ಪ್ರಮುಖ ಸುದ್ದಿ

ಸಂತ್ರಸ್ತರ ಮಕ್ಕಳಿಗೆ ವಿವಿಧ ವಸತಿ ಶಾಲೆಗಳಲ್ಲಿ ಉಚಿತವಾಗಿ ಶಿಕ್ಷಣಕ್ಕೆ ವ್ಯವಸ್ಥೆ ಮಾಡಬೇಕು : ಸಚಿವ ಡಿ.ವಿ. ಸದಾನಂದಗೌಡ ಟ್ವೀಟ್

ರಾಜ್ಯ(ಬೆಂಗಳೂರು)ಆ.24:- ಪ್ರವಾಹದಲ್ಲಿ ಸಿಲುಕಿ ಕೊಡಗಿನ ಪರಿಹಾರ ಕೇಂದ್ರಗಳಲ್ಲಿರುವ ಶಾಲಾ ಮಕ್ಕಳು ವಿದ್ಯೆಯಿಂದ ವಂಚಿತರಾಗುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಈ ಶಾಲಾ ಮಕ್ಕಳ ಪಟ್ಟಿ ಮಾಡಿ ಅವರಿಗೆ ತಕ್ಷಣ ಅವಶ್ಯ ಪಠ್ಯಪುಸ್ತಕಗಳನ್ನು ಒದಗಿಸಬೇಕು. ಜತೆಗೆ ಈ ಮಕ್ಕಳ ಪೋಷಕರು ಒಪ್ಪಿದರೆ ರಾಜ್ಯದಲ್ಲಿರುವ ವಿವಿಧ ವಸತಿ ಶಾಲೆಗಳಲ್ಲಿ ಉಚಿತವಾಗಿ ಈ ಮಕ್ಕಳ ಶಿಕ್ಷಣಕ್ಕೆ ವ್ಯವಸ್ಥೆ ಮಾಡಬೇಕು ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಟ್ವೀಟರ್ ನಲ್ಲಿ ತಿಳಿಸಿದ್ದಾರೆ.

ಈ ಸಂಕಷ್ಟದ ಸಮಯದಲ್ಲಿ ಹೆತ್ತವರು ಮಾನಸಿಕವಾಗಿ ನೊಂದಿರುವುದರಿಂದ ಮಕ್ಕಳನ್ನು ದೂರದ ಊರಿಗೆ ಕಳುಹಿಸಲು ಒಪ್ಪದಿದ್ದರೆ ಲಭ್ಯವಿರುವ ಸ್ಥಳದಲ್ಲಿ ತಾತ್ಕಾಲಿಕ ಶಾಲೆ ಅಥವಾ ವಿಶೇಷ ವಸತಿ ಶಾಲೆಯನ್ನು ಆರಂಭಿಸುವಂತೆಯೂ ಅವರು ಟ್ವೀಟ್‌ ಮಾಡಿದ್ದಾರೆ.

ಪರಿಹಾರ ಕೇಂದ್ರಗಳಲ್ಲಿರುವ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸಮಿತಿ ರಚಿಸಿ ಅಗತ್ಯ ಆಗಬೇಕಾಗಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರೆ ಕೇಂದ್ರ ಸರ್ಕಾರದಿಂದ ಆಗಬೇಕಾದ ವ್ಯವಸ್ಥೆಗಳನ್ನು ಸಂಬಂಧಪಟ್ಟ ಇಲಾಖೆಗಳಿಂದ ಮಾಡಿಸುವ ಭರವಸೆಯನ್ನು ಕೇಂದ್ರ ಸಚಿವ ಸದಾನಂದಗೌ‌ಡರು ನೀಡಿದ್ದಾರೆ.

ಪರಿಹಾರ ಕೇಂದ್ರಗಳಲ್ಲಿರುವ ಮಕ್ಕಳ ವಿದ್ಯಾಭ್ಯಾಸಕ್ಕೆ ಗಮನ ನೀಡುವ ಅಗತ್ಯವಿದೆ. ಯಾವುದೇ ಮಕ್ಕಳು ವಿದ್ಯಾಭ್ಯಾಸದಿಂದ ವಂಚಿತರಾಗದಂತೆ ಎಚ್ಚರ ವಹಿಸಬೇಕು ಎಂದು ಅವರು ಟ್ವೀಟ್‌ನಲ್ಲಿ ಮನವಿ ಮಾಡಿದ್ದಾರೆ.

ವಸತಿ ಶಾಲೆಗೆ ದಾಖಲಾಗುವ ಮಕ್ಕಳಿಗೆ ದೈನಂದಿನ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಅವರ ಹೆಸರಿನಲ್ಲಿ ಖಾತೆ ತೆಗೆದು ಹಣವನ್ನು ಅವರ ದೈನಂದಿನ ಖರ್ಚಿಗೆ ಸಿಗುವಂತೆ ವ್ಯವಸ್ಥೆ ಮಾಡಬೇಕು ಎಂದು ಅವರು ಸಲಹೆ ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: