ಪ್ರಮುಖ ಸುದ್ದಿ

ಭೂಕುಸಿತ ಪ್ರದೇಶದಲ್ಲಿ ಮೂರು ಮೃತದೇಹ ಪತ್ತೆ

ರಾಜ್ಯ(ಮಡಿಕೇರಿ) ಆ.22 :- ಕಳೆದ ಒಂದು ವಾರಗಳ ಮಹಾಮಳೆಯಿಂದ ಉಂಟಾದ ಕೆಸರಿನಾರ್ಭಟದಿಂದ ಮಡಿಕೇರಿ ತಾಲೂಕು ವ್ಯಾಪ್ತಿಯ 10ಕ್ಕೂ ಹೆಚ್ಚು ಗ್ರಾಮಗಳು ನಾಮಾವಶೇಷಗೊಂಡಿದ್ದು, ಈ ಭಾಗದಲ್ಲಿ ಸ್ಮಶಾನ ಮೌನ ಆವರಿಸಿದೆ. ಎರಡು ದಿನಗಳಿಂದ ಮಳೆಯ ತೀವ್ರತೆ ಕಡಿಮೆಯಾಗಿರುವುದರಿಂದ ಭೂಕುಸಿತ ಉಂಟಾದ ಗ್ರಾಮಗಳಲ್ಲಿ ಶೋಧ ಕಾರ್ಯ ಮುಂದುವರಿದಿದೆ. ಎನ್.ಡಿ.ಆರ್.ಎಫ್. ಮತ್ತು ಡೋಂಗ್ರಾ ರೆಜಿಮೆಂಟನ್   ಸಿಬ್ಬಂದಿಗಳೊಂದಿಗೆ ಸ್ಥಳೀಯರು ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

ಮಕ್ಕಂದೂರುವಿನ ಮೇಘಾತ್ತಾಳು ಮತ್ತು ಹೆಮ್ಮೆತ್ತಾಳು ಗ್ರಾಮ ಮತ್ತು ಕಾಟಕೇರಿ ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆಸಿ ಒಟ್ಟು 3 ಮೃತದೇಹಗಳನ್ನು ಹೊರತೆಗೆಯಲಾಯಿತು. ಮೇಘಾತ್ತಾಳುವಿನಲ್ಲಿ ಕಳೆದ 8 ದಿನಗಳ ಹಿಂದೆ ಭಾರಿ ಮಳೆಗೆ ಬೆಟ್ಟ ಶ್ರೇಣಿ ಕುಸಿದು ಮನೆ ಮೇಲೆ ಬಿದ್ದ ಪರಿಣಾಮ ಮನೆಯಲ್ಲಿ ಮಲಗಿದ್ದ ತಾಯಿ ಮಗ ಭೂ ಸಮಾಧಿಯಾಗಿದ್ದರು. 15ನೇ ಡೋಂಗ್ರಾ ರೆಜಿಮೆಂಟನ್  ಮೇಜರ್ ವಿಶ್ವಾಸ್ ಮತ್ತು ಮಕ್ಕಂದೂರು ನಿವಾಸಿ ಮೇಜರ್ ಬಿದ್ದಪ್ಪ ಅವರ ನೇತೃತ್ವದಲ್ಲಿ 15 ಮಂದಿ ಸೇನಾ ಸಿಬ್ಬಂದಿಗಳು ಮತ್ತು ಸ್ಥಳಿಯ ಯುವಕರ ತಂಡ ಬೆಳಿಗ್ಗೆಯಿಂದಲೇ ಬಿರುಸಿನ ಶೋಧಾ ಕಾರ್ಯ ನಡೆಸಿದರು.

ಸ್ಥಳೀಯರಾಧ ಮೇಜರ್ ಬಿದ್ದಪ್ಪ ಅವರ ಅನುಭವವನ್ನು ಆಧರಿಸಿ 15 ಡೋಂಗ್ರಾ ರೆಜಿಮೆಂಟನ್ ಯೋಧರು ಅಂದಾಜು 5 ಎಕರೆ ಪ್ರದೇಶದಲ್ಲಿ ಮೃತದೇಹಗಳಿಗೆ ಶೋಧ ನಡೆಸಿದರು. ಭೂಕುಸಿತ ಸ್ಥಳದಿಂದ 700 ಅಡಿ ದೂರದಲ್ಲಿ ಕೆಸರಿನಡಿ ಸಿಲುಕಿದ್ದ ಚಂದ್ರಾವತಿ(60) ಹಾಗೂ ಉಮೇಶ್ ರೈ (32) ಅವರ ಮೃತದೇಹವನ್ನು ಹೊರತೆಗೆಯುವಲ್ಲಿ ಸೇನಾ ತಂಡ ಯಶಸ್ವಿಯಾಯಿತು.  ಸೇನಾ ಯೋಧರು ಹಗ್ಗದ ಸಹಾಯದಿಂದ ಆಂದಾಜು 3 ಸಾವಿರ ಅಡಿ ಆಳದ ಕಂದಕದಿಂದ ತಾಯಿ-ಮಗನ ಮೃತದೇಹವನ್ನು ಮೇಲೆ ತರುವ ಮೂಲಕ ಸಾಹಸ ಮೆರೆದರು.

ಕಾಟಕೇರಿ ಬಳಿ ಭೂಕುಸಿತದಿಂದ ಸಾವನ್ನಪ್ಪಿದ ಪವನ್ (34) ಎಂಬಾತನ ಮೃತದೇಹವನ್ನು ಎನ್.ಡಿ.ಆರ್.ಆಫ್. ತಂಡ ಮತ್ತು ಕಾವೇರಿ ಸೇನೆಯ ಯುವಕರು 100 ಅಡಿ ದೂರದಲ್ಲಿ 20ಅಡಿ ಆಳದಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾದರು. ಶೋಧ ಕಾರ್ಯಾಚರಣೆಯ ಸಂದರ್ಭ ಪತ್ತೆಯಾದ ಒಟ್ಟು 3 ಮೃತದೇಹಗಳನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಯಿತು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: