ಮೈಸೂರು

‘ಮಹಾಲಕ್ಷ್ಮಿ ಮನೆಗೆ ಬಾರಮ್ಮ’ : ಹೆಂಗಳೆಯರಿಂದ ವರಮಹಾಲಕ್ಷ್ಮಿಗೆ ವಿಶೇಷ ಪೂಜೆ

ಮೈಸೂರು,ಆ.24:- ಹಿಂದೂಗಳಲ್ಲಿ ವರಮಹಾಲಕ್ಷ್ಮಿ ವೃತ ಅತ್ಯಂತ ಪವಿತ್ರವಾದದ್ದು ಎಂಬ ಭಾವನೆಯಿದೆ. ಈ ದಿನ ಹಣ ಸಂಪತ್ತನ್ನು  ದೇವಿ ಲಕ್ಷ್ಮಿಗೆ ಸಮರ್ಪಿಸುವ ದಿನವಾಗಿದೆ. ವರಲಕ್ಷ್ಮಿಯು ಮಹಾಲಕ್ಷ್ಮಿಯ ಒಂದು ರೂಪವಾಗಿದ್ದು, ಈಕೆ ಭಕ್ತರ ಮನೋಭಿಲಾಷೆಗಳನ್ನು ಈಡೇರಿಸುತ್ತಾಳೆಂಬ ಪ್ರತೀತಿಯಿದೆ. ಮೈಸೂರಿನ ಹಲವೆಡೆ ವರಮಹಾಲಕ್ಷ್ಮಿ ಹಬ್ಬ ಜೋರಾಗಿಯೇ ನಡೆದಿದೆ.

ಮಹಿಳೆಯರು ಮುಂಜಾನೆಯಿಂದಲೇ ಮನೆಯನ್ನು ಸ್ವಚ್ಛಗೊಳಿಸಿ, ಮುಂಬಾಗಿಲಿಗೆ ರಂಗವಲ್ಲಿಯನ್ನಿಟ್ಟು, ಮನೆಯನ್ನು ಬಾಳೆಕಂದು, ಮಾವಿನ ಎಲೆಯ ತೋರಣಗಳಿಂದ ಸಿಂಗರಿಸಿದ್ದಾರೆ. ದೇವರ ಮನೆಯನ್ನು ಶುಭ್ರಗೊಳಿಸಿ, ಅಲ್ಲಿಯೂ ರಂಗವಲ್ಲಿ ಇಟ್ಟು  ದೇವಿಯ ವಿಗ್ರಹವನ್ನಿಟ್ಟು ದೇವಿಯನ್ನು ಆಭರಣ, ಹೂಗಳಿಂದ ಅಲಂಕರಿಸಿ, ದೀಪಧೂಪದಾರತಿ ಬೆಳಗಿ,ಭಜನೆ, ಹಾಡುಗಳ ಮೂಲಕ ವರಲಕ್ಷ್ಮಿಯನ್ನು ಪ್ರಾರ್ಥಿಸಿದ್ದಾರೆ.  ವಿಶೇಷ ಹಬ್ಬದಡುಗೆಯನ್ನು ಮಾಡಿ ಲಕ್ಷ್ಮಿಯನ್ನು ಆರಾಧಿಸಿದ್ದಾರೆ. ಮೈಸೂರಿನ ದೇವಸ್ಥಾನಗಳಲ್ಲಿಯೂ ವಿಶೇಷ ಪೂಜೆಗಳು ನಡೆದಿದೆ.

ಶ್ರಾವಣ ಮಾಸದ ಶುಕ್ಲಪಕ್ಷದ ಎರಡನೇ ಶುಕ್ರವಾರದಂದು ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸಲಾಗುತ್ತಿದ್ದು, ಈ ವೃತವನ್ನಾಚರಿಸುವವರ ಮನೆಗಳಲ್ಲಿ ದಾರಿದ್ರ್ಯ ದೂರಾಗಿ ಕುಟುಂಬದಲ್ಲಿ ಸುಖ-ಸಂಪತ್ತುಗಳು ನೆಲೆಸುತ್ತವೆ. ಸಂತಾನವಿಲ್ಲದ ದಂಪತಿಗಳು ವೃತ ಮಾಡಿದರೆ  ಸಂತಾನ ಪ್ರಾಪ್ತಿಯಾಗಲಿದ್ದು, ಸುಮಂಗಳೆಯರು ವೃತ ಮಾಡಿದರೆ ಪತಿಯ ಆಯಸ್ಸು ಹೆಚ್ಚಲಿದೆ ಎಂದು ಪುರಾಣಗಳು ತಿಳಿಸುತ್ತವೆ. (ಎಸ್.ಎಚ್)

Leave a Reply

comments

Related Articles

error: