
ಪ್ರಮುಖ ಸುದ್ದಿ
ಕರ್ತವ್ಯ ಲೋಪ: ಇನ್ಸಪೆಕ್ಟರ್ ಸೇರಿ ಮೂವರು ಸಿಬ್ಬಂದಿ ಅಮಾನತು
ರಾಜ್ಯ(ಬೆಂಗಳೂರು)ಆ.24:- ಕರ್ತವ್ಯಲೋಪವೆಸಗಿದ ಆರೋಪದ ಹಿನ್ನೆಲೆಯಲ್ಲಿ ಕೊಡಿಗೇಹಳ್ಳಿ ಇನ್ಸಪೆಕ್ಟರ್ ಸೇರಿ ಮೂವರು ಸಿಬ್ಬಂದಿಗಳನ್ನು ಈಶಾನ್ಯ ವಲಯ ಡಿಸಿಪಿ ಕಲಾ ಕೃಷ್ಣಮೂರ್ತಿ ಅಮಾನತುಗೊಳಿಸಿದ್ದಾರೆ.
ದರೋಡೆಕೋರರಿಂದ ಚಾಕು ಇರಿತಕ್ಕೆ ಒಳಗಾದ ಬಗ್ಗೆ ದೂರು ಬಂದರೂ ಎಫ್ಐಆರ್ ದಾಖಲಿಸಿಕೊಳ್ಳದೆ ಇದ್ದ ಹಿನ್ನೆಲೆಯಲ್ಲಿ ಕೊಡಿಗೇಹಳ್ಳಿ ಇನ್ಸಪೆಕ್ಟರ್ ರಾಜಣ್ಣ, ಎಎಸ್ಐ ರಾಜಪ್ಪ ಮತ್ತು ಪೇದೆ ಜಯರಾಮ್ರ ವಿರುದ್ಧ ಕರ್ತವ್ಯಲೋಪ ಆರೋಪ ಕೇಳಿ ಬಂದಿತ್ತು. ಆ.19ರ ರಾತ್ರಿ 10 ಗಂಟೆ ಸುಮಾರಿಗೆ ಗೌರಿಬಿದನೂರಿನ ಚಂದ್ರಶೇಖರ್ ಎಂಬವರಿಗೆ ಬೈಕಿನಲ್ಲಿ ಬಂದ ದರೋಡೆಕೋರರು ಚಾಕು ಇರಿದಿದ್ದರು. ತೀವ್ರ ರಕ್ತಸ್ರಾವದಿಂದ ಚಂದ್ರಶೇಖರ್ ಆಸ್ಪತ್ರೆಗೆ ದಾಖಲಾದಾಗ ಆಸ್ಪತ್ರೆ ಸಿಬ್ಬಂದಿ ಇನ್ಸಪೆಕ್ಟರ್ ರಾಜಣ್ಣರಿಗೆ ಮಾಹಿತಿ ರವಾನಿಸಿದ್ದರು. ಆದರೂ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಹೇಳಿಕೆ ದಾಖಲಿಸಿಕೊಳ್ಳದೆ, ಎಫ್ಐಆರ್ ಕೂಡ ಹಾಕದೆ ಕರ್ತವ್ಯಲೋಪ ಮಾಡಿದ್ದರು. ಎರಡು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಚಂದ್ರಶೇಖರ್ ಆಸ್ಪತ್ರೆಯಲ್ಲೇ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)