ಪ್ರಮುಖ ಸುದ್ದಿ

ಕೊಡಗನ್ನು ಅತಿವೃಷ್ಟಿ ಪೀಡಿತ ಜಿಲ್ಲೆ ಎಂದು ಘೋಷಿಸಿ : ಶಾಸಕ ಕೆ.ಜಿ.ಬೋಪಯ್ಯ ಆಗ್ರಹ

ರಾಜ್ಯ(ಮಡಿಕೇರಿ) ಆ.22 :- ಕೊಡಗು ಜಿಲ್ಲೆಯಲ್ಲಿ ಹಿಂದೆಂದೂ ಕಂಡು ಕೇಳರಿಯದ ಪ್ರಾಕೃತಿಕ ವಿಕೋಪ ಸಂಭವಿಸಿರುವುದರಿಂದ ಸರಕಾರ ಕೂಡಲೇ ಕೊಡಗನ್ನು ಅತಿವೃಷ್ಟಿ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು ಎಂದು ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಆಗ್ರಹಿಸಿದ್ದಾರೆ.

ವಿವಿಧೆಡೆಗಳಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಗಳಿಗೆ ಖುದ್ದು ಭೇಟಿ ನೀಡಿ ಸಂತ್ರಸ್ತರ ಅಳಲು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಜಿಲ್ಲೆ ಎಂದು ಘೋಷಿಸುವುದರೊಂದಿಗೆ ನಿರಾಶ್ರಿತರಿಗೆ ಅಗತ್ಯ ಪರಿಹಾರ ಕಾರ್ಯಗಳನ್ನು ಕೂಡಲೇ ಕೈಗೆತ್ತಿಕೊಳ್ಳಬೇಕು. ಜಿಲ್ಲೆಯಲ್ಲಿ ಮನೆ, ಜಮೀನು, ಸ್ಥಿರ ಮತ್ತು ಚರಾಸ್ತಿಗಳನ್ನು ಕಳೆದುಕೊಂಡು ಸಂತ್ರಸ್ತರಾಗಿರುವ ಕುಟುಂಬಗಳ ಸಮಗ್ರ ಮಾಹಿತಿಯನ್ನು ಜಿಲ್ಲಾಡಳಿತ ಕೂಡಲೇ ಕಲೆ ಹಾಕಿ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.

ಜಿಲ್ಲಾಡಳಿತ ಸಲ್ಲಿಸುವ ವರದಿಯನ್ನು ರಾಜ್ಯ ಸರಕಾರ ಕೇಂದ್ರಕ್ಕೂ ರವಾನಿಸುವ ಮೂಲಕ ಕೇಂದ್ರದ ನೆರವಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದೂ ಬೋಪಯ್ಯ ಆಗ್ರಹಿಸಿದರು.

 ಸಾಮಾಗ್ರಿ ದುರುಪಯೋಗ ತಡೆಗಟ್ಟಿ

ನೊಂದವರ ನೆರವಿಗಾಗಿ ಬರುತ್ತಿರುವ ಪರಿಹಾರ ಸಾಮಾಗ್ರಿಗಳು ದುರುಪಯೋಗವಾಗುತ್ತಿರುವ ಬಗ್ಗೆಯೂ ಪ್ರಸ್ತಾಪಿಸಿದ ಬೋಪಯ್ಯ, ಇದನ್ನು ತಡೆಗಟ್ಟಲು ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕರು ಹಾಗೂ ಹೊರ ಜಿಲ್ಲೆಯ ಸಂಘಸಂಸ್ಥೆಗಳಿಂದ ವ್ಯಾಪಕವಾಗಿ ಹರಿದು ಬರುತ್ತಿರುವ ನೆರವು ಸದ್ಬಳಕೆಯಾಗದೆ ಭಾರೀ ದುರುಪಯೋಗವಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಬೆಂಗಳೂರು, ಮೈಸೂರಿನಂತಹ ಮಹಾನಗರ ಸೇರಿದಂತೆ ಎಲ್ಲೆಡೆಯಿಂದ ಹರಿದು ಬರುತ್ತಿರುವ  ಸಹಾಯವನ್ನು ಅಲ್ಲಲ್ಲಿ  ತಡೆಯುತ್ತಿರುವ ಅವಕಾಶವಾದಿಗಳು, ಕೆಲವು ವಾಹನಗಳಿಗೆ ಸಂತ್ರಸ್ತರ ನೆರವಿನ ಹೆಸರಿನಲ್ಲಿ ಬ್ಯಾನರ್, ಭಿತ್ತಿಪತ್ರ ಅಳವಡಿಸಿಕೊಂಡು  ವ್ಯವಸ್ಥಿತವಾಗಿ ಆಹಾರ ವಸ್ತುಗಳು, ವಸ್ತ್ರಗಳು, ಇತರ ಸಾಮಾಗ್ರಿಗಳನ್ನು ದೋಚುತ್ತಿದ್ದಾರೆ ಎಂದು ಬೋಪಯ್ಯ ದೂರಿದರು.

ಈ ಬಗ್ಗೆ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದ್ದು,  ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಗ್ರಾಮೀಣ ಜನತೆಗೆ ಇನ್ನೂ ನೆರವು ಲಭಿಸಿಲ್ಲ ಎಂದು ವಿಷಾದಿಸಿದರು.

ಮಡಿಕೇರಿ ಹಾಗೂ ಸೋಮವಾರಪೇಟೆ ತಾಲೂಕಿನ ಕೆಲವು ಗ್ರಾಮಸ್ಥರು ತೀವ್ರ ತೊಂದರೆಗೆ ಸಿಲುಕಿ ಕಣ್ಣೀರಿನ ಬದುಕು ಸಾಗಿಸುತ್ತಿದ್ದರೂ, ಸ್ವಾಭಿಮಾನದಿಂದ ಸಂಸತ್ರಸ್ತರ ಕೇಂದ್ರಗಳಿಗೂ ಬರದೆ ಬಂಧು ಬಳಗದ ಆಸರೆಯಲ್ಲಿದ್ದಾರೆ. ಅಂತಹವರನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ನೆರವು ಒದಗಿಸುವ ಕೆಲಸವಾಗಬೇಕು ಎಂದು ಬೋಪಯ್ಯ ಸಲಹೆ ಮಾಡಿದರು.

ನಾಡಿನ ಜನತೆ ನೊಂದವರ ಕಣ್ಣೀರು ಒರೆಸುವಲ್ಲಿ ಏಕತೆಯಿಂದ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತರಾಗುವಂತೆಯೂ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಉಸ್ತುವಾರಿ ಸಚಿವರ ಭೇಟಿ

ಹೆಬ್ಬೆಟ್ಟಗೇರಿ ಗ್ರಾಮ ಸೇರಿದಂತೆ ಗುಡ್ಡ ಕುಸಿತದಿಂದ ಸಾಕಷ್ಟು ಹಾನಿಯಾಗಿರುವ ಅನೇಕ ಸ್ಥಳಗಳಿಗೆ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ರವರೊಂದಿಗೆ ಭೇಟಿ ನೀಡಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹಾಜರಿದ್ದರು.   (ಕೆಸಿಐ,ಎಸ್.ಎಚ್)

Leave a Reply

comments

Related Articles

error: