ಮೈಸೂರು

ಕಪಿಲಾ ಸೇತುವೆಗೆ ಯಾವುದೇ ಧಕ್ಕೆ ಉಂಟಾಗಿಲ್ಲ : ಹೆದ್ದಾರಿ ಮುಖ್ಯ ಇಂಜಿನಿಯರ್ ಗಣೇಶ್ ಸ್ಪಷ್ಟನೆ

ಮೈಸೂರು,ಆ.24:- ದೇಶದ ಎಲ್ಲಾ ಸೇತುವೆಗಳಲ್ಲೂ ಸುರಕ್ಷತೆಗಾಗಿ expansion joint (ಸೇತುವೆ ಹಿಗ್ಗುವಿಕೆಗಾಗಿ ಕಲ್ಪಿಸಿರುವ ಸಾಧನ) ಅಳವಡಿಸಲಾಗಿದ್ದು, ಕಪಿಲಾ ಸೇತುವೆಗೆ ಯಾವುದೇ ಧಕ್ಕೆ ಉಂಟಾಗಿಲ್ಲ ಎಂದು ರಾಷ್ಟ್ರೀಯ ಹೆದ್ದಾರಿ ಮುಖ್ಯ ಇಂಜಿನಿಯರ್ ಗಣೇಶ್ ಸ್ಪಷ್ಟಪಡಿಸಿದ್ದಾರೆ.

ತಿ.ನರಸೀಪುರ ಪಟ್ಟಣದ ಕಪಿಲಾ ಸೇತುವೆ ಬಿರುಕು ಬಿಟ್ಟಿದೆ ಎಂದು ಸಾಮಾಜಿಕ ಜಾಲ ತಾಣ ಹಾಗೂ ಪತ್ರಿಕೆಗಳಲ್ಲಿ ಪ್ರಕಟಗೊಂಡಿದ್ದ ಹಿನ್ನಲೆಯಲ್ಲಿ ಕ್ಷೇತ್ರದ ಶಾಸಕ ಎಂ.ಅಶ್ವಿನ್‍ಕುಮಾರ್ ಜೊತೆ ಸೇತುವೆಗೆ ನಿನ್ನೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ಸೇತುವೆಗಳು ಸುರಕ್ಷತೆಯಿಂದ ಇರಬೇಕಾದಲ್ಲಿ expansion joint ಅವಶ್ಯಕವಾಗಿ ಬೇಕೆ ಬೇಕು. ಇದನ್ನು ಅಳವಡಿಸಿದ್ದರಿಂದಲೇ ಸೇತುವೆ ಹಿಗ್ಗುವಿಕೆ ಹಾಗೂ ಕುಗ್ಗುವಿಕೆಗೆ ಸಹಾಯಕವಾಗಲಿದ್ದು, ಸೇತುವೆ ದೀರ್ಘಕಾಲ ಬಾಳಿಕೆ ಬರಲಿದೆ. ಕಪಿಲಾ ಸೇತುವೆ ಬಿರುಕು ಬಿಟ್ಟಿದೆ ಎಂಬುದು ಸತ್ಯಕ್ಕೆ ದೂರವಾಗಿದ್ದು, ಸೇತುವೆಗೆ ಅಳವಡಿಸಿದ್ದ ಕಬ್ಬಿಣ ತುಕ್ಕು ಹಿಡಿದಿದೆ. ಸಂಬಂಧಪಟ್ಟ ಗುತ್ತಿಗೆದಾರ ಶೀಘ್ರವೇ ಹೊಸ ಕಬ್ಬಿಣವನ್ನು ಅಳವಡಿಸಿ ಸಮಸ್ಯೆ ಬಗೆಹರಿಸಲಿದ್ದು, ಸೇತುವೆಗೆ ಯಾವುದೇ ಧಕ್ಕೆಯಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಶಾಸಕ ಎಂ.ಅಶ್ವಿನ್‍ಕುಮಾರ್ ಮಾತನಾಡಿ, ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ಸಮಸ್ಯೆ ಕಂಡು ಬಂದರೂ ಸಾರ್ವಜನಿಕರು ನನ್ನ ಗಮನಕ್ಕೆ ತಂದಲ್ಲಿ ಶೀಘ್ರವೇ ಸಮಸ್ಯೆಯನ್ನು ಬಗೆಹರಿಸಲಾಗುವುದೆಂದು ಭರವಸೆ ನೀಡಿದರು.

ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಕೃಷ್ಣರೆಡ್ಡಿ, ಎಇಇ ವಿನಯ್‍ಕುಮಾರ್, ಮುಖಂಡರಾದ ಶಂಭುದೇವನಪುರ ರಮೇಶ್, ಬೂದಹಳ್ಳಿ ಸಿದ್ದರಾಜು, ಬೇವಿನಹಳ್ಳಿ ಸತೀಶ್, ಚೇತನ್ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: