ಪ್ರಮುಖ ಸುದ್ದಿ

ಡೆಹರಾಡೂನ್‌ನಲ್ಲಿ ಅ. 7 ಮತ್ತು 8 ರಂದು ಬೃಹತ್ ಹೂಡಿಕೆದಾರರ ಸಮಾವೇಶ : ತ್ರಿವೇಂದ್ರ ಸಿಂಗ್ ರಾವತ್

ರಾಜ್ಯ(ಬೆಂಗಳೂರು)ಆ.23:- ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಉತ್ತರಾಖಂಡ್ ರಾಜಧಾನಿ ಡೆಹರಾಡೂನ್‌ನಲ್ಲಿ ಅ. 7 ಮತ್ತು 8 ರಂದು ಬೃಹತ್ ಹೂಡಿಕೆದಾರರ ಸಮಾವೇಶ ನಡೆಯಲಿದೆ ಎಂದು ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಪ್ರಕಟಿಸಿದರು.

ಕರ್ನಾಟಕದ ಬಂಡವಾಳ ಹೂಡಿಕೆದಾರರನ್ನು ಉತ್ತರಾಖಂಡ್ ರಾಜ್ಯಕ್ಕೆ ಆಕರ್ಷಿಸುವ ಸಲುವಾಗಿ ನಗರದಲ್ಲಿ ರೋಡ್ ಶೋ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಹೂಡಿಕೆದಾರರ ಸಮಾವೇಶವನ್ನು ಪ್ರಧಾನಿ ನರೇಂದ್ರಮೋದಿ ಅವರು ಉದ್ಘಾಟಿಸುವರು ಎಂದು ತಿಳಿಸಿದರು.

ಆಹಾರ ಸಂಸ್ಕರಣೆ, ತೋಟಗಾರಿಕೆ, ಹೂವಿನ ಕೃಷಿ, ಸಸ್ಯ, ಪ್ರವಾಸೋದ್ಯಮ, ಆಯುಷ್, ವಿದ್ಯುತ್, ಜೈವಿಕ ಮತ್ತು ಮಾಹಿತಿ ತಂತ್ರಜ್ಞಾನ, ಔಷಧ ತಯಾರಿಕೆ, ಆಟೋ ಮೊಬೈಲ್ಸ್ ಸೇರಿದಂತೆ 12 ಪ್ರಮುಖ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆಗೆ ಉತ್ತರಾಖಂಡ್ ಸರ್ವರೀತಿಯಲ್ಲೂ ಸನ್ನದ್ಧವಾಗಿದೆ. ಈ ಕ್ಷೇತ್ರಗಳಲ್ಲಿ ಬಂಡವಾಳ ಹೂಡುವಂತೆ ರಾಜ್ಯದ ಹೂಡಿಕೆದಾರರಿಗೆ ಅವರು ಕರೆ ನೀಡಿದರು.

ಎಂಎಸ್‌ಎಂಇ, ಬೃಹತ್ ಉದ್ಯಮ ಮತ್ತು ಹೂಡಿಕೆ ನೀತಿ, ಚಿತ್ರೋದ್ಯಮ ನೀತಿ, ಸಂವಹನ ತಂತ್ರಜ್ಞಾನ ಮತ್ತು ಎಲೆಕ್ಟ್ರಾನಿಕ್ ನೀತಿಯಂತಹ ಹಲವಾರು ನೀತಿಗಳನ್ನು ಅನುಷ್ಠಾನಕ್ಕೆ ತರಲಾಗಿದ್ದು, ಬಂಡವಾಳ ಹೂಡಿಕೆಗೆ ಪೂರಕವಾಗಿ ಏಕಗವಾಕ್ಷಿ ಪರವಾನಗಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಉತ್ತರಾಖಂಡ್ ರಾಜ್ಯವು ನೈಸರ್ಗಿಕ, ಮಾನವ ಸಂಪನ್ಮೂಲ ಹೊಂದಿದ್ದು, ಬಂಡವಾಳ ಹೂಡಿಕೆಗೆ ಎಲ್ಲ ರೀತಿಯಲ್ಲೂ ಸೂಕ್ತವಾಗಿದೆ ಎಂದು ಹೇಳಿದರು.

ಸಮಾರಂಭದಲ್ಲಿ ಉತ್ತರಾಖಂಡ್ ಸರ್ಕಾರದ ಪ್ರಧಾನ ಕಾರ್ಯದರ್ಶಿ ಉತ್ಪಲ್ ಕುಮಾರ್ ಸಿಂಗ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಮನೀಷಾ ಪನ್ವಾರ್, ಸಿಐಐ ರಾಜ್ಯಶಾಖೆಯ ಅಧ್ಯಕ್ಷ ಡಾ. ಎನ್. ಮುತ್ತುಕುಮಾರ್ ಹಾಗೂ ಉತ್ತರಖಂಡ ರಾಜ್ಯದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: