ಮೈಸೂರು

ಕರ್ತವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿ ವರ್ತನೆ ಆರೋಪ: ಇಬ್ಬರು ಶಿಕ್ಷಕಿಯರು ಅಮಾನತು

ಕರ್ತವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿ ವರ್ತನೆ ಆರೋಪದಡಿ ಕೆ.ಜಿ.ಕೊಪ್ಪಲಿನ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಎನ್.ಸಿ. ಹೇಮಲತಾ ಹಾಗೂ ದೈಹಿಕ ಶಿಕ್ಷಣ ಶಿಕ್ಷಕಿ ಮ್ಯಾಗ್ಡಲಿನ್ ಅವರನ್ನು ಅಮಾನತುಗೊಳಿಸಲಾಗಿದೆ.

ಮೈಸೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎನ್. ಶಿವರಾಮೇಗೌಡ ಅಮಾನತು ಆದೇಶ ಹೊರಡಿಸಿದ್ದಾರೆ.

ಶೈಕ್ಷಣಿಕ ಚಟುವಟಿಕೆಗಳನ್ನು ಕ್ರಮಬದ್ಧವಾಗಿ ನಡೆಸಿಲ್ಲ. ಕಾಮಗಾರಿ ನೆಪದಲ್ಲಿ ಹಣ ದುರುಪಯೋಗಪಡಿಸಿಕೊಳ್ಳಲಾಗಿದೆ. ನಿಯಾಮಾನುಸಾರ ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ(ಎಸ್‍ಡಿಎಂಸಿ) ರಚಿಸಿಲ್ಲ ಎಂದು ಪೋಷಕರು ಮತ್ತು ಸಾರ್ವಜನಿಕರು ಹೇಮಲತಾ ವಿರುದ್ಧ ದೂರು ನೀಡಿದ್ದಾರೆ ಎಂದು ಆದೇಶದಲ್ಲಿ ಸೂಚಿಸಿದ್ದಾರೆ.

ಹೇಮಲತಾ ಹಾಗೂ ಮ್ಯಾಗ್ಡಲಿನ್ ಇವರಿಬ್ಬರು ಕ್ಷುಲ್ಲಕ ವಿಚಾರಗಳಿಗೆ ಜಗಳವಾಡಿಕೊಂಡು ಪರಸ್ಪರ ಅವಾಚ್ಯ ಪದ ಬಳಸಿ ಶಾಲೆಯ ವಾತಾವರಣ ಕಲುಷಿತಗೊಳಿಸಿದ್ದಾರೆ. ಇದರಿಂದ ಮಕ್ಕಳೂ ಕಲಿಕೆಯಲ್ಲಿ ಹಿಂದೆ ಬೀಳುವಂತಾಗಿದೆ ಎಂಬ ಆರೋಪಗಳಿಗೆ ಸಂಬಂಧಿಸಿದಂತೆ ವಿಚಾರಣೆ ಕಾಯ್ದಿರಿಸಿ ಈ ಶಿಸ್ತು ಕ್ರಮ ಕೈಗೊಳ್ಳಲಾಗಿದೆ. ಅಮಾನತು ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೆ ಕೇಂದ್ರ ಸ್ಥಾನದಿಂದ ಹೊರಗೆ ತೆರಳುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ.

Leave a Reply

comments

Related Articles

error: