ಕ್ರೀಡೆ

ಏಷ್ಯನ್ ಗೇಮ್ಸ್: ಶಾರ್ದುಲ್ ಗೆ ಬೆಳ್ಳಿ, ಅಂಕಿತಾಗೆ ಕಂಚು

ಜಕಾರ್ತ,(ಇಂಡೋನೇಷ್ಯಾ),ಆ.23-ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, ಕ್ರೀಡಾಕೂಟದ 5ನೇ ದಿನವಾದ ಇಂದು ಎರಡು ಪದಕಗಳನ್ನು ಜಯಿಸಿದೆ.

ಟೆನ್ನಿಸ್ ಮಹಿಳಾ ವಿಭಾಗದ ಸಿಂಗಲ್ಸ್ ನ ಸೆಮಿ ಫೈನಲ್ ನಲ್ಲಿ ಯುವ ಟೆನ್ನಿಸ್ ತಾರೆ ಅಂಕಿತಾ ರೈನಾ ಕಂಚಿನ ಪದಕ ಜಯಿಸಿದರು. ಗುರುವಾರ ನಡೆದ ಅಂತಿಮ-4 ಸುತ್ತಿನ ಪಂದ್ಯದಲ್ಲಿ ರೈನಾ ಅವರು ಚೀನಾದ ಶುಯಿ ಜಾಂಗ್ ವಿರುದ್ಧ 4-6, 6-7 ನೇರ ಸೆಟ್ಗಳಿಂದ ಸೋತು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಪುರುಷರ ಶೂಟಿಂಗ್ ವಿಭಾಗದ ಡಬಲ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಶೂಟರ್ ಶಾರ್ದುಲ್ ವಿಹಾನ್ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಭಾರತಕ್ಕೆ ಇದು ಶೂಟಿಂಗ್ನಲ್ಲಿ ಲಭಿಸಿರುವ 8ನೇ ಪದಕವಾಗಿದೆ.

ಉತ್ತರಪ್ರದೇಶದ ಮೀರತ್ 15 ಬಾಲಕ ಶಾರ್ದೂಲ್ ಫೈನಲ್ ಸುತ್ತಿನಲ್ಲಿ ಕೇವಲ ಒಂದು ಅಂಕದಿಂದ ಚಿನ್ನ ವಂಚಿತರಾಗಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಶಾರ್ದೂಲ್ 73 ಅಂಕ ಗಳಿಸಿದರೆ ಪ್ರತಿಸ್ಪರ್ಧಿ ಕೊರಿಯಾದ ಹಿಯುನ್ವೂ ಶಿನ್ 74 ಅಂಕ ಗಳಿಸಿ ಚಿನ್ನದ ಪದಕ ಜಯಿಸಿದರು. ಕತರ್ ಹಮದ್ ಅಲಿ ಕಂಚಿನ ಪದಕ್ಕೆ ತೃಪ್ತಿಪಟ್ಟರು.

ಇದೇ ವೇಳೆ ಪುರುಷರ ಡಬಲ್ಸ್ ವಿಭಾಗದಲ್ಲಿ ರೋಹನ್ ಬೋಪಣ್ಣ ಹಾಗೂ ದಿವಿಜ್ ಶರಣ್ ಫೈನಲ್ಗೆ ತಲುಪುವ ಮೂಲಕ ಪದಕವನ್ನು ದೃಢಪಡಿಸಿದ್ದಾರೆ.

ಬೋಪಣ್ಣಶರಣ್ ಜೋಡಿ ಜಪಾನ್ ಉಸುಗಿ ಹಾಗೂ ಶಿಮಾಬುಕುರೊ ವಿರುದ್ಧ ಸೆಮಿ ಫೈನಲ್ನಲ್ಲಿ 4-6, 6-3, 10-8 ಅಂತರದಿಂದ ಗೆಲುವು ಸಾಧಿಸಿ ಫೈನಲ್ ಸುತ್ತಿಗೆ ತೇರ್ಗಡೆಯಾಗಿದ್ದಾರೆ.

ಇದರೊಂದಿಗೆ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 17ಕ್ಕೆ ಏರಿಕೆಯಾಗಿದೆ. ಇದರಲ್ಲಿ ಐದು ಚಿನ್ನ, ಮೂರು ಬೆಳ್ಳಿ ಹಾಗೂ ಒಂಬತ್ತು ಕಂಚಿನ ಪದಕಗಳು ಸೇರಿವೆ. (ಎಂ.ಎನ್)

Leave a Reply

comments

Related Articles

error: