ಮೈಸೂರು

ಮರು ಟೆಂಡರ್ ಕರೆದು ಕಾಮಗಾರಿ ಪೂರ್ಣಗೊಳಿಸಲು ಮೇಯರ್ ಸೂಚನೆ

ಸ್ಥಗಿತಗೊಂಡಿರುವ ಮೈಸೂರು ಪುರಭವನ ಆವರಣದ ಬಹುಮಹಡಿ ಪಾರ್ಕಿಂಗ್ ಲಾಟ್, ಬಯಲು ರಂಗಮಂದಿರ ಹಾಗೂ ಸಾರ್ವಜನಿಕ ಸಮಾರಂಭ ವೇದಿಕೆ ಕಾಮಗಾರಿ ಪೂರ್ಣಗೊಳಿಸಲು ತಕ್ಷಣವೇ ಮರು ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಮೇಯರ್ ಎಂ.ಜೆ. ರವಿಕುಮಾರ್ ಸೂಚನೆ ನೀಡಿದರು.

ಮಾಜಿ ಮೇಯರ್‍ಗಳು ಹಾಗೂ ಅಧಿಕಾರಿಗಳೊಂದಿಗೆ ಪುರಭವನಕ್ಕೆ ಭೇಟಿ ನೀಡಿದ ಅವರು ಸ್ಥಗಿತಗೊಂಡಿದ್ದ ಕಾಮಗಾರಿಗಳನ್ನು ಪರಿಶೀಲಿಸಿದರು. ಮೊದಲಿಗೆ ರಂಗಮಂದಿರ, ಬಹುಮಹಡಿ ವಾಹನ ನಿಲುಗಡೆ ಸ್ಥಳವನ್ನು ಪರಿಶೀಲಿಸಿ, ಬಳಿಕ ಸಾರ್ವಜನಿಕರಿಗಾಗಿ ನಿರ್ಮಿಸಲಾಗುತ್ತಿರುವ ವೇದಿಕೆಯನ್ನು ವೀಕ್ಷಿಸಿದರು. ಗುತ್ತಿಗೆದಾರನ ಸಮಸ್ಯೆಯಿಂದಾಗಿ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಮರು ಟೆಂಡರ್ ಕರೆದು ಶೀಘ್ರ ಪೂರ್ಣಗೊಳಿಸುವುದಾಗಿ ಸುದ್ದಿಗಾರರಿಗೆ ತಿಳಿಸಿದರು.

ವಾಹನ ನಿಲುಗಡೆ ಕಟ್ಟಡ ನಿರ್ಮಾಣ ಹಾಗೂ ಹೊರ ಆವರಣದ ಅಭಿವೃದ್ಧಿಗೆ 1766 ಲಕ್ಷ ರೂ. ಅಂದಾಜಿಸಲಾಗಿತ್ತು. 1828 ಲಕ್ಷ ರೂ.ಗಳಿಗೆ 12 ತಿಂಗಳ ಅವಧಿಗೆ ಟೆಂಡರ್ ನೀಡಲಾಗಿತ್ತು. ಒಪ್ಪಂದದಂತೆ 2012ರ ಏಪ್ರಿಲ್‍ನಲ್ಲಿಯೇ ಕಾಮಗಾರಿ ಪೂರ್ಣಗೊಳ್ಳಬೇಕಿತ್ತು. ಆದರೆ, ಗುತ್ತಿಗೆದಾರ ಛಾಬ್ರಾಸ್ ಅಸೋಸಿಯೇಟ್ಸ್ ಶೇ.60ರಷ್ಟು ಮಾತ್ರ ಕಾಮಗಾರಿ ಕೈಗೊಂಡು ಸ್ಥಗಿತಗೊಳಿಸಿದ್ದರು. ಪುರ ಭವನ ಒಳಾಂಗಣ ಅಭಿವೃದ್ಧಿಗೂ ಅದೇ ಗುತ್ತಿಗೆದಾರನಿಗೆ 282 ಲಕ್ಷ ರೂ.ಗಳಿಗೆ 2011ರ ಅಂತ್ಯದಲ್ಲಿ 6 ತಿಂಗಳಲ್ಲಿ ಪೂರ್ಣಗೊಳಿಸುವಂತೆ ಕಾಮಗಾರಿ ವಹಿಸಲಾಗಿತ್ತು. ಬಳಿಕ 2014ರ ಮಾರ್ಚ್‍ವರೆಗೂ ಕಾಮಗಾರಿ ಕಾಲಾವಧಿ ವಿಸ್ತರಿಸಲಾಗಿತ್ತು. ಆದರೆ, ಶೇ.60ರಷ್ಟು ಮಾತ್ರ ಕಾಮಗಾರಿ ಕೈಗೊಂಡ ಗುತ್ತಿಗೆದಾರ ಕಾಮಗಾರಿ ಸ್ಥಗಿತಗೊಳಿಸಿದ್ದರು.

ಗುತ್ತಿಗೆದಾರನನ್ನು ಕಪ್ಪುಪಟ್ಟಿಗೆ ಸೇರಿಸಿ, ಮರು ಟೆಂಡರ್ ಕರೆದು ಉಳಿದ ಕಾಮಗಾರಿಯನ್ನು ಶೀರ್ಘ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ ಎಂದು ಮೇಯರ್ ಹೇಳಿದರು. ಮಾಜಿ ಮೇಯರ್‍ಗಳಾದ ಸಂದೇಶ್ ಸ್ವಾಮಿ, ಅಯೂಬ್ ಖಾನ್, ಆರ್.ಲಿಂಗಪ್ಪ, ಸದಸ್ಯ ಜಗದೀಶ್ ಮತ್ತು ಇಂಜಿನಿಯರುಗಳು ಹಾಜರಿದ್ದರು.

Leave a Reply

comments

Related Articles

error: