ಪ್ರಮುಖ ಸುದ್ದಿಮೈಸೂರು

ಬಿಜೆಪಿ ಕಾರ್ಯಕರ್ತರ ಮಾರಾಮಾರಿ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿ ಎಚ್.ವಿ. ರಾಜೀವ್ ಹಾಗೂ ಮಾಜಿ ಸಚಿವ ಎಸ್‍.ಎ.ರಾಮದಾಸ್ ಬೆಂಬಲಿಗರ ಮಂಗಳವಾರ ಮಧ್ಯರಾತ್ರಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆ.ಆರ್. ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಬಿಜೆಪಿ ಕಾರ್ಯಕರ್ತ ರಂಗನಾಥ್ ಎಂಬುವರ ಮೇಲೆ ಸಾಗರ್ ಚಕ್ರವರ್ತಿ ಸೇರಿ ಮೂರು ಮಂದಿ ಹಲ್ಲೆ ನಡೆಸಿದ್ದರು ಎನ್ನಲಾಗಿದ್ದು, ಸಾಗರ್ ಮತ್ತು ಅಂಬರೀಶ್ ಪೊಲೀಸರ ವಶದಲ್ಲಿದ್ದಾರೆ.

ಮಂಗಳವಾರ ಮಧ್ಯರಾತ್ರಿ ಅಗ್ರಹಾರದ ರಾಮಾನುಜ ರಸ್ತೆಯ ನಿವಾಸಿ ರಂಗನಾಥ ನಿವಾಸಕ್ಕೆ ನುಗ್ಗಿದ ಸಾಗರ್ ನೇತೃತ್ವದ ಗುಂಪು ಅವರನ್ನು ರಸ್ತೆಗೆಳೆದು ತಂದು ಹಲ್ಲೆ ನಡೆಸಿತ್ತು. ತೀವ್ರವಾಗಿ ಗಾಯಗೊಂಡಿರುವ ರಂಗನಾಥ್ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಂಗನಾಥ್ ಹಾಗೂ ಸಾಗರ್ ನೆರೆಮನೆಯ ನಿವಾಸಿಗಳಾಗಿದ್ದಾರೆ.

ರಾಜೀವ್ ಜೊತೆ ಗುರುತಿಸಿಕೊಂಡಿದ್ದರಿಂದಲೇ ಈ ಹಲ್ಲೆ ನಡೆಸಲಾಗಿದೆ. ಈ ಹಿಂದೆಯೂ ಸಾಗರ್ ಹಲವು ಬಾರಿ ರಾಜೀವ್ ಜೊತೆ ಕೆಲಸ ಮಾಡದಂತೆ ಒತ್ತಡ ಹೇರಿದ್ದರು ಎಂದು ಠಾಣೆಗೆ ನೀಡಿರುವ ದೂರಿನಲ್ಲಿ ರಂಗನಾಥ್ ತಿಳಿಸಿದ್ದಾರೆ.

Leave a Reply

comments

Related Articles

error: