸಾಮಥ್ರ್ಯ 8.5 ಟಿ.ಎಂ.ಸಿ ಆಗಿದ್ದು, ಈಗಾಗಲೇ ಅಣೆಕಟ್ಟೆಯಲ್ಲಿ 7.77ಟಿಎಂಸಿ ನೀರು ಶೇಖರಣೆಗೊಂಡಿದೆ. ಇದಕ್ಕೆ ಬರುವ ನದಿ ತೊರೆಗಳ ಜಲನಾಳಗಳು ಸೀಳಿ ಹೋಗಿ ಅದರಿಂದ ಬಸಿದು ಬರುವ ಒಂದು ರೀತಿಯ ಕಂದು ಬಣ್ಣದ ಲವಣ ಪ್ರಸಕ್ತ ಅಣೆಕಟ್ಟೆಯ ಕ್ರೆಸ್ಟ್‍ಗೇಟ್‍ಗಳ ಮೂಲಕ ಹೊರಬರುತ್ತಿರುವುದನ್ನು ನಾವು ಕಾಣಬಹುದಾಗಿದೆ. ಅತಿ ಹೆಚ್ಚು ಪ್ರಮಾಣದ  ಲವಣಾಂಶಯುಕ್ತ ಮಣ್ಣು ಜಲಾನಯನ ಪ್ರದೇಶದ ನದಿ ಪಾತ್ರಗಳನ್ನು ಸೀಳಿ ಬರುತ್ತಿರುವುದು ಭೂ ಕುಸಿತಕ್ಕೆ ಪ್ರಮುಖ ಕಾರಣ ಎಂದು ನಾಚಪ್ಪ ಅಭಿಪ್ರಾಯಪಟ್ಟರು.

ಕೊಡಗಿ ಭೂಕುಸಿತ 2017ರ ಡಿ.17ರಂದು ನಡೆದ ಚಿಲಿ ದೇಶದ ಭೂ ಕುಸಿತವನ್ನೂ ಮೀರಿಸುವಂತಿದ್ದು, ಈ ದುರಂತವನ್ನು ಅಂತರ ರಾಷ್ಟ್ರೀಯ ದುರಂತ ಮತ್ತು ರಾಷ್ಟ್ರೀಯ ಉತ್ಪಾತ ಎಂದು ಪರಿಗಣಿಸಿ, ವಿಶ್ವಸಂಸ್ಥೆ, ಭಾರತ ಸರಕಾರ ಹಾಗೂ ಕರ್ನಾಟಕ ಸರಕಾರಗಳು ಆಪತ್ತು ನಿರ್ವಹಣಾ ಕೆಲಸದಲ್ಲಿ ಭಾಗಿಯಾಗಬೇಕು. ಅಲ್ಲದೆ ಈ ಘಟನೆಯನ್ನು ಅಂತರರಾಷ್ಟ್ರೀಯ ದುರಂತ ಮತ್ತು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕೆಂದು ಒತ್ತಾಯಿಸಿದರು.

ಸರ್ವ ಋತುಗಳಲ್ಲೂ ಕಾವೇರಿ ನದಿಯ ಮೂಲಕ ನೀರುಣಿಸುವ ಕೊಡಗು ಜಿಲ್ಲೆಗೆ ಅಪ್ಪಳಿಸಿದ ದುರಂತಕ್ಕೆ ಶಾಶ್ವತ ಪರಿಹಾರ ನೀಡುವ ನಿಟ್ಟಿನಲ್ಲಿ ಎರಡು ರೀತಿಯ ಪ್ಯಾಕೇಜ್‍ಗಳನ್ನು ನೀಡಬೇಕು. ಪ್ರಥಮವಾಗಿ ಪ್ರತಿಯೊಬ್ಬ ವ್ಯಕ್ತಿ ತನ್ನ ಮೂಲ ನೆಲದಲ್ಲಿಯೇ ಸ್ವಾಭಿಮಾನದಿಂದ, ಸ್ವತಂತ್ರವಾಗಿ ಬದುಕಲು ಕನಿಷ್ಟ ತಲಾ 2 ಕೋಟಿ ರೂ.ಗಳನ್ನು ಒದಗಿಸಬೇಕು. ನಿರಾಶ್ರಿತರಾಗಿರುವ ಸುಮಾರು 15 ಸಾವಿರ ಮಂದಿಗೆ ಒಟ್ಟು 30 ಸಾವಿರ ಕೋಟಿ ರೂ.ಗಳನ್ನು ಕೇಂದ್ರ, ರಾಜ್ಯ ಮತ್ತು ವಿಶ್ವಸಂಸ್ಥೆಯ ಆಪತ್ತು ನಿರ್ವಹಣಾ ನಿಧಿಯಿಂದ ಒದಗಿಸಬೇಕು. ಒಂದು ಅಪರೂಪದ ನಾಗರಿಕತೆಯನ್ನೇ ಅಳಿಸಿ ಹಾಕಿದ ಹಾರಂಗಿ ಜಲಾಶಯವನ್ನು ನೆಲಮಟ್ಟದಿಂದಲೇ ಅಳಿಸಿ ಹಾಕಬೇಕು ಮತ್ತು ನಿರಾಶ್ರಿತರಿಗೆ ಶಾಶ್ವತವಾದ ಪುನರ್ವಸತಿ ಕಲ್ಪಿಸಬೇಕು ಎಂದು ನಾಚಪ್ಪ ಒತ್ತಾಯಿಸಿದರು.

ಪಶ್ಚಿಮಘಟ್ಟಗಳಲ್ಲಿನ ಅರಣ್ಯ ನಾಶದಿಂದ ಭೂ ಕುಸಿತ ಉಂಟಾಗಿದೆ ಎಂಬ ಪರಿಸರವಾದಿಗಳ ವಾದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಪ್ರಸಕ್ತ ಭೂ ಕುಸಿತ ಉಂಟಾಗಿರುವ ಗ್ರಾಮಗಳಲ್ಲಿರುವಷ್ಟು ನಿತ್ಯ ಹರಿದ್ವರ್ಣದ ಅರಣ್ಯ ಪ್ರದೇಶ ಇತರೆಡೆಗಳಲ್ಲಿ ಕಂಡು ಬರುವುದಿಲ್ಲ. ಅಲ್ಲದೆ ಈ ಭಾಗದಲ್ಲಿ ಗ್ರಾಮಸ್ಥರು ಅರಣ್ಯವನ್ನು ಅತ್ಯಂತ ಮುತುವರ್ಜಿಯಿಂದ ರಕ್ಷಿಸಿಕೊಂಡು ಬಂದಿದ್ದಾರೆ ಎಂದರಲ್ಲದೆ, ಮರ ಲೂಟಿಯ ಕಾರಣವನ್ನು ಮುಂದಿಡುತ್ತಾ ಇಡೀ ದುರಂತವನ್ನು ಪರಿಸರ ಅಸಮತೋಲನವೆಂದು ಪ್ರತಿಪಾದಿಸುತ್ತಿರುವ ಪರಿಸರವಾದಿಗಳು, ಈಗಾಗಲೇ ಇಲ್ಲಿ ನಡೆದಿರುವ ದುರಂತದ ಚಿತ್ರಣ ಮಾಡಿ ವಿದೇಶಗಳಿಗೆ ರವಾನಿಸಿ, ಪಶ್ಚಿಮ ಘಟ್ಟ ರಕ್ಷಣೆಯ ಹೆಸರಿನಲ್ಲಿ ಹಣ ಸಂಗ್ರಹಿಸುವ ದಂಧೆಗೆ ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಒಂದು ವೇಳೆ ಮರ ಲೂಟಿಯಿಂದಲೇ ಭೂಕುಸಿತ ಉಂಟಾಗಿರುವುದಾದಲ್ಲಿ, ಪಶ್ಚಿಮ ಘಟ್ಟದ ಚೇಲಾವರಮ ಬಿರುನಾಣಿ, ಕಕ್ಕಬ್ಬೆ, ಯವಕಪಾಡಿ, ನಾಲಡಿ, ಅಯ್ಯಂಗೇರಿಗಳಲ್ಲಿ ಲೂಟಿಯಾದ ಮರ ವಿಶ್ವ ದಾಖಲೆಯನ್ನು ಮುಟ್ಟುತ್ತದೆ. ಈ ಪ್ರದೇಶಗಳ ಮರ ಲೂಟಿಯ ವಿಚಾರ 1980-90ರ ದಶಕದಲ್ಲಿ ಪಾರ್ಲಿಮೆಂಟ್‍ನಲ್ಲೂ ಚರ್ಚೆಯಾಗಿತ್ತು. ಆದರೆ ಈ ಪ್ರದೇಶಗಳ ಸ್ಥಳ ಪರಿಶೀಲನೆ ಮಾಡಿದಾಗ ಅಲ್ಲಿನ ಒಂದು ಕಲ್ಲು ಕೂಡಾ ಅಲುಗಾಡದೆ ನಿಶ್ಚಲವಾಗಿ ನಿಂತಿವೆ. ಭಾರತದ  ಗರಿಷ್ಠ ಪ್ರಮಾಣದ ಚಿರಾಪುಂಜಿಯನ್ನು ಹಿಂದಿಕ್ಕಿ ಆ ಪ್ರದೇಶಗಳಲ್ಲಿ ಈ ಬಾರಿ 300 ಇಂಚುಗಳಿಗಿಂತಲೂ ಅಧಿಕ ಮಳೆಯಾಗಿದ್ದರೂ ಅಲ್ಲಿ ಭೂ ಕುಸಿತ ನಡೆದಿಲ್ಲ. ಇದನ್ನು ಗಮನಿಸಿದರೆ ಮಡಿಕೇರಿ ಸುತ್ತಮುತ್ತ ನಡೆದ ಭೂ ಕುಸಿತಕ್ಕೆ ಹಾರಂಗಿ ಜಲಾಶಯವೇ ಮೂಲ ಕಾರಣ ಎಂಬುದರಲ್ಲಿ ಸಂಶಯವೇ ಇಲ್ಲ ಎಂದು ನಾಚಪ್ಪ ಪ್ರತಿಪಾದಿಸಿದರು.

ಸಂತ್ರಸ್ತರಾದ ಚನ್ನಪಂಡ ಮುತ್ತಣ್ಣ ಹಾಗೂ ಎ.ಟಿ.ಮಾದಪ್ಪ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದು, ಸಿಎನ್‍ಸಿಯ ವಾದವನ್ನು ಒಪ್ಪಿಕೊಂಡರು. ಅಲ್ಲದೆ ಪ್ರಕೃತಿ ವಿಕೋಪದಿಂದಾದ ಹಾನಿಯ ಬಗ್ಗೆ ವಿವರಿಸಿದರು. ಸಂತ್ರಸ್ತರಿಗಾಗಿ ಬಂದಿರುವ ಸಾಮಾಗ್ರಿಗಳು ಪರರ ಪಾಲಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಪುಲ್ಲೇರ ಕಾಳಪ್ಪ, ಕಾಟುಮಣಿಯಂಡ ಉಮೇಶ್ ಹಾಗೂ ಕಿರಿಯಮಾಡ ಶರೀನ್ ಉಪಸ್ಥಿತರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: