ಮೈಸೂರು

ಕರಾಮುವಿ 17ಕಾರ್ಯಕ್ರಮಗಳಿಗೆ ಯುಜಿಸಿ ಅನುಮತಿ : ಶೀಘ್ರದಲ್ಲಿ ಪ್ರವೇಶಾತಿ ಅಧಿಸೂಚನೆ : ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ

ಮೈಸೂರು,ಆ.24:- ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಯುಜಿಸಿಯು 2018-19ನೇ ಶೈಕ್ಷಣಿಕ ಸಾಲಿನಿಂದ 2022ರವರೆಗೆ ಐದು ವರ್ಷಗಳ ಅವಧಿಗೆ ಮಾನ್ಯತೆಯನ್ನು ಮಂಜೂರು ಮಾಡಿದ್ದು, ಹದಿನೇಳು ಅಂತರ್ ಗೃಹ ತಾಂತ್ರಿಕೇತರ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಅನುಮತಿ ನೀಡಿದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಡಿ.ಶಿವಲಿಂಗಯ್ಯ ತಿಳಿಸಿದರು.

ಕರಾಮುವಿ ಸಭಾಂಗಣದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಳೆದ ಐದು ವರ್ಷಗಳಿಂದ ವಿದ್ಯಾರ್ಥಿಗಳ ಭವಿಷ್ಯದ ಉಳಿವಿಗಾಗಿ ಹೋರಾಟ ನಡೆಸಿಕೊಂಡು ಬಂದಿದ್ದು, ಕೊನೆಗೂ  ಬಿ.ಎ, ಬಿಕಾಂ, ಬಿ.ಲಿಬ್.ಐಎಸ್ ಸಿ, ಎಂ.ಎ.(ಕನ್ನಡ), ಎಂ.ಎ.(ಇಂಗ್ಲಿಷ್), ಎಂ.ಎ.(ಹಿಂದಿ), ಎಂ.ಎ.(ಉರ್ದು), ಎಂ.ಎ(ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ), ಎಂ.ಎ.(ಇತಿಹಾಸ), ಎಂ.ಎ(ಅರ್ಥಶಾಸ್ತ್ರ), ಎಂ.ಎ.(ರಾಜ್ಯಶಾಸ್ತ್ರ), ಎಂ.ಎ.(ಸಾರ್ವಜನಿಕ ಆಡಳಿತ), ಎಂ.ಎ(ಸಮಾಜಶಾಸ್ತ್ರ), ಎಂ.ಎ(ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ), ಎಂ.ಕಾಂ, ಎಂ.ಲಿಬ್.ಐಎಸ್ಸಿ, ಎಂಎಸ್ಸಿ(ಪರಿಸರ ವಿಜ್ಞಾನ)ಕ್ಕೆ ಅನುಮತಿ ನೀಡಿದೆ ಎಂದರು. ಯುಜಿಸಿಯು 15ಅಂತರ್ ಗೃಹ ತಾಂತ್ರಿಕೇತರ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ನಿಯಂತ್ರಕ ಸಂಸ್ಥೆಗಳ ಪೂರ್ವಾನುಮತಿ ಕಾರಣಗಳಿಂದ  ಬಿಇಡಿ, ಎಂಬಿಎ, ಎಲ್ ಎಲ್ ಎಂಗಳಿಗೆ ಮಾನ್ಯತೆ ನೀಡಿಲ್ಲ.   ಅಧ್ಯಾಪಕರ ಕೊರತೆಯ ಕಾರಣಗಳಿಂದ ಎಂ.ಎ(ಸಂಸ್ಕೃತ), ಎಂ.ಎಸ್ಸಿ(ಜೀವ ರಸಾಯನಶಾಸ್ತ್ರ), ಎಂ.ಎಸ್ಸಿ(ರಸಾಯನ ಶಾಸ್ತ್ರ),ಎಂ.ಎಸ್ಸಿ(ಕ್ನಿನಿಕಲ್ ನ್ಯೂಟ್ರಿಷನ್ &ಡಯಬಿಟಿಕ್ಸ), ಎಂ.ಎಸ್ಸಿ(ಗಣಕ ವಿಜ್ಞಾನ), ಎಂ.ಎಸ್ಸಿ(ಭೂಗೋಳ ಶಾಸ್ತ್ರ), ಎಂ.ಎಸ್ಸಿ(ಮಾಹಿತಿ ವಿಜ್ಞಾನ), ಎಂ.ಎಸ್ಸಿ(ಗಣಿತಶಾಸ್ತ್ರ), ಎಂ.ಎಸ್ಸಿ(ಸೂಕ್ಷ್ಮಜೀವಶಾಸ್ತ್ರ), ಎಂ.ಎಸ್ಸಿ(ಭೌತಶಾಸ್ತ್ರ), ಎಂ.ಎಸ್ಸಿ(ಮನೋವಿಜ್ಞಾನ)ಕ್ಕೆ ಮಾನ್ಯತೆ ನೀಡಿಲ್ಲ. ಯುಜಿಸಿ ಮಾನ್ಯತೆ ಬಾಕಿ ಇರುವ 15ಕಾರ್ಯಕ್ರಮಗಳಿಗೆ ಮಾನ್ಯತೆ ಪಡೆಯಲು ಅಗತ್ಯ ದಾಖಲಾತಿಗಳೊಂದಿಗೆ ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ  ನೀಡಿದ್ದು, ಅದರಂತೆ ವಿವಿ ಶೀಘ್ರವಾಗಿ 15ಕಾರ್ಯಕ್ರಮಗಳಿಗೆ ಮಾನ್ಯತೆಯನ್ನು ಪಡೆಯಲು ಸಮರ್ಥನೆಯೊಂದಿಗೆ ಅಗತ್ಯ ದಾಖಲಾತಿಗಳನ್ನು ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗಕ್ಕೆ ಸಲ್ಲಿಸಿ ಮಾನ್ಯತೆ ಪಡೆಯಲಾಗುವುದು ಎಂದು ತಿಳಿಸಿದರು. ವಿವಿ ವ್ಯಾಪ್ತಿಯಲ್ಲಿ ಜಿಲ್ಲಾ ಮಟ್ಟದಲ್ಲಿ 17ಪ್ರಾದೇಶಿಕ ಕೇಂದ್ರಗಳು ಹಾಗೂ 51 ವಿವಿಧ ಅಧ್ಯಯನ ಕೇಂದ್ರಗಳನ್ನು ಗುರುತಿಸಿ ಅನುಮೋದಿಸಲಾಗಿದೆ.ಅಧ್ಯಯನ ಕೇಂದ್ರಗಳಿ ವಿವಿಧ ವಿವಿಗಳಿಂದ ಸಂಯೋಜನೆ ಪಡೆದ ಪ್ರಥಮ ದರ್ಜೆ ಕಾಲೇಜುಗಳಾಗಿದ್ದು, ಈ ಅಧ್ಯಯನ ಕೇಂದ್ರಗಳಲ್ಲಿ ಸಾಕಷ್ಟು ನುರಿತ ಬೋಧಕರು ಮತ್ತು ಮೂಲಭೂತ ಸೌಕರ್ಯಗಳು ಇರುತ್ತವೆ. ಬೆಂಗಳೂರು(ಚಾಮರಾಜಪೇಟೆ), ಬೆಂಗಳೂರು(ಬಿಟಿಎಂ 2ನೇ ಹಂತ), ಬೆಂಗಳೂರು(ಮಲ್ಲೇಶ್ವರಂ), ಚಾಮರಾಜನಗರ, ದಾವಣಗೆರೆ, ಧಾರವಾಡ, ಗುಲ್ಬರ್ಗ, ಹಾಸನ,ಶಿವಮೊಗ್ಗ, ಮಂಗಳೂರು, ತುಮಕೂರು, ಮಂಡ್ಯ, ಕೋಲಾರ, ರಾಮನಗರ, ಚಿಕ್ಕಮಗಳೂರು, ಉಡುಪಿ, ಕಾರವಾರ ಪ್ರಾದೇಶಿಕ ಕೇಂದ್ರಗಳಾಗಿವೆ. 2018-19ನೇ ಶೈಕ್ಷಣಿಕ ವರ್ಷಕ್ಕೆ ವಿವಿಧ ಕಾರ್ಯಕ್ರಮಗಳಿಗೆ ಪ್ರವೇಶಾತಿಗೆ ಸಂಬಂಧಿಸಿದಂತೆ ವಿವಿಯ ಅಧಿಕೃತ ವೆಬ್ ಸೈಟ್  www.ksoumysore.karnataka.gov.in ನಲ್ಲಿ ವಿವರಣಾ ಪುಸ್ತಕ, ಪ್ರವೇಶಾತಿಯ ಅರ್ಜಿಯ ನಮೂನೆ, ಮತ್ತು ಶುಲ್ಕ ಪಾವತಿಗಾಗಿ ಚಲನ್ ಗಳನ್ನು ಅಪ್ ಲೋಡ್ ಮಾಡಲಾಗುವುದು. ವಿದ್ಯಾರ್ಥಿಗಳು ಅದನ್ನು ಡೌನ್ ಲೋಡ್ ಮಾಡಿಕೊಂಡು ಯಾವುದಾದರೂ ಸ್ಟೇಟ್ ಬ್ಯಾಂಕ್ ಆಫ್ ಇಡಿಯಾದ ಶಾಖೆಯಲ್ಲಿ ಶುಲ್ಕವನ್ನು ಪಾವತಿಸಿ ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯವಾದ ಅಂಕಪಟ್ಟಿ ಮತ್ತು ಇತರೆ ಪ್ರಮಾಣಪತ್ರಗಳೊಂದಿಗೆ ಆಯ್ಕೆ ಮಾಡಿಕೊಳ್ಳುವ ವಿವಿಯ ಪ್ರಾದೇಶಿಕ ಕೇಂದ್ರಕ್ಕೆ ಸಲ್ಲಿಸಿ ಸ್ವೀಕೃತಿ ಪಡೆಯಬಹುದು ಎಂದರು. ಪ್ರವೇಶಾತಿಯನ್ನು ಆರಂಭಿಸಲು ಆದಷ್ಟು ಶೀಘ್ರದಲ್ಲಿಯೇ ಅಧಿಸೂಚನೆ ಹೊರಡಿಸಲಾಗುವುದು. ಪ್ರವೇಶಾತಿಯ ಕೊನೆಯ ದಿನಾಂಕ ಅಕ್ಟೋಬರ್ 1 ಆಗಿರುತ್ತದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಡೀನ್ ಪ್ರೊ.ಜಗದೀಶ್, ಪರೀಕ್ಷಾಂಗ ಕುಲಸಚಿವ ಡಾ.ರಂಗಸ್ವಾಮಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: