ಪ್ರಮುಖ ಸುದ್ದಿ

ಸಮಗ್ರವಾದ ಶಿಕ್ಷಣದ ಕಲಿಕೆಯ ಜೊತೆ ಕ್ರೀಡೆಗೂ ಮಹತ್ವ ನೀಡಬೇಕು : ಕೆ.ಕಾಳೇಗೌಡ

ರಾಜ್ಯ(ಮಂಡ್ಯ)ಆ.23:- ಪೋಷಕರು ತಮ್ಮ ಮಕ್ಕಳನ್ನು ಕೇವಲ ಪಠ್ಯ ಕಲಿಕೆಗೆ, ಅಂಕ ಗಳಿಕೆಗೆ ಮಾತ್ರ ಒತ್ತು ನೀಡದೇ ಸಮಗ್ರವಾದ ಶಿಕ್ಷಣದ ಕಲಿಕೆಯ ಜೊತೆ ಕ್ರೀಡೆಗೂ ಮಹತ್ವ ನೀಡಬೇಕು ಎಂದು ಮಂಡ್ಯ ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ ತಿಳಿಸಿದರು.

ಕೆ.ಆರ್.ಪೇಟೆ ಪಟ್ಟಣದ ನಾಲ್ವಡಿ ಕೃಷ್ಣರಾಜ ಒಡೆಯರ್ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿ ಮಾತನಾಡಿದರು.

ಕ್ರೀಡೆಯಲ್ಲಿ ಸೋಲು ಗೆಲುವು ಸ್ವಾಭಾವಿಕವಾದ ಪ್ರಕ್ರಿಯೆಯಾಗಿದೆ. ಆದರೆ ಕ್ರೀಡಾಪಟುಗಳಾಗಬೇಕೆಂಬ ಛಲವಿರುವವರು ಸೋಲಿಗೆ ಹೆದರದೇ ಆತ್ಮವಿಶ್ವಾಸದಿಂದ ಅಭ್ಯಾಸ ಮಾಡಿ ಗೆಲುವನ್ನು ಸಾಧಿಸಿಕೊಳ್ಳಬೇಕು. ಸತತವಾದ ಪರಿಶ್ರಮದಿಂದ ಅಭ್ಯಾಸ ಮಾಡುವ ಮೂಲಕ ಶ್ರೇಷ್ಠ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು. ವಿದ್ಯಾರ್ಥಿಗಳು ವಿದ್ಯೆಗೆ ನೀಡುವಷ್ಟೇ ಮಹತ್ವ ಹಾಗೂ ಆದ್ಯತೆಯನ್ನು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ನೀಡುವ ಮೂಲಕ ತಮ್ಮ ವ್ಯಕ್ತಿತ್ವವನ್ನು ವಿಕಸನಗೊಳಿಸಿಕೊಳ್ಳಬೇಕು. ದೇಶವು ಇಂದು ಸಮರ್ಥವಾದ ಕ್ರೀಡಾಪಟುಗಳ ಕೊರತೆಯನ್ನು ಎದುರಿಸುತ್ತಿರುವುದರಿಂದ ಸತತವಾದ ಅಭ್ಯಾಸದಿಂದ ಗುರಿಸಾಧನೆಯ ಕಡೆಗೆ ಹೆಜ್ಜೆ ಹಾಕುವ ಮೂಲಕ ಶ್ರೇಷ್ಠ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದು ಮನವಿ ಮಾಡಿದ ಅವರು ಸರ್ಕಾರವು ಪ್ರತೀ ತಾಲೂಕಿಗೊಂದು ಕ್ರೀಡಾಂಗಣವನ್ನು ನಿರ್ಮಿಸಿ ಕ್ರೀಡಾ ಚಟುವಟಿಕೆಗಳಿಗೆ ಹೆಚ್ಚಿನ ಒತ್ತನ್ನು ನೀಡಬೇಕು ಈ ಮೂಲಕ ಕ್ರೀಡೆಯಲ್ಲಿ ಸಾಧನೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಟ್ಟಣದ ಬಾಲ ಏಸುದೇವಾಲಯದ ಫಾದರ್ ಆಂಥೋನಿರಾಜ್ ಕ್ರೀಡಾಕೂಟವನ್ನು ಉದ್ಘಾಟನೆ ಮಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ರಾಮದಾಸ್, ಪುರಸಭೆ ಸದಸ್ಯ ನಾಗರಾಜು, ಕರ್ನಾಟಕ ರಾಜ್ಯ ಬಡ್ತಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಮೇಶ್, ತಾಲೂಕು ದೈಹಿಕ ಶಿಕ್ಷಣ ನಿರ್ದೇಶಕ ಮೃತ್ಯುಂಜಯಸ್ವಾಮಿ, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: